Homeಕರ್ನಾಟಕಬಿಜೆಪಿಯಲ್ಲಿ ಗಂಡಸರಿಲ್ಲ, ಹೀಗಾಗಿ ಕೇಂದ್ರದ ಅನ್ಯಾಯದ ವಿರುದ್ಧ ನಾವು ದನಿ ಎತ್ತಬೇಕಿದೆ: ಎಚ್‌ ಸಿ ಬಾಲಕೃಷ್ಣ

ಬಿಜೆಪಿಯಲ್ಲಿ ಗಂಡಸರಿಲ್ಲ, ಹೀಗಾಗಿ ಕೇಂದ್ರದ ಅನ್ಯಾಯದ ವಿರುದ್ಧ ನಾವು ದನಿ ಎತ್ತಬೇಕಿದೆ: ಎಚ್‌ ಸಿ ಬಾಲಕೃಷ್ಣ

ಬಿಜೆಪಿಯಲ್ಲಿ ಗಂಡಸರಿದ್ದರೆ ಅನ್ಯಾಯದ ವಿರುದ್ಧ ದನಿ ಎತ್ತಲಿ. ನಮ್ಮ ಪಾಲಿನ ಅನುದಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ನೋಡಿಯಾದರೂ ಭಾಗಿಯಾಗಲಿ ಎಂದು ಮಾಗಡಿ ಶಾಸಕ ಎಚ್‌ ಸಿ ಬಾಲಕೃಷ್ಣ ಸವಾಲು ಹಾಕಿದರು.

ರಾಮನಗರ ತಾಲ್ಲೂಕಿನ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಸಚಿವರು ಹಾಗೂ ಸಂಸದರು, ದೆಹಲಿಗೆ ಹೋಗಿ ಟಿ.ಎ ಮತ್ತು ಡಿ.ಎ ತಗೊಂಡು ಬರ್ತಾರಷ್ಟೆ. ಇವರೆಲ್ಲಾ ಷೋ ಪೀಸ್‌ಗಳು. ತಮ್ಮ ಹಕ್ಕಿಗಾಗಿ ತಮಿಳುನಾಡು ಸಂಸದರು ಹೇಗೆ ದನಿ ಎತ್ತುತ್ತಾರೆ ಎಂಬುದನ್ನು ನೋಡಿ ಕಲಿಯಲಿ” ಎಂದು ಕುಟುಕಿದರು.

“ಬಿಜೆಪಿಯವರು ದನಿ ಕಳೆದುಕೊಂಡಿರುವುದರಿಂದ ಅನುದಾನಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ಅರ್ಥ ಬಿಜೆಪಿಯಲ್ಲಿ ಗಂಡಸರಿಲ್ಲ ಎಂದರ್ಥ. ಅನುದಾನದ ವಿಷಯದಲ್ಲಿ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ದನಿ ಎಳುತ್ತದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿರುವುದನ್ನು, ಬಿಜೆಪಿಯವರು ತಿರುಚಿದ್ದಾರೆ ಅಷ್ಟೇ” ಎಂದರು.

“ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವ ದೇಶದ ಎರಡನೇ ರಾಜ್ಯ ನಮ್ಮದು. ಹೀಗಿದ್ದರೂ, ನಮಗೆ ಕೊಡಬೇಕಾದ ಅನಯದಾನ ಕೊಡುತ್ತಿಲ್ಲ. ರಾಜ್ಯದ ಬಿಜೆಪಿ ಸಚಿವರು ಮತ್ತು ಸಂಸದರಿಗೆ ಪ್ರಧಾನಿ ಮೋದಿ ಅವರ ಮುಂದೆ ನಿಲ್ಲುವುದಕ್ಕೂ ಆಗುವುದಿಲ್ಲ. ವೈಯಕ್ತಿಕ ವರ್ಚಸ್ಸಿಲ್ಲದ ಅವರು, ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ” ಎಂದು ಟೀಕಿಸಿದರು.

“ನಮಗಾಗಿರುವ ಅನ್ಯಾಯಕ್ಕೆ ಹೋರಾಟ ಮಾಡಬೇಕಿದೆ. ಈ ವಿಷಯದಲ್ಲಿ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದರು.

“ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಸುರೇಶ್ ಅವರನ್ನು ಎದುರಿಸುವಂತಹ ಅಭ್ಯರ್ಥಿ ಇಲ್ಲ. ಅವರ ವಿರುದ್ಧ ಮೈತ್ರಿ ತಂತ್ರ ಫಲ ನೀಡುವುದಿಲ್ಲ. ಬೇಕಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಲಿ. ಆನಂತರ ಮಾತನಾಡೋಣ. ಸಂಸದರು ಜನಸಾಮಾನ್ಯರ ಜೊತೆ ಬೆರೆತು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿ ಕೊಟ್ಟಿದ್ದಾರೆ” ಎಂದು ತಿರುಗೇಟು ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments