ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್) ನಿತ್ಯ ₹27 ಕೋಟಿ ನಷ್ಟ ಅನುಭವಿಸುತ್ತಿದೆ. ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕೆ ಕೆಐಒಸಿಎಲ್ ಕಾರ್ಯಾಚರಣೆಗೆ ಸಣ್ಣ ಸಣ್ಣ ವಿಚಾರ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿರುವುದೇ ಈ ನಷ್ಟಕ್ಕೆ ಕಾರಣ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಶಿವಮೊಗ್ಗದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಕೆಐಒಸಿಎಲ್‌ಗೆ ಸಂಡೂರಿನಲ್ಲಿ ಗಣಿ ಮಂಜೂರು ಮಾಡಿ ಅದನ್ನು ನೋಂದಣಿ ಮಾಡಿಕೊಟ್ಟದ್ದು 2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ. ಗಣಿಗಾರಿಕೆ ಸ್ಥಳದಲ್ಲಿ ಗಿಡ ಬೆಳೆಸಲು ಅರಣ್ಯ ಇಲಾಖೆಗೆ ₹190 ಕೋಟಿ ಹಣ ಕೆಐಒಸಿಎಲ್ ಪಾವತಿಸಿದೆ. ಆದರೆ ರಾಜ್ಯದ ಅರಣ್ಯ ಸಚಿವರಿಗೆ ಅದರ ತಲೆಬುಡ ಗೊತ್ತಿಲ್ಲ. ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕೇಂದ್ರ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲು ನಾನು ಕೆಐಒಸಿಎಲ್‌ನ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿದೆ. ಇದನ್ನು ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದ್ದಾರೆ” ಎಂದು ದೂರಿದರು.
“ಕೆಐಒಸಿಎಲ್ ಕಾರ್ಯಾಚರಣೆಗೆ ಅಡ್ಡಿಪಡಿಸಿ ಕಾರ್ಮಿಕರನ್ನು ಏಕೆ ಬೀದಿಗೆ ತರುತ್ತೀರಿ? ನನ್ನ ಮೇಲೆ ದ್ವೇಷ ಇದ್ದರೆ ಅದನ್ನು ರಾಜಕೀಯವಾಗಿ ಬೇರೆ ಕಡೆ ತೀರಿಸಿಕೊಳ್ಳಿ” ಎಂದರು.
ಕೇಂದ್ರ ಸರ್ಕಾರ ಜೊತೆ ಸಂಘರ್ಷ ಬೇಡ
ಚುನಾವಣೆ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪ, ಸಂಘರ್ಷ ಮಾಡೋಣ. ಆದರೆ ಹೀಗೆ ಪ್ರತೀ ದಿನ ರಾಜಕೀಯಕ್ಕಾಗಿ ಸಂಘರ್ಷ ಮಾಡುತ್ತಾ ಹೋದರೆ ರಾಜ್ಯದ ಅಭಿವೃದ್ಧಿ ಕುಂಠಿತ ಆಗಲಿದೆ. ಮಾಜಿ ಸಿಎಂ ಆಗಿ ನನ್ನ ಅನುಭವದಿಂದ ಹೇಳುತ್ತಿದ್ದೇನೆ; ಕೇಂದ್ರದೊಂದಿಗೆ ನಿತ್ಯ ಸಂಘರ್ಷ ಬೇಡ” ಎಂದು ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಕೂ ಮೈತ್ರಿ
“ಬಿಜೆಪಿಯೊಂದಿಗೆ ಮೈತ್ರಿ ಸುದೀರ್ಘ ಅವಧಿಗೆ ಮುಂದುವರೆಯಬೇಕು ಎಂಬುದು ಜೆಡಿಎಸ್ ಆಶಯ. ಹೀಗಾಗಿ ಮಹಾನಗರ ಪಾಲಿಕೆ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆಯನ್ನು ಮುಂದುವರಿಸಲಿದ್ದೇವೆ” ಎಂದು ಇದೇ ವೇಳೆ ತಿಳಿಸಿದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು 2016ರಲ್ಲಿ ತೀರ್ಮಾನ ಮಾಡಲಾಗಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರದ ಹಣಕಾಸು ಇಲಾಖೆಗೆ ಮನವರಿಕೆ ಮಾಡಿ ಅದನ್ನು ತಡೆ ಹಿಡಿಯಬೇಕಿದೆ. ವಿಐಎಸ್‌ಎಲ್ ಕಾರ್ಖಾನೆಗೆ ಈಗ ಸಂಪೂರ್ಣ ಹೊಸ ತಾಂತ್ರಿಕತೆಯ ಯಂತ್ರಗಳ ಅಳವಡಿಸಬೇಕಿದೆ. ಅದಕ್ಕೆ ಅಗತ್ಯವಿರುವ ₹15 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಲು ಪ್ರಯತ್ನ ನಡೆಸಿದ್ದೇನೆ. ವಿಶ್ವೇಶ್ವರಯ್ಯ ಅವರ ಹೆಸರು ಉಳಿಸುವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.