Homeಕರ್ನಾಟಕವೀರಶೈವ ಲಿಂಗಾಯತ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ವೀರಶೈವ ಲಿಂಗಾಯತ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ಕರುನಾಡಿನ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳು ಮೆರೆದಿರುವ ಸಾಮಾಜಿಕ ಜವಾಬ್ದಾರಿ ಮಹತ್ವವಾದ್ದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.

ಹೊನ್ನಾಳಿಯಲ್ಲಿಂದು, ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 91ನೇ ವರ್ಷದ ಜಯಂತ್ಯುತ್ಸವ, ಹೈಟೆಕ್ ಆಸ್ಪತ್ರೆ, ಫಾರ್ಮಸಿ ಕಾಲೇಜು, ಸೈನಿಕ ಶಾಲೆ, ಗೋ ಸಂವರ್ಧನ ಕೇಂದ್ರ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೀರಶೈವ ದರ್ಶನ ಶಾಸ್ತ್ರ ಅಧ್ಯಯನ ವಿಭಾಗದ ಫಲಕ ಅನಾವರಣ ಮಾಡಿ ಮಾತನಾಡಿದರು.

ರಾಜ್ಯದ ವಿವಿಧ ಮಠಗಳು ಎಲ್ಲ ಜಾತಿ, ಜನಾಂಗ, ಧರ್ಮದವರಿಗೂ ಆಶ್ರಯ, ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಜ್ಞಾನದ ದೀವಿಗೆ ಬೆಳಗಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಲ್ಲಿ ಹೈಟೆಕ್ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿದೆ. ಹೀಗಾಗಿ ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಯೋಗ, ನಡಿಗೆಯೇ ಮೊದಲಾದ ಆರೋಗ್ಯಪೂರ್ಣ ಜೀವನ ಕ್ರಮ ರೂಢಿಸಿಕೊಳ್ಳಬೇಕು ಎಂದರು.

ಪವಾಡಪುರುಷರಾಗಿದ್ದ ಹಿರೇಕಲ್ಮಠದ ಸ್ವಾಮೀಜಿ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಈ ಭಾಗದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದಾರೆ. ಅದನ್ನು ಈಗಿನ ಸ್ವಾಮೀಜಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ವೀರಶೈವ ಲಿಂಗಾಯತರಲ್ಲಿ ಪ್ರತಿಭಾವಂತರಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆ ಪ್ರತಿಭೆಯ ಸದ್ಬಳಕೆಯನ್ನು ಸಮುದಾಯ ಮಾಡಿಕೊಳ್ಳಬೇಕಿದೆ. ಇಂದು ಯುವಜನರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಗುರು ಹಿರಿಯರಿಗೆ ಗೌರವ ನೀಡದಂತಾಗಿದ್ದಾರೆ. ಯುವಶಕ್ತಿ ಅಣುಶಕ್ತಿಗಿಂತ ಮಿಗಲಾಗಿದ್ದು, ಯುವಜನರ ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದರು.
ಇಂದು ಶೇ.30ರಷ್ಟು ಯುವಜನರು ಮದ್ಯ, ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದರೆ, ಇನ್ನು ಕೆಲವರು ಕೈಯಲ್ಲಿರುವ ಸ್ಮಾರ್ಟ್ ಫೋನ್ ನ ದಾಸರಾಗಿ, ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಎಲ್ಲ ಮಠ ಮಾನ್ಯಗಳ ಗುರುಗಳ ಮತ್ತು ಪಾಲಕರ ಮೇಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಪೀಠದ ಶ್ರೀ 1008 ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ 1008 ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮತ್ ಕಾಶೀ ಜ್ಞಾನ ಸಿಂಹಸನಾಧೀಶ್ವರ 1008 ಜಗದ್ದುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕರುಗಳಾದ ಶಾಂತನಗೌಡ, ಸಮರ್ಥ ಶಾಮನೂರು, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments