ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಚುನಾವಣಾ ಆಯೋಗದ ಮೂಲಕ ನಡೆಯುತ್ತಿರುವ “ಮತಗಳ್ಳತನ” ವಿರುದ್ಧ ಹೋರಾಟ ಮುಂದುವರಿಸುವುದಾಗಿ ಆರ್ಭಟಿಸಿದರು.
“ರಾಷ್ಟ್ರದ ಸಂವಿಧಾನ ಪದವಿಯಲ್ಲಿರುವ ಚುನಾವಣಾಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರ ವಿರುದ್ಧ ಈ ಹೋರಾಟಕ್ಕೆ ರಾಹುಲ್ ಗಾಂಧಿ ಅವರು ಕರೆ ನೀಡಿದ್ದಾರೆ. ನಾವು ಹೋರಾಟ ಮಾಡುತ್ತಿರುವುದು ಸಂವಿಧಾನ ರಕ್ಷಣೆಗಾಗಿ. ಇದು ನಮ್ಮ ಕರ್ತವ್ಯ” ಎಂದು ಒತ್ತಿ ಹೇಳಿದರು.
2024ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಆರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಹೇಳಿದರು. ಬಿಹಾರದಲ್ಲಿ 64 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರನ್ನು ಕೈಬಿಟ್ಟಿದ್ದು, ಪಶ್ಚಿಮ ಬಂಗಾಳದಲ್ಲಿ 38 ಲಕ್ಷ ಮತದಾರರಿಗೆ ನೋಟೀಸ್ ನೀಡಿ ಮತದಾನದಿಂದ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು. ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅರ್ಹ ಮತದಾರರನ್ನು ಕೈಬಿಡಲಾಗಿದೆ ಎಂದರು.
ಕರ್ನಾಟಕದಲ್ಲಿ 1.07 ಕೋಟಿ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿದ್ದು, ಅದರಲ್ಲಿ ನಕಲಿ ಮತದಾರರು 70 ಲಕ್ಷ ಮತ್ತು ಇತರೆ 38 ಲಕ್ಷ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದರು. “ಈ ದೇಶದಲ್ಲಿ ಹುಟ್ಟಿರುವ ನಾಗರಿಕರ ಹಕ್ಕನ್ನು ಕಸಿಯಲು ಯಾರಿಗೂ ಹಕ್ಕಿಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿ ಅವರು 2024ರಿಂದಲೂ ಮತಗಳ್ಳತನದ ಬಗ್ಗೆ ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ನೆನಪಿಸಿದ ಅವರು, ಈ ಹಿಂದೆ ಫ್ರೀಡಂ ಪಾರ್ಕ್‌ನಲ್ಲೇ ಮಹದೇವಪುರ, ಆಳಂದ ಮತ್ತು ಮಹಾರಾಷ್ಟ್ರದ ಮತಗಳ್ಳತನ ವಿರುದ್ಧ ಧ್ವನಿ ಎತ್ತಿದ್ದರು ಎಂದು ಹೇಳಿದರು. ಚುನಾವಣಾ ಆಯುಕ್ತರು ಬಿಜೆಪಿಗೆ ನೆರವಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿವರಿಸಿದ್ದರೂ ಆರಂಭದಲ್ಲಿ ಯಾರೂ ಪರಿಗಣಿಸಿರಲಿಲ್ಲ. ನಂತರ ಆಯೋಗವೇ ಅವರಿಂದ ಕ್ಷಮೆ ಕೋರುವಂತೆ ಆಗ್ರಹಿಸಿತ್ತು ಎಂದು ಹೇಳಿದರು.
“ಪ್ರಜಾಪ್ರಭುತ್ವದ ಭದ್ರ ಬುನಾದಿ ಮತದಾರರ ಪಟ್ಟಿ. ಐದು ವರ್ಷಕ್ಕೊಮ್ಮೆ ಬೇಕಾದ ಸರ್ಕಾರವನ್ನು ಆರಿಸುವ ಶಕ್ತಿಯನ್ನು ಸಂವಿಧಾನ ನೀಡಿದೆ. ಅದನ್ನು ಬುಡಮೇಲು ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ” ಎಂದು ಆರೋಪಿಸಿದರು. ಜೆನ್ ಜಿ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ ಅವರು, ರಾಜೀವ್ ಗಾಂಧಿ ಅವರು ಮತದಾನದ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಿದ್ದನ್ನು ನೆನಪಿಸಿದರು.
ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರು ಇದ್ದು, ನಿರ್ಧಾರಗಳನ್ನು ಬಹುಮತದಿಂದ ತೆಗೆದುಕೊಳ್ಳಬೇಕು. ಆದರೆ ಕಳೆದ 10 ತಿಂಗಳಲ್ಲಿ 14 ಬಾರಿ ಇಬ್ಬರು ಆಯುಕ್ತರು ಭಿನ್ನಮತ ವ್ಯಕ್ತಪಡಿಸಿದ್ದರೂ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಫಾರಂ 6ಕ್ಕೆ ತಿದ್ದುಪಡಿ ತಂದಿದ್ದಾರೆ ಎಂದು ಆರೋಪಿಸಿದರು. “ಜ್ಞಾನೇಶ್ ಕುಮಾರ್ ಜೊತೆಗೆ ಇನ್ನಿಬ್ಬರು ಗೌಪ್ಯ ಆಯುಕ್ತರಾದ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಮಾತು ಕೇಳಿ ದೇಶದಲ್ಲಿ 13 ಕೋಟಿ ಮತದಾರರ ಹೆಸರನ್ನು ಕೈಬಿಡಲಾಗಿದೆ” ಎಂದು ಹೇಳಿದರು.
2023ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಕೈಬಿಟ್ಟು ಕೇಂದ್ರ ಮಂತ್ರಿಯನ್ನು ಸೇರಿಸಲಾಗಿದೆ. ಇದರಿಂದ ನ್ಯಾಯ ಸಿಗುವುದಿಲ್ಲ ಎಂದು ಆಕ್ಷೇಪಿಸಿದರು. “ನಮ್ಮ ಹೋರಾಟ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಮುಂದುವರಿಯಲಿದೆ. ಸೋಮವಾರದಿಂದ ಜಿಲ್ಲಾ ಮಟ್ಟದಲ್ಲಿ ಈ ಹೋರಾಟ ಮುಂದುವರಿಯಬೇಕು” ಎಂದು ಹರಿಪ್ರಸಾದ್ ಕರೆ ನೀಡಿದರು.
ಚುನಾವಣಾ ಆಯೋಗದ ಅವ್ಯವಹಾರಗಳಿಗೆ ಕಡಿವಾಣ ಹಾಕಲು ನ್ಯಾಯಾಂಗದ ಪಾತ್ರವನ್ನು ಒತ್ತಾಯಿಸಿ ಮಾತನಾಡಿದ ಹರಿಪ್ರಸಾದ್ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಬುಡಮೇಲು ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.


