ಬೆಳಗಾವಿ: ಇಲ್ಲಿನ ಬೆಳಗುಂದಿ ಶೂನ್ಯಫಾರಂನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ರಾತ್ರಿ ನಡೆದಿದ್ದು, ಲೋಕಸಭಾ ಚುನಾವಣೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
ಮುಖ್ಯಮಂತ್ರಿಗಳೂ ಮತ್ತು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲ ರೀತಿಯಲ್ಲೂ ಸಿದ್ಧರಾಗುವಂತೆ ಸಭೆಯಲ್ಲಿ ಶಾಸಕರಿಗೆ ಸಲಹೆ ನೀಡಿದ್ದಾರೆ.
“ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಘೋಷಿಸಿದ ‘ಗ್ಯಾರಂಟಿ’ ಯೋಜನೆಗಳು ಯಶಸ್ವಿಯಾಗಿವೆ. ಈ ಯೋಜನೆಗಳ ಬಗ್ಗೆ ಜನವರಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮತ್ತು ವಿಧಾನ ಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ‘ಗ್ಯಾರಂಟಿ’ ಯೋಜನೆಗಳ ಪ್ರಯೋಜನದ ಪಡೆದ ಫಲಾನುಭವಿಗಳನ್ನು ಒಂದೆಡೆ ಸೇರಿಸಬೇಕು. ಆ ಮೂಲಕ, ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು” ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.
“ಗ್ಯಾರಂಟಿಗಳ ಬಗ್ಗೆ ಪಂಚಾಯತಿ ಮಟ್ಟದಲ್ಲಿ ಸಮಾವೇಶ ಮಾಡಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡುವ ಮೂಲಕ ಜನರಿಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು” ಎಂದು ತಿಳಿಸಿದ್ದಾರೆ.
“ಬೂತ್ ಮತ್ತು ಬ್ಲಾಕ್ ಮಟ್ಟದಲ್ಲಿ ಹೆಚ್ಚೆಚ್ಚು ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಗೊಳಿಸಬೇಕು. ಆಯಾ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ತಂದುಕೊಡುವಂತೆ ಪ್ರಯತ್ನ ನಡೆಸಬೇಕು. ಆದಷ್ಟು ಬೇಗ ಸಂಭಾವ್ಯ ಅಭ್ಯರ್ಥಿಗಳ ವರದಿ ಸಿದ್ದಪಡಿಸಿ ಕೆಪಿಸಿಸಿಗೆ ರವಾನಿಸುವಂತೆ” ಸಿಎಂ ಸೂಚನೆ ನೀಡಿದ್ದಾರೆ.
₹25 ಕೋಟಿ ವಿಶೇಷ ಅನುದಾನ; ಶಾಸಕರಿಂದ ಅಭಿನಂದನೆ
“ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರಿಗೆ ₹25 ಕೋಟಿ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದಕ್ಕೆ ಎಲ್ಲ ಶಾಸಕರು ಮುಖ್ಯಮಂತ್ರಿ ಅವರನ್ನು ಅಭಿನಂದಿಸಿದರು. ಮುಂದಿನ ಬಜೆಟ್ ಬಳಿಕ ಎಲ್ಲ ಶಾಸಕರ ಬೇಡಿಕೆಗಳ ಬಗ್ಗೆ ವಿಶೇಷ ಗಮನಹರಿಸಲಾಗುವುದು. ಅಲ್ಲದೆ ಇನ್ನಷ್ಟು ವಿಶೇಷ ಅನುದಾನ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು” ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
“ಈ ಹಿಂದಿನ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗದ ಕೆಲವು ಶಾಸಕರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಕ್ಷೇತ್ರದಲ್ಲಿ ಮನೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಶಾಸಕರು ಅಹವಾಲು ತೋಡಿಕೊಂಡರು. ಆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು” ಎಂದು ತಿಳಿದುಬಂದಿದೆ.
ಸಚಿವರ ಗೈರು: ಸಿದ್ದರಾಮಯ್ಯ ಅಸಮಾಧಾನ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಚಿವರಾದ ಪ್ರಿಯಾಂಕ್ ಖರ್ಗೆ,ಎಂ.ಬಿ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ಜಮೀರ್ ಅಹಮದ್,ಸತೀಶ್ ಜಾರಕಿಹೊಳಿ,ಶರಣಬಸಪ್ಪ ದರ್ಶನಾಪುರ್ ಸೇರಿದಂತೆ ಕೆಲ ಸಚಿವರ ಗೈರಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವರು, ಶಾಸಕರ ನಡುವೆ ಸಮನ್ವಯತೆಗಾಗಿ ಇರುವ ಶಾಸಕಾಂಗ ಸಭೆಗೆ ಸಚಿವರೇ ಗೈರಾದರೆ ಹೇಗೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.