Homeಅಂಕಣಆಕಾಶವೇ ಹದ್ದು

ಆಕಾಶವೇ ಹದ್ದು

ಧೃತರಾಷ್ಟ್ರನ ಆಲಿಂಗನಕ್ಕೆ ಸಿಲುಕಿ ಅಡ್ಡಡ್ಡ ಮಲಗದವರಿಲ್ಲ

  • ಡ್ಯಾನಿಯಲ್ “ಡ್ಯಾನ್ ಸಿ” ಕ್ರಿಸ್ಟಫರ್


ಐನೂರು ವರ್ಷಗಳ ಹಿಂದೆ ಯುರೋಪಿನ ಮೆಲನಿನ್ ನ್ಯೂನ್ಯ ಸೊರ್ರು ಅಮೆರಿಕಕ್ಕೆ ವಲಸೆ ಹೋಗಿ, ಅಲ್ಲಾಗಲೇ ಸಾವಿರಾರು ವರ್ಷಗಳಿಂದ ಪ್ರಾಕೃತಿಕ ಬದುಕು ಜೀವಿಸುತ್ತಿದ್ದ ಕಂದು ಜನರನ್ನು ಬಗ್ಗು ಬಡಿದು, ಅವರನ್ನು ಭಾರತದ ಹುಲಿ ಸಿಂಹಗಳಂತೆ ರಕ್ಷಿತ ಪ್ರದೇಶಗಳಿಗೆ ಗದುಮಿ, ಇಡೀ ಮಾನವ ಕುಲಕ್ಕೆ ಮಾದರಿಯಾಗಬಹುದಾಗಿದ್ದ ಸಮಾಜವೊಂದನ್ನು ಕಟ್ಟುವ ಸದವಕಾಶವನ್ನು ಕೈ ಚೆಲ್ಲಿ, ಇಡೀ ಮಾನವ ಕುಲದ ಲೋಭಿಗಳು ಜೀವವನ್ನೇ ಒತ್ತೆಯಿಟ್ಟು ಗಡಿ ದಾಟಿ ಬರುವಂತಹ ದೇಶವನ್ನು ಕಟ್ಟಿ, ಅದರಲ್ಲಿ ಪ್ರಯಾಣವನ್ನು 58 ನಿಮಿಷ ಮೊಟಕುಗೊಳಿಸಲು 18 ಮೈಲುಗಳ ಸೇತುವೆಗಳಂತಹ ಸೌಕರ್ಯಗಳನ್ನು ನಿರ್ಮಿಸುತ್ತಾ, ಗಗನಚುಂಬನ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಗಗನಕ್ಕೆ ಕಟ್ಟಡಗಳನ್ನು ಏರಿಸಲು ಪ್ರಯತ್ನಿಸುತ್ತಾ, ಸೃಷ್ಟಿ ರಹಸ್ಯದಿಂದ ಹಿಡಿದು ಶಿಶು ಸೃಷ್ಟಿಯ ರತಿಯವರಿಗೆ ಎಲ್ಲವನ್ನು ವ್ಯಾಪಾರೀಕರಿಸುವ, ಉತ್ಪಾದಿಸುವುದೇ ಬದುಕು; ಮಾರುವುದೇ ಬದುಕಿನ ಧ್ಯೇಯವೆಂಬ ಧ್ಯೇಯವಾಕ್ಯದ ಬದುಕನ್ನು ಪ್ರತಿಪಾದಿಸುವ, ಈ ಉತ್ಪಾದಿಸುವ, ಮಾರುವ ಬದುಕಿನ ಸಾಕಾರಕ್ಕಾಗಿ ಜಗದೆಲ್ಲೆಡೆಯ ಸಂಪನ್ಮೂಲಗಳನ್ನು ಡಾಲರ್‌ಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ, ಈ ಪ್ರಕ್ರಿಯೆಯಲ್ಲಿ ಜಗದಲ್ಲಿ ಆಹಾರೋತ್ಪಾದನೆಯ ಶೇಕಡ 40ರಷ್ಟು ತಿಂದು ತೇಗುತ್ತಾ ದಾಂಡಿಗನಾಗಿ ಜಗತ್ತಿನ ದೊಡ್ಡಣ್ಣನೆಂಬ ಬಿರುದನ್ನು ಮುಡಿಗೆರೆಸಿಕೊಂಡು, ತಿರುಗಿ ಬಿದ್ದ ದೇಶಗಳ ಪೂರ್ವಾಪರವೇ ಅಳಿಸಿ ಹೋಗುವಂತೆ ಬಡಿದಿಕ್ಕುತ್ತಾ, ಪ್ರಶ್ನಿಸಿದವರ ಮುಖ ಯಾವುದು, ಮುಕಳಿ ಯಾವುದು ಎಂಬುದನ್ನು ನೋಡದಂತೆ ಒದೆಯುತ್ತಾ, ಓಲೈಸುವ ದೇಶಗಳಿಗೆ: ತಕ್ಕೊಳ್ಳಿ, ನಿಮ್ಮನ್ನು ತಡವಿಕೊಳ್ಳುವವರನ್ನು ಕೆಡವಿಕೊಂಡು ಬಡೆಯಿರಿ ಎನ್ನುತ್ತ ಓಬಿರಾಯನ ಕಾಲದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿರುವ, ಉತ್ಪಾದಕ- ವರ್ತಕರ ಆಳ್ವಿಕೆಯನ್ನು ಜನಾಡಳಿತವೆನ್ನುತ್ತಾ, ಜನಾಡಳಿತದಲ್ಲಿ ಎದುರಾಳಿಗಿಂತ ಕಡಿಮೆ ಮತ ಪಡೆದವರು ಅಧ್ಯಕ್ಷ ಪದವಿಗೇರಲು ಹೇಗೆ ಸಾಧ್ಯ ಎಂಬಂತೆ ಪ್ರಶ್ನಿಸಿದವರಿಗೆ: ಇಲ್ಲಿ ಎಲ್ಲವೂ ಸಾಧ್ಯ, ಸಾಧ್ಯತೆಗಳಿಗಿಲ್ಲಿ ಮಿತಿಯಿಲ್ಲ, ಲೋಭಕನಸುಗಳೊಂದಿಗೆ ಇಲ್ಲಿಗೆ ಬಂದವರು ಮಾಡಿಕೊಳ್ಳಬಹುದಾದ ಲಾಭಕ್ಕೆ ಆಗಸವೇ ಮಿತಿ ಎಂಬಂತೆ ಉತ್ತರಿಸುವ ಕನಸುಗಳ ಮಾರಾಟಗಾರರ ಅಮೇರಿಕಾದ ಸಂಯುಕ್ತ ಸಂಸ್ಥಾನಗಳು ಎಂಬ ಮಹಾನ್ ಪ್ರಮಾದಿ ದೇಶದ ಯಾತ್ರೆಯನ್ನು ಭಾರತದ ಪ್ರಧಾನಿಗಳು ಮತ್ತೊಮ್ಮೆ ಪೂರೈಸಿದ್ದಾರೆ.

ಸಂಪೂರ್ಣ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿರುವ ಜಗತ್ತಿನ ಏಕೈಕ ವ್ಯಕ್ತಿಯಾಗಿರುವ ಭಾರತದ ಪ್ರಧಾನಿ, ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೇ ಶೇಕಡಾ 20 ಜನರ ಪೈಕಿಯವರನ್ನು ಬಡಿದ ಪರಿಯನ್ನು: ನೋಡಿ, ಅದ್ಹೇಗೆ ಅವರನ್ನು ನೂರು ವರ್ಷ ಮೇಲೇಳದಂತೆ ಹೆಕ್ಕತ್ತಿನ ಮೇಲೆ ಮಿದ್ದು ಕುಳ್ಳರಿಸಿದ್ದೇವೆ ಎಂಬಂತೆ ಬಣ್ಣಿಸಲಾಗಿ, ಹುಚ್ಚೆದ್ದ ಶೇಕಡಾ 80ರ ಪೈಕಿಯವರು ಮುಖ್ಯಮಂತ್ರಿಯನ್ನು ಅನಾಮತ್ತು ಪ್ರಧಾನಿಯ ಪದವಿಗೇ ಏರಿಸಲಾಗಿ, ನೂರು ವರ್ಷ ಮೇಲೇಳದಂತೆ ಬಡಿದಿದ್ದ ಕಾರಣದಿಂದ ತನ್ನ ಗಡಿಯೊಳಕ್ಕೆ ಮುಖ್ಯಮಂತ್ರಿ ಆಗಿದ್ದಾಗ ಬರದಂತೆ ನಿಷೇಧ ಹೇಳಿದ ಅಮೆರಿಕ, ಮುಖ್ಯಮಂತ್ರಿ ಪ್ರಧಾನಿಯಾದೊಡನೆ: ನೀವು ಜನಾನುಮೋದನೆ ಪಡೆದುಕೊಂಡಿರುವುದರಿಂದ ನಮ್ಮ ಉತ್ಪಾದಕ-ವರ್ತಕ ಜನರೊಂದಿಗೆ 10 ಬಿಲಿಯ ಡಾಲರ್‌ಗಳ ವ್ಯಾಪಾರೋಪ್ಪಂದ ಮಾಡಿಕೊಂಡರೆ ನಿಮ್ಮ ವಿಮಾನ ನಮ್ಮ ಆಗಸ ಪ್ರವೇಶಿಸಿ, ನೀವು ನಮ್ಮ ಅಗಸನೂರಿನ ಪುರಪ್ರವೇಶ ಮಾಡಲು ಅಡ್ಡಿಯಿಲ್ಲ ಎಂಬಂತೆ ಸಂದೇಶ ರವಾನಿಸಲಾಗಿ ಜಗದಗಲಕ್ಕೆ ಹಾರಾಡಿ ಹೋದ ಪ್ರಧಾನಿಗಳು: ಅಧ್ಯಕ್ಷನೆನ್ನದೇ, ಪ್ರಧಾನಿಯೆನ್ನದೆ, ಮಂತ್ರಿಯೆನ್ನದೆ, ಮಾಗಧನೆನ್ನದೆ ಸಕಲಷ್ಟರನ್ನು ತಬ್ ಹಾಕಿಕೊಂಡು ಶೇಕಡಾ 80ರ ಪೈಕಿಯವರು ಹೌದೌದೆನ್ನುವಂತಹ ತಸವೀರಾಗಿ ಹೋಗುತ್ತಿರುವಾಗ ಇಲ್ಲಿ ಕುಕ್ಕರು ಕೂರಲು ಆಗದೆ ದಬಾಕಿಕೊಂಡಿದ್ದ 20 ಜನರ ಪೈಕಿಯವರು ಮೇಲೇಳೆಲು ಪ್ರಯತ್ನಿಸುತ್ತಿರುವುದನ್ನು ಕಂಡು ಕನಲಿ ಹೋಗಿ ದೇಶವಾಸಿಗಳ ರಾಷ್ಟ್ರೀಯ ದಾಖಲೆ ಹೊತ್ತಗೆಯನ್ನೇ ತೆರೆದು, ಇಂತಿಷ್ಟು ಲಕ್ಷ ಜನ 20ರ ಪೈಕಿಯವರು ಈ ದೇಶದ ವಾಸಿಗಳೇ ಅಲ್ಲ ಎಂಬಂತಹ ದಾಖಲೆ ಒದಗಿಸಿ, ಇವರನ್ನೆಲ್ಲ ನಿರಾಶ್ರಿತರಾ ಶಿಬಿರಗಳಿಗೆ ಗದುಮಲಾಗುವುದು ಎಂಬಂತಹ ಸುದ್ದಿಯನ್ನು ಮಡಿಲ ಮಾಧ್ಯಮಿಗಳ ಮೂಲಕ ಹರಿಯಬಿಡಲಾಗಿ ಅಮೆರಿಕದ ಅಂದಿನ ಅಧ್ಯಕ್ಷ: ಅಲ್ಲಿನ ಬಂಧೀಖಾನೆಗಳಲ್ಲಿದ್ದ 5 ಲಕ್ಷ ದಾಖಲೆ ಇಲ್ಲದ ಭಾರತೀಯರತ್ತ ಕೈ ಮಾಡಲಾಗಿ, ಕೈ- ಬಾಯಿ ಮಾಡಿಕೊಂಡು ಅಮೆರಿಕವರೆಗೂ ಓಡಿಬಿಟ್ಟ 80ರ ಪೈಕಿಯವರು ಅಧ್ಯಕ್ಷರನ್ನು ಗುಜರಾತಿನವರೆಗೂ ಬಾಜಭಜಂತ್ರಿಗಳೊಂದಿಗೆ ಕರೆತಂದು ಭರ್ಜರಿ ಮೇಳೆ ಏರ್ಪಡಿಸಲಾಗಿ ಭಾರತ, ಅಮೆರಿಕ ನಡುವೆ ಬಾಂಧವ್ಯದ ಹೊಸ ಶಕೆ ಆರಂಭವಾಗಿ ಹೋಯಿತು.

ಈ ಬಾಂಧವ್ಯವನ್ನು ಮುಂದುವರಿಸುವ ಸಲುವಾಗಿ ಅಮೆರಿಕದಿಂದ ಕರೆ ಬಂದೊಡನೆ ಮತ್ತೆ 10 ಬಿಲಿಯ ಡಾಲರ್‌ಗಳ ವ್ಯಾಪಾರೋಪ್ಪಂದಕ್ಕೆ ಸಹಿ ಮಾಡಲು ಅಮೆರಿಕೆಯ ರಾಜಧಾನಿ ಆಗಸನೂರಿಗೆ ಹೋದ ಭಾರತದ ಪ್ರಧಾನಿಗಳಿಗೆ ಅಭೂತಪೂರ್ವ ಸ್ವಾಗತ ದೊರಕಿ, ಪ್ರಧಾನಿಗಳೊಂದಿಗೆ ಅಮೆರಿಕನ್ನರು ವಿವಿಧ ಬಗೆಯ ಯೋಗಾಸನಗಳ ಪ್ರದರ್ಶನಗಳನ್ನು ನೀಡಿ, ಅಮೇರಿಕಾಧ್ಯಕ್ಷರು ಪ್ರಧಾನಿಗಳಿಗೆ ಬೇಕಾದ ಉತ್ಕೃಷ್ಟ ಸಸ್ಯಹಾರವನ್ನೇ ಉಣಬಡಿಸಿ, ಎಂದಿಗೂ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿಗಳು ಅಧ್ಯಕ್ಷರ ನಿವಾಸ ಶ್ವೇತ ಭವನದಲ್ಲೇ ಹಿಂದಿಲ್ಲದಂತಹ ಗೋಷ್ಠಿ ನಡೆಸಿ, ಅಮೆರಿಕೆಯ ಉತ್ಪಾದಕ ವರ್ತಕರು ಪ್ರಧಾನಿಗಳನ್ನು ಇನ್ನಿಲ್ಲದಂತೆ ಹಾಡಿ, ಹೊಗಳಿ, ರಾಷ್ಟ್ರದ ವೇದಿಕೆ ಕಾಂಗ್ರೆಸ್‌ಗೇ ಏರಿಸಿ, ಅಲ್ಲಿ ಉದುರಿದ ಅಣಿಮುತ್ತುಗಳಲ್ಲಿ ಯಾವುದನ್ನು ಆರಿಸಬೇಕು, ಯಾವುದನ್ನು ಬಿಡಬೇಕು, ಅದ್ಯಾವುದನ್ನು ಅಂಕೀಯ ಮಾಧ್ಯಮಕ್ಕೇರಿಸಿ ಪಸರಿಸಬೇಕು, ಏನನ್ನು ಅಡಗಿಸಿಬೇಕು ಎಂಬಂತಹ ಜಿಜ್ಞಾಸೆಯಲ್ಲಿ ಮಡಿಲ ಮಾಧ್ಯಮಿಗಳು ತೊಡಗಿಕೊಂಡಿರುವಂತೆಯೇ: ಹೆಣ್ಣು ಮಕ್ಕಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂಬುದನ್ನು ಆಂಗ್ಲ ಭಾಷೆಯಲ್ಲಿ ಹೇಳಲು ಅರಿಯದ ವಿಶ್ವಗುರು ಪ್ರಧಾನಿ: ಹೆಣ್ಣು ಮಕ್ಕಳನ್ನು ತನಿಖೆ ಮಾಡಬೇಕು ಎಂಬಂತೆ ಭಾಷಿಸಿದನ್ನು ಚಕ್ಕನೇ ಆಯ್ದುಕೊಂಡ ಜಡಿವ ಮಾಧ್ಯಮಿಗಳು ಇದನ್ನು ಜಗವಾರ್ತೆಯನ್ನಾಗಿ ಮಾಡಲಾಗಿ, ಅದೇ ಅಂಕೀಯ ಮಾಧ್ಯಮದಲ್ಲಿ ಜಗದಗಲಕ್ಕೆ ಹರಿದಾಡಿದ ವಾರ್ತೆಯನ್ನು ಕಂಡು, ಕೇಳಿದ ವಿಶ್ವಗುರುವಿನ ಕನ್ನಡನಾಡಿನ ಶಿಷ್ಯಗಡಣ: ಅಲ್ಲಾ ಸಿಸ್ಯಾ, ಇದೇ ಮಾತನ್ನು ಆ ರಾವುಲ್ ಗಾಂಧಿ ಹೇಳಿದ್ರೆ, ಹೇಳ್ದೆ ಇದ್ರೂ ಹೇಳಿದ್ರು ಅಂತ ನಾವೇ ಧ್ವನಿ ಮಾರ್ಪಡಿಸಿ: ನೋಡಿ, ನಿಮ್ಮ ಪಪ್ಪು ಅಮೆರಿಕಾದಂತಹ ದೇಶದ ರಾಷ್ಟ್ರ ವೇದಿಕೆಯಲ್ಲೇ ನಮ್ಮ ದೇಶದ ಮಾನ ಕಳೆದಿದ್ದಾರಲ್ಲ, ಅವರು ನಮ್ಮ ರಾಷ್ಟ್ರೀಯರಾಗಿದ್ದರೆ ಹೀಗೆ ಮಾಡುತ್ತಿದ್ದರೇ, ಅವರು ಶೇಕಡಾ 20ರ ಒಲೈಕೆದಾರರಾಗಿದ್ದರಿಂದಲೇ ಹೀಗೆ ಆಗಿದೆ, ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಮ್ಮನ್ನೇ ಆರಿಸಿ ಎಂಬಂತೆ ಶೇಕಡ 80ರ ಪೈಕಿಯವರನ್ನು ಒಲೈಸಬಹುದಾಗಿತ್ತಲ್ಲಾ ಎಂದೆನ್ನುತ್ತಾ ಕೈಕೈ ಹಿಸುಕಿಕೊಳ್ಳುತ್ತಿರುವಾಗಲೇ ದೇಶದಗಲದ ರಾಷ್ಟ್ರೀಯವಾದಿಗಳ ಮುಖಾರವಿಂದಗಳಲ್ಲಿ: ಕರ್ನಾಟಕದಲ್ಲಿ ರಾಷ್ಟ್ರೀಯವಾದಿಗಳು ಅಧಿಕಾರ ಕಳೆದುಕೊಂಡ ರೀತಿಯಲ್ಲೇ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಛಾಯೆ ಹರಿದಾಡುತ್ತಿದೆ.

ಎಂಭತ್ತರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ರಕ್ಷಣಾ ಇಲಾಖೆಯ ಕಚೇರಿಗೆ ಹಿಂಬಾಗಿಲಿನಿಂದ ಬಂದು, ಹಳೆ ಶಸ್ತ್ರಾಸ್ತ್ರಗಳನ್ನು ಹರಡಿ ಕುಂತು: ತಕ್ಕೊಳ್ಳಿ, ಇದರಿಂದ ಪಾಕಿಸ್ತಾನಿಯನ್ನು ಪಾಕ ಮಾಡಿ ಹಾಕಬಹುದು, ಅದರಿಂದ ಚೀನಿಯನನ್ನು ಚಿಂದಿ ಉಡಾಯಿಸಬಹುದು, ಈ ಮಾರಕಾಯದಗಳು ನಿಮ್ಮದಾದರೆ, ನಿಮ್ಮ ಮಾರುಕಟ್ಟೆ, ಅಂಗಡಿ, ಮುಂಗಟ್ಟೆಗಳು ನಮ್ಮದಾದರೆ, ನಿಮ್ಮ ದೇಸಿ ಉತ್ಪಾದಕ-ವರ್ತಕರು ದೈನೇಸಿಗಳಾದರೆ, ನಮ್ಮ ಬಹುರಾಷ್ಟ್ರೀಯ ಉತ್ಪಾದಕ-ವರ್ತಕರು ವರ್ಚಸ್ವಿಗಳಾದರೆ: ಪಾಕಿಸ್ತಾನಿ ನೂಕು ಗಾಡಿಯಲ್ಲಿ ನಾನು ಮಾರಿಕೊಂಡು ಬದುಕಬೇಕಾಗುತ್ತದೆ, ಚೀನಿಯ ಚಿತ್ರಾನ್ನಕ್ಕೂ ಪರದಾಡಬೇಕಾಗುತ್ತದೆ ಎಂಬಂತೆ ಮನವರಿಕೆ ಮಾಡಿಕೊಡಲಾಗಿ, 90ರ ದಶಕದ ಅಂತ್ಯದಲ್ಲಿ ರಾಷ್ಟ್ರೀಯವಾದಿಗಳ ಬಲರಂಗಿಗಳ ಸರ್ಕಾರ ಆನೆಪಟಾಕಿಗಳಂತೆ ಅಣುಸಿಡಿಗುಂಡುಗಳನ್ನು ಸಿಡಿಸಿದ ಕಾರಣ ಹೇರಲಾಗಿದ್ದ ಆರ್ಥಿಕ ದಿಗ್ಬಂದನ ಕೂಡ ಹೊಸ ಸಹಸ್ರಮಾನದ ಆದಿಯಲ್ಲೇ ರದ್ದಾಗಲಾಗಿ, ದೇಶಕ್ಕೆ ಲಕ್ಷಗಟ್ಟಲೆ ಡಾಲರುಗಳ ಶಸ್ತ್ರಾಸ್ತ್ರಗಳ ಒಟ್ಟಿಲು ಅಮದಾಗಿ, ಕೋಟಿಗಟ್ಟಲೆ ರೂಪಾಯಿಗಳ ಸಂಪನ್ಮೂಲ ರಫ್ತಾಗಿಹೋಗಿ, ಅಮೆರಿಕ, ಭಾರತಗಳ ನಡುವೆ ರಕ್ಷಣಾ ಸಂಬಂಧಗಳ ಹೊಸ ಒಪ್ಪಂದವೇ ಏರ್ಪಟ್ಟು, ಭಾರತ ತನ್ನ ಮಾರುಕಟ್ಟೆಯನ್ನು ತೆರೆದಿಟ್ಟು, ಅಮೆರಿಕ ಭಾರತದ ಕಾರ್ಯಗಾರರನ್ನು ಒಳಬಿಟ್ಟುಕೊಂಡು, ಭಾರತದ ಗಣಕ ಲಿಪಿಕಾರರು ಅಮೆರಿಕದ ಉತ್ಪಾದಕರಿಗೆ ಗಣಕಲಿಪಿಗಳನ್ನು ಕುಂತು ಕುಟ್ಟಿಕೊಟ್ಟು, ಅಮೆರಿಕದ ಉತ್ಪಾದಕೋತ್ತಮ ಭಾರತದ ಕಾರ್ಯಗಾರರಿಗೆ ನಿಂತು ನಿರ್ದೇಶನ ಕೊಟ್ಟು, ಭಾರತದ ಶ್ರೀಮಂತ ಅಮೆರಿಕದ ಶ್ರೀಮಂತನನ್ನೇ ನಾಚಿಸುವಂತಾಗಿ, ಭಾರತದ ಬಡವ ಆಫ್ರಿಕಾದ ಕಡುಬಡವನಲ್ಲೇ ಮೇಲಿರಿಮೆ ಹುಟ್ಟಿಸಿ, ಅಮೆರಿಕಾಧ್ಯಕ್ಷ-ಭಾರತದ ಪ್ರಧಾನಿಗಳ ಯುಗಳ ಗೀತಾ ಕುಣಿತವನ್ನು, ತಬ್ಬಾಡುವಿಕೆ, ಕೈಯಾಡಿಸುವಿಕೆಗಳನ್ನು ಕದ್ದು ನೋಡಿ ನರನರನೆ ಹಲ್ಲು ಕಡಿದು ರಷ್ಯಾ ಮೊರೆ ಹೊಕ್ಕ ಪಾಕಿಸ್ತಾನಿಗೆ ಚೀನಿ ಕಾಸಿನಲ್ಲಿ ತೈಲ ಕೊಟ್ಟ ರಷ್ಯನ್‌ರನ್ನು ಕಂಡು ಯಾರೂ ಕೆಂಡಾಮಂಡಲವಾಗುತ್ತಿಲ್ಲ.

ಅಮೆರಿಕೆಯೊಂದಿಗೆ ಯುಗಳಗೀತೆ ಹಾಡಿ ದಕ್ಕಿಸಿಕೊಂಡವರಿಲ್ಲ; ಇಕ್ಕಿಸಿಕೊಂಡವರೇ ಎಲ್ಲಾ, ಅಮೆರಿಕದ್ದು ದೃತರಾಷ್ಟ್ರ ಆಲಿಂಗನ; ನಜ್ಜು ಗುಜ್ಜಾದವರೇ ಎಲ್ಲಾ, ಅಮೆರಿಕಗೆ ಆಪ್ತರಿಲ್ಲ; ಇರುವುದು ಆಸಕ್ತಿಗಳು ಮಾತ್ರ, ಅಮೆರಿಕೆಯೊಂದು ತಪ್ಪು, ಮಹಾನ್ ಪ್ರಮಾದ ಎಂಬಂತಹ ಜಗೆಳಿಗೆ ಚಿಂತಕರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಅಮೆರಿಕದ ಆಲಿಂಗನಕ್ಕೆ ಸಿಕ್ಕಿ ಎಕ್ಕುಟ್ಟಿ ಹೋಗಿರುವ ದೇಶಗಳ ಜನತೆ ದೈನೇಸಿ ದೃಷ್ಟಿ ಬೀರುತ್ತಿದ್ದರೆ, ದೊಡ್ಡಣ್ಣನ ದೊಣ್ಣೆ ಏಟಿಗೆ ಸಿಲುಕಿ ಆರಡಿ ಆಳದಲ್ಲಿ ಅಡ್ಡಡ್ಡ ಮಲಗಿರುವ ಜಗದಗಲದ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಅಲವತ್ತುಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments