ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವದ ಸಾವಿಗೆ ಮುನ್ನಡಿಯಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರೋನಾ ಸಮಯದಲ್ಲಿ 2200 ಕೋಟಿ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ. ಆದರೂ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ” ಎಂದು ವಾಗ್ದಾಳಿ ನಡೆಸಿದರು.
“ಒಬ್ಬ ಸಾಮಾನ್ಯ ವ್ಯಕ್ತಿ ಮೇಲೆ ಸೋತ ವ್ಯಕ್ತಿಗೆ, ಟ್ಯೂಷನ್ ಟೀಚರ್ ವಿರುದ್ಧ ಸೋತ ವ್ಯಕ್ತಿಗೆ ಏಕೆ ಟಿಕೆಟ್ ನೀಡಿದರು ಎನ್ನುವುದೇ ಆಶ್ವರ್ಯ. ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಸಹಾಯ ಮಾಡಿರುವ ಕಾರಣ ಟಿಕೆಟ್ ದೊರೆತಿದೆ. ಹಿರಿಯ ನಾಯಕರಿಗೆ ಸೂರ್ಯ ನಮಸ್ಕಾರ, ಶವಾಸನ, ಕಪಾಲಿಪಾತಿ, ಧೀರ್ಘ ದಂಡ ನಮಸ್ಕಾರ ಈ ರೀತಿಯ ಸೇವೆಯನ್ನು ಮಾಡಿರುವ ಕಾರಣ ಟಿಕೆಟ್ ಸಿಕ್ಕಿರಬಹುದು” ಎಂದು ಲೇವಡಿ ಮಾಡಿದರು.
“ಸಾಮಾನ್ಯ ಮನುಷ್ಯನಾದ ನಾನು ನನ್ನ ಎಲ್ಲಾ ವ್ಯವಹಾರ, ಗಳಿಕೆ, ಖರ್ಚು ಸೇರಿದಂತೆ ನನ್ನ ಸಂಪೂರ್ಣ ಆದಾಯದ ಬಗ್ಗೆ ನಾಳೆಯೇ ಲೆಕ್ಕ ನೀಡಲು ಸಿದ್ದನಿದ್ದೇನೆ. ನೀವು ನನ್ನ ಮೇಲೆ ಐಟಿ, ಇಡಿ ಬಿಡುವ ಪ್ರಮೇಯವೇ ಬೇಡ. ನೀವು ಪ್ರಾಮಾಣಿಕರಾಗಿದ್ದರೆ ನಿಮ್ಮ ಆದಾಯದ ಮೂಲವನ್ನು ಘೋಷಣೆ ಮಾಡುತ್ತೀರಾ. ನಿಮಗೆ ಆ ಧೈರ್ಯ ಇದೆಯೇ? ಸಂಸತ್ತು ಘನತೆಯನ್ನು ಹೊಂದಿರುವ ಸ್ಥಳ, ಅಲ್ಲಿಗೆ ನಿಮ್ಮನ್ನು ನಾವು ಹೋಗಲು ಬಿಡುವುದಿಲ್ಲ. ಇಡೀ ಕೇಂದ್ರ ಸರ್ಕಾರವೇ ಬಂದು ನಿಂತುಕೊಂಡರೂ ಸುಧಾಕರ್ ಅವರು ಸಂಸತ್ತಿನ ಮೆಟ್ಟಿಲನ್ನು ತುಳಿಯಲು ಬಿಡುವುದಿಲ್ಲ” ಎಂದು ಸವಾಲು ಹಾಕಿದರು.
“ಸುಧಾಕರ್ ಅವರು ಗೆದ್ದರೆ ಕೇಂದ್ರದ ಬಿಜೆಪಿಯ ಮಂತ್ರಿಗಳಿಗೂ ಇವರು ಒಂದಷ್ಟು ಆಸನಗಳನ್ನು ಕಲಿಸುತ್ತಾರೆ. ಒಂದಷ್ಟು ಜನರ ಆತ್ಮ ಸಂತೋಷ, ಆತ್ಮ ತೃಪ್ತಿಗೆ ಕೆಲಸ ಮಾಡುತ್ತಾರೆ. ಇದಾದ ನಂತರ ರಾಜ್ಯದಲ್ಲಿ ವಿಜಯೇಂದ್ರ ಸೇರಿದಂತೆ ಯಾರೂ ಇರುವುದಿಲ್ಲ” ಎಂದರು.
“ಕೆ. ಸುಧಾಕರ್ ವಿಚಿತ್ರವಾದ ರಾಜಕಾರಣಿ. ಬಿಜೆಪಿಯ ಕೆಲವು ನಾಯಕರು ಹೇಳಿದರು ಸುಧಾಕರ್ ತುಂಬಾ ಕ್ರಿಮಿನಲ್ ಮನುಷ್ಯ ನಿನ್ನ ಅವನು ಬಿಡುವುದಿಲ್ಲ ಎಂದು. ಆದರೆ ನಾನೇ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದೇನೆ. ಸುಧಾಕರ್ ಅವರು ಮಾಡಿದ ಭ್ರಷ್ಟಾಚಾರದ ವಿರುದ್ದ ನನ್ನ ಹೋರಾಟ” ಎಂದು ಹೇಳಿದರು.
“ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗದ ಯುವಕರು, ಜನತೆ ನನ್ನ ಮಾತನ್ನು ಗಮನವಿಟ್ಟು ಕೇಳಬೇಕು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಬೆಂಬಲ ನೀಡಬೇಕು. ಸುಧಾಕರ್ ಗೆದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಆತ ಭ್ರಷ್ಟಾಚಾರಿ ಎಂದು ಅವರ ಪಕ್ಷದ ಯಲಹಂಕ ಶಾಸಕ ವಿಶ್ವನಾಥ್ ಹೇಳಿದ್ದಾರೆ. ಅವರ ಅಹಂಕಾರದ ಬಗ್ಗೆ ಅವರ ಪಕ್ಷದ ಜನರೇ ಮಾತನಾಡುತ್ತಾರೆ” ಎಂದರು.
“ನಾನು 10 ಆಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಜನರ ಸೇವೆಗೆ ಬಿಟ್ಟಿದ್ದೇನೆ. ತಾವು ಆರೋಗ್ಯ ಸಚಿವರಾಗಿದ್ದವರು ಏನು ಕೆಲಸ ಮಾಡಿದ್ದೀರಾ ಹೇಳಿ? ಉತ್ಸವ ಮಾಡಿ ಎಲ್ಲಾ ಸೂಪರ್ ಸ್ಟಾರ್ಗಳನ್ನು ಕರೆದುಕೊಂಡು ಬಂದಿರಿ, ಆದರೆ ಸಾಮಾನ್ಯ ಹುಡುಗನ ವಿರುದ್ದ ಸೋತು ಹೋದಿರಿ. ಸೆಲೆಬ್ರಿಟಿ ಬಂದರೆ ಮತ ಹಾಕುವ ಕಾಲ ಹೋಯಿತು” ಎಂದು ಹೇಳಿದರು.
“ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿಲ್ಲ ಎಂದು ಭೋಗನಂದೀಶ್ವರ ದೇವಸ್ಥಾನದಲ್ಲಿ ಆಣೆ ಮಾಡುತ್ತೇನೆ. ಅವರು ಕೊರೋನಾ ಸಮಯದಲ್ಲಿ ಲಂಚ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ. ಆಗ ನಿಮ್ಮ ವಿರುದ್ದ ಮಾತನಾಡುವುದನ್ನೇ ನಿಲ್ಲಿಸುತ್ತೇನೆ. ಆದಾಯದ ಮೂಲ ಕೇಳಿದರೆ ಎಲ್ಲರಿಗೂ ಬೈಯ್ಯುತ್ತಾರೆ” ಎಂದರು.