Homeಕರ್ನಾಟಕಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

“ಕರ್ನಾಟಕ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರೆಂಟಿಗಳನ್ನು ಕೊಟ್ಟಂತೆ ಮಾಡಿ ಜನರಿಂದ ಅದರ ಹತ್ತುಪಟ್ಟು ಕಿತ್ತುಕೊಳ್ಳುತ್ತಿದೆ. ಅಲ್ಲದೆ, ಸಂಪದ್ಭರಿತವಾಗಿದ್ದ ರಾಜ್ಯವನ್ನು ಆರ್ಥಿಕ ಅಧಃಪತನದತ್ತ ಕೊಂಡೊಯ್ದಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಅಧಿಕಾರಕ್ಕೆ ಬರುವ ಮುನ್ನ “ಉಚಿತ ಪ್ರಯಾಣ” ಎಂದು ಅಬ್ಬರದ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್ ಸರ್ಕಾರ, ಇದೀಗ KSRTC, BMTC ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ಸಂಪೂರ್ಣ ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸಾರಿಗೆ ಸಂಸ್ಥೆಗಳ ಬಳಿ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡ ಸರ್ಕಾರ ನಿಗಮಗಳನ್ನು ನಷ್ಟದ ಕೂಪಕ್ಕೆ ತಳ್ಳಿದೆ. ಲಾಭದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೂರುವರೆ ವರ್ಷದಲ್ಲೇ ಸಂಪೂರ್ಣ ನಷ್ಟದಲ್ಲಿ ಮುಳುಗಿ ಹೋಗಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಆರ್ಥಿಕತೆಯನ್ನೇ ಹಾಳುಗೆಡವಿದ ಕಾಂಗ್ರೆಸ್ ಸರ್ಕಾರ, ತನ್ನ ಅವೈಜ್ಞಾನಿಕತೆ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ಹಾಲು, ಮೊಸರು, ತುಪ್ಪ ಆಯಿತು ಈಗ ಬಸ್ ಪ್ರಯಾಣ ದರವನ್ನೂ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಏಟಿನ ಮೇಲೆ ಏಟು ಕೊಡುತ್ತಿದೆ ಎಂದು ಖಂಡಿಸಿದರು.

ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಆರ್ಥಿಕ ಅಧಃಪತನದತ್ತ ಕೊಂಡೊಯ್ದು ದುರಾಡಳಿತ ಮೆರೆದಿದೆ. ರಾಜ್ಯದ ಹಿತವನ್ನು ಕಡೆಗಣಿಸಿದೆ. ಶ್ರೀಸಾಮಾನ್ಯರ ಪರವಾಗಿರಬೇಕಿದ್ದ ಸರ್ಕಾರವೇ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರಿಂದ ಅದರ ಹತ್ತು ಪಟ್ಟು ಕಿತ್ತುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಗತಿ ಶೂನ್ಯ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿ ಸಂಪೂರ್ಣ ಶೂನ್ಯವಾಗಿದೆ. ಅಭಿವೃದ್ಧಿ ಕಾರ್ಯ, ಬೊಕ್ಕಸ ಬೆಳೆಸುವುದನ್ನು ಬಿಟ್ಟು ಖಜಾನೆ ಬರಿದು ಮಾಡಿದೆ ಎಂದು ಆರೋಪಿಸಿದ್ದಾರೆ.

ನಂದಿನಿ‌ ಹಾಲು‌, ಮೊಸರು, ತುಪ್ಪದ ಬೆಲೆಯನ್ನು ತುಟ್ಟಿ ಮಾಡಿದ ಕೆಲವೇ ದಿನದಲ್ಲಿ ಬಸ್ ಪ್ರಯಾಣ ದರವನ್ನು ಬೇಕಾಬಿಟ್ಟಿ ಹೆಚ್ಚಿಸಿ ಬಡವರು, ವಿದ್ಯಾರ್ಥಿಗಳು, ಸಣ್ಣ ಸಂಬಳದ ಉದ್ಯೋಗಿಗಳ ಮೇಲೂ ಬರೆ ಎಳೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೆಡೆ ‘ಉಚಿತ’ ಎನ್ನುತ್ತಾ ಇನ್ನೊಂದೆಡೆ ದೈನಂದಿನ ಅತ್ಯಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಸಿ ಜನರ ಜೇಬಿನಿಂದ ಅದರ ಹತ್ತು ಪಟ್ಟು ದಂಡ ವಸೂಲಿ ಮಾಡುತ್ತಿರುವುದು ಯಾವ ಸೀಮೆಯ ಗ್ಯಾರಂಟಿ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments