ಕರ್ನಾಟಕದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಯ ಮೂಲ ಆಶಯವನ್ನೇ ಕಾಂಗ್ರೆಸ್ ಸರ್ಕಾರ ಬುಡಮೇಲು ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಇಂದು ಎನ್ ಡಿ ಎ ನಿಯೋಗದಲ್ಲಿ ತೆರಳಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಕೇಂದ್ರ ಸಚಿವರು ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ರೂಪಿಸಿರುವ ಎಸ್ ಐ ಆರ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಅಕ್ರಮ ಮತಗಳನ್ನು ಉಳಿಸಿಕೊಂಡು ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ರಾಜ್ಯದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಅಕ್ರಮ ಎಸಗುತ್ತಿದೆ ಎಂದು ಸಚಿವರು ಆರೋಪಿಸಿದರು.
ಛತ್ರಗಳು ಕಲ್ಯಾಣ ಮಂಟಪಗಳು ಮಸೀದಿಗಳು ಸಮುದಾಯ ಭವನಗಳು ಸೇರಿದಂತೆ ಬೇಕಾದ ಕಡೆಗಳಲ್ಲಿ ಗುಂಪು ಗುಂಪಾಗಿ ಜನರನ್ನು ಸೇರಿಸಿ ತನಗೆ ಬೇಕಾದ ರೀತಿಯಲ್ಲಿ ಮತದಾರ ಪಟ್ಟಿಯನ್ನು ಪರಿಷ್ಕರಣೆ ಮಾಡಿಕೊಳ್ಳುವ ದುಷ್ಕೃತ್ಯವನ್ನು ಸರ್ಕಾರ ಎಸಗುತ್ತಿದೆ. ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪರಿಷ್ಕರಣೆಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಸರ್ಕಾರದ ಕುಮ್ಮಕಿಗೆ ಒಳಗಾಗಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವರು ಹೇಳಿದರು.
ಈ ಕುರಿತಂತೆ ರಾಜ್ಯದ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಸಾರವಾಗಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ದೃಶ್ಯಗಳ ಸಮೇತ ಎಸ್ಐಆರ್ ಜಾತ್ರೆಯ ದೃಶ್ಯಗಳು ಪ್ರಸಾರವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ದೃಶ್ಯಗಳು ಹರಡಿದೆ ಎಂದು ಸಚಿವರು ಹೇಳಿದರು.
ಜಗತ್ತಿನ ಅತ್ಯಂತ ಹಿರಿಯ ಮತ್ತು ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಭಾರತದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿ ಬೇಸರ ತರಿಸಿದೆ. ಒಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮತ್ತೊಂದು ಕೈಯಲ್ಲಿ ಅಕ್ರಮ ಪರಿಷ್ಕರಣೆಗೆ ಕುಮ್ಮಕ್ಕು ನೀಡುವುದು ಕಾಂಗ್ರೆಸ್ಸಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲಿ ಎಸ್ಐಆರ್ ನಡೆದಾಗ ಅಕ್ರಮಗಳು ನಡೆದಿದೆ ಎಂದು ಅಪಪ್ರಚಾರ ನಡೆಸಿದ ಕಾಂಗ್ರೆಸ್ ಕರ್ನಾಟಕದಲ್ಲಿ ಮಾಡುತ್ತಿರುವುದಾದರೂ ಏನು? ಅಧಿಕಾರ ಇದೆ ಎಂದು ಆಡಳಿತ ಯಂತ್ರವನ್ನು ದುರ್ಬಳಿಕೆ ಮಾಡಿಕೊಂಡು ಕಳ್ಳ ಮತಗಳ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ರಾಜ್ಯದಲ್ಲಿ ಈವರೆಗೆ ಆಗಿರುವ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯ ಎಲ್ಲ ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಹಾಗೂ ಹೊರ ರಾಜ್ಯದ ದಕ್ಷ ಅಧಿಕಾರಿಯನ್ನು ರಾಜ್ಯದ ಎಸ್ಐಆರ್ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೋರಲಾಗಿದೆ. ದೆಹಲಿಯಲ್ಲಿಯೂ ಮುಖ್ಯ ಚುನಾವಣಾ ಆಯುಕ್ತರು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸರ್ಕಾರದ ಕುಮ್ಮಕಿನಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಆಗುತ್ತಿರುವ ಅಕ್ರಮಗಳ ಬಗ್ಗೆ ಇಡೀ ದೇಶದಲ್ಲಿಯೇ ಚರ್ಚೆ ನಡೆಯುತ್ತಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಸೇರಿ ದೂರು ಕೊಟ್ಟಿದ್ದೇವೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ವಿಧಾನಸಭೆ ಪ್ರತಿಪಕ್ಷ ನಾಯಕರಾದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಂಸದರಾದ ಎಂ.ಮಲ್ಲೇಶ್ ಬಾಬು ಅವರು, ಗೋವಿಂದ ಕಾರಜೋಳ, ಶಾಸಕರಾದ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಸೇರಿ ಇನ್ನೂ ಕೆಲ ಪ್ರಮುಖ ನಾಯಕರು ನಮ್ಮ ನಿಯೋಗದಲ್ಲಿದ್ದರು.


