ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ.
ಸುಮಾರು 40 ಅಡಿ ಮೇಲಿಂದ ಬಂಡೆ ಬಿದ್ದ ಪರಿಣಾಮ ದೊಡ್ಡ ಪ್ರಮಾಣ ಸಾವುನೋವು ಉಂಟಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದುರಂತ ಸ್ಥಳದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾವೇರಿ ಕ್ರಷರ್ನಲ್ಲಿ ಘಟನೆ ನಡೆದಿದ್ದು, ಈ ವೇಳೆ 10-15 ಜನ ಬಿಹಾರದವರು, 2-3 ಸ್ಥಳೀಯರು ಕೆಲಸ ಮಾಡುತ್ತಿದ್ದರು. ಹಿಟಾಚಿಯಿಂದ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ 5 ಜನ ಕೂಲಿ ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆರ್.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕು ಬಂಡೆ ಬಿದ್ದಿದೆ. ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಕೇವಲ 10 ಅಡಿ ದೂರದಲ್ಲಿ ಘಟನೆ ನಡೆದಿದೆ ಎಂದು ಮಾದಪಟ್ಟಣ ಗ್ರಾಮದ ಬಳಿ ಟಿವಿ9ಗೆ ಹಿಟಾಚಿ ಆಪರೇಟರ್ ತಿಳಿಸಿದ್ದಾರೆ.


