Homeಕರ್ನಾಟಕಮೂವರು ಡಿಸಿಎಂ ನೇಮಕ ಚರ್ಚೆ ನಡೆದಿಲ್ಲ, ಅದೆಲ್ಲ ಗಾಳಿಸುದ್ದಿ: ಗೃಹ ಸಚಿವ ಪರಮೇಶ್ವರ್‌

ಮೂವರು ಡಿಸಿಎಂ ನೇಮಕ ಚರ್ಚೆ ನಡೆದಿಲ್ಲ, ಅದೆಲ್ಲ ಗಾಳಿಸುದ್ದಿ: ಗೃಹ ಸಚಿವ ಪರಮೇಶ್ವರ್‌

ಮೂವರು ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಗಾಳಿಸುದ್ದಿಯಾಗಿದ್ದು, ಈ ಕುರಿತು ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ‌ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಸಿಎಂ ನೇಮಕದ ಬಗ್ಗೆ ಸಚಿವರು ವೈಯಕ್ತಿಕ ಅಭಿಪ್ರಾಯವನ್ನು ಹೇಳಿರುತ್ತಾರೆ. ರಾಜಣ್ಣ ಅವರ ಹೇಳಿಕೆಯೂ ಅಷ್ಟೆ. ಅವರ ದೃಷ್ಟಿಯಲ್ಲಿ ಒಳ್ಳೆಯದು ಇರಬಹುದು. ಹೀಗಾಗಿ ಹೇಳಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ” ಎಂದರು.

ಸಚಿವರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, “ಒಬ್ಬೊಬ್ಬರು ಒಂದೊಂದು ಕಾರಣ ಇಟ್ಟುಕೊಂಡು ದೆಹಲಿಗೆ ಹೋಗುತ್ತಾರೆ. ಈ ವೇಳೆ ಪಕ್ಷದ ಮುಖ್ಯ ಕಚೇರಿಗೆ ಹೋಗಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡುವುದು, ಸಾಧ್ಯವಾದರೆ ಅಧ್ಯಕ್ಷರ ಜತೆ ಚರ್ಚಿಸುತ್ತಾರೆ. ಆಡಳಿತದಲ್ಲಿರುವಾಗ ಪಕ್ಷದ ಹೈಕಮಾಂಡ್ ಸಲಹೆಗಳನ್ನು ಸ್ವೀಕರಿಸಬೇಕು. ಇದೆಲ್ಲ ಸಾಮಾನ್ಯವಾಗಿ ನಡೆಯುವ ಬೆಳವಣಿಗೆ. ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ” ಎಂದು ಹೇಳಿದರು.

“ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಯಾರು ಹೇಳಿಲ್ಲ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಮಾಧ್ಯಮದಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಸೂಚಿಸಿದರೆ ಮುಂದಿನ ತೀರ್ಮಾನದ ಬಗ್ಗೆ ತಿಳಿಸುತ್ತೇನೆ” ಎಂದರು.

“ಬಾಂಬ್ ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಕಸ್ತೂರು ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೂ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಐಪಿ ಅಡ್ರೆಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments