ಬೆಂಗಳೂರು: ನಾಟಿ ಕೋಳಿ ಸಾರು ಜೊತೆ ಮದ್ಯ ಸೇವನೆ ಮಾಡಲು ಬಿಡದ ಕಾರಣಕ್ಕೆ ತಂದೆಯೊಬ್ಬ ಹೆತ್ತ ಮಗನನ್ನೇ ಕೊಲೆ ಮಾಡಿರುವ ದಾರುಣ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ರ ಗೋವಿಂದರಾಜು ಕೊಲೆಗೈದ ತಂದೆ ನಾಗರಾಜು ಅಲಿಯಾಸ್ ವೆಂಕಟರಾಜು ಪೊಲೀಸರಿಗೆ ಶರಣಾಗಿದ್ದಾನೆ.
ಮದ್ಯದ ಚಟಕ್ಕೆ ಬಿದ್ದಿದ್ದ ನಾಗರಾಜು, ಪತ್ನಿ ಗೌರಮ್ಮಗೆ ನಾಟಿಕೋಳಿ ಸಾರು ಮಾಡುವಂತೆ ತಿಳಿಸಿದ್ದಾನೆ. ಇದಕ್ಕೆ ಬೇಸರಗೊಂಡ ಪುತ್ರ ಗೋವಿಂದರಾಜು ಅಡುಗೆ ಮಾಡದಂತೆ ತಾಯಿಯನ್ನು ತಡೆದಿದ್ದಾನೆ.
ಈ ವೇಳೆ ಕೆಂಡಾಮಂಡಲಗೊಂಡಿರುವ ನಾಗರಾಜು ಪುತ್ರ ಗೋವಿಂದರಾಜುಗೆ ಹೊಡೆದು ನಿಂದಿಸಿದ್ದಾನೆ. ಬಳಿಕ ಮನೆಯಿಂದ ಹೊರಗೆ ಹೋಗಿದ್ದಾನೆ. ಮಧ್ಯರಾತ್ರಿ 12.30ರ ಸುಮಾರಿಗೆ ಮರಳಿ ಮನೆಗೆ ಬಂದಿರುವ ಆರೋಪಿ, ಪುತ್ರ ಮಲಗಿರುವುದನ್ನು ನೋಡಿ ಕಲ್ಲು ತಂದು ತಲೆ ಮೇಲೆ ಎತ್ತಿ ಹಾಕಿದ್ದಾನೆ. ಶಬ್ಧ ಕೇಳಿದ ಗೌರಮ್ಮ ನಿದ್ರೆಯಿಂದ ಎದ್ದು, ಕೂಗಿಕೊಂಡಿದ್ದಾರೆ.
ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪುತ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಬದುಕುಳಿಯುವ ಸಾಧ್ಯತೆ ಅತ್ಯಂತ ವಿರಳ ಎಂದು ಹೇಳಿದರೂ ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಗೋವಿಂದರಾಜು ಅವರು ಕೊನೆಯುಸಿರೆಳೆದಿದ್ದಾರೆ. ಈ ನಡುವೆ ಪುತ್ರನನ್ನು ಹತ್ಯೆ ಮಾಡಿದ ನಾಗರಾಜು ಪೊಲೀಸರ ಮುಂದೆ ಶರಣಾಗಿದ್ದಾನೆ.
ಆರೋಪಿ ನಾಗರಾಜು ಹಾಗೂ ಈನತ ಪತ್ನಿ ಗೌರಮ್ಮ ಅವರಿಗೆ ಮತ್ತೊಬ್ಬ ಮಗನಿದ್ದ. ಆದರೆ, ಕ್ಯಾನ್ಸರ್ ನಿಂದಾಗಿ ಆತ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.