ಬೆಳಗಾವಿ: ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಪಾಡಿಕೊಂಡಿರುವ ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಬುಧವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ ಔತಣಕೂಟದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾಗವಹಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಈ ಇಬ್ಬರು ನಾಯಕರು ಕಾಂಗೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುವ ನೆಪದಲ್ಲಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗಾಗಲೇ ಈ ಇಬ್ಬರೂ ಶಾಸಕರು ಭೇಟಿ ಮಾಡಿದ್ದಾರೆ.
ಆರ್ ಅಶೋಕ ಪ್ರತಿಕ್ರಿಯೆ ಏನು?
“ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರು ಹೋಗಿರುವ ವಿಚಾರವಾಗಿ ಕರೆದು ಮಾತನಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಸುವರ್ಣಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ಸಿಎಲ್‌ಪಿ ಸಭೆಗೆ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ಎಚ್.ವಿಶ್ವನಾಥ್ ಹೋಗಿರುವ ವಿಚಾರ ತಿಳಿದಿದೆ. ಊಟಕ್ಕೆ ಕರೆದಿದ್ದರು ಅದಕ್ಕಾಗಿ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ” ಎಂದರು.
ಬೋಜನಕೂಟಕ್ಕೂ ಮೊದಲು ಕಾಂಗ್ರೆಸ್ ಶಾಸಕರ ಸಭೆ ನಡೆಯಿತು. ವಿಧಾನಸಭೆ ತಡವಾಗಿ ಮುಕ್ತಾಯವಾದ ಕಾರಣ ಎಲ್ಲ ಶಾಸಕರು ಬಂದು ಸೇರುವುದು ವಿಳಂಬವಾಯಿತು. ಹೀಗಾಗಿ ವಿಳಂಬವಾಗಿ ಸಭೆ ಆರಂಭವಾಯಿತು. ಸಭೆಯಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಭಾಗವಹಿಸಲಿಲ್ಲ. ಆದರೆ, ಭೋಜನದಲ್ಲಿ ಎಲ್ಲರ ಜೊತೆ ಭಾಗವಹಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.