Homeಕರ್ನಾಟಕಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳು: ಬಿ.ಕೆ. ಹರಿಪ್ರಸಾದ್

ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳು: ಬಿ.ಕೆ. ಹರಿಪ್ರಸಾದ್

ಭಾರತದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ, ಪಾರದರ್ಶಕತೆ ಹಾಗೂ ಪಕ್ಷಾತೀತ ಪರಂಪರೆಯ ಕುರಿತು ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳು ಎದ್ದಿವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅವಧಿಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಯೋಗದ ನಿರ್ಧಾರಗಳು ಹಾಗೂ ಕಾರ್ಯವಿಧಾನಗಳ ಬಗ್ಗೆ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಯಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ದೇಶದ ಪ್ರತಿಷ್ಠಿತ ಪತ್ರಿಕೆಯೊಂದರ ತನಿಖಾ ವರದಿಯನ್ನು ಉಲ್ಲೇಖಿಸಿದ ಹರಿಪ್ರಸಾದ್, ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿರುವ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳು ಹಾಗೂ ಆದೇಶಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಮತದಾರರ ಸೇರ್ಪಡೆ ಮತ್ತು ತೆಗೆದುಹಾಕುವಿಕೆ, Form-6, ಚುನಾವಣಾ ಪಟ್ಟಿಯ ಡಿಜಿಟಲ್ ವ್ಯವಸ್ಥೆ ಸೇರಿದಂತೆ ಪ್ರಜಾಪ್ರಭುತ್ವದ ಮೂಲಭೂತ ವಿಚಾರಗಳಿಗೆ ಸಂಬಂಧಿಸಿದಂತೆ ಆಕ್ಷೇಪಗಳು ದಾಖಲಾಗಿವೆ ಎಂಬುದು ವರದಿಯಲ್ಲಿದೆ. ಎಸ್‌ಐಆರ್ ಪ್ರಕ್ರಿಯೆಯ Form-6ನಲ್ಲಿ ಮಾಡಲಾದ ಬದಲಾವಣೆಯನ್ನು ಆಯುಕ್ತರೇ “unauthorised and illegal” ಎಂದು ಆಕ್ಷೇಪಿಸಿದ್ದಾರೆ ಎಂಬ ವರದಿಯೂ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗವು ಯಾವುದೇ ಒಬ್ಬ ವ್ಯಕ್ತಿಯ ಕಚೇರಿಯಲ್ಲ. ಅದು ಮೂವರು ಸದಸ್ಯರ ಸಾಂವಿಧಾನಿಕ ಸಂಸ್ಥೆ. ಇಬ್ಬರು ಚುನಾವಣಾ ಆಯುಕ್ತರಿಗೇ ಕೆಲವು ನಿರ್ಧಾರಗಳ ಬಗ್ಗೆ ಮಾಹಿತಿ ಇರಲಿಲ್ಲ ಎಂದಾದರೆ, ಅಂತಹ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು, ಯಾರ ಅನುಮೋದನೆಯಿತ್ತು ಹಾಗೂ ಯಾರ ಸೂಚನೆಯ ಮೇರೆಗೆ ಆಯೋಗದ ಹೆಸರಿನಲ್ಲಿ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ದೇಶದ ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗ ಯಾವುದೇ ಸರ್ಕಾರದ ಅಧೀನ ಸಂಸ್ಥೆಯೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ಚುನಾವಣಾ ಏಜೆನ್ಸಿಯೂ ಅಲ್ಲ. ಅದು ಪ್ರತಿಯೊಬ್ಬ ಭಾರತೀಯ ಮತದಾರನ ಮತದಾನದ ಹಕ್ಕನ್ನು ರಕ್ಷಿಸುವ ಸಾಂವಿಧಾನಿಕ ಸಂಸ್ಥೆಯಾಗಿದೆ. ಆದ್ದರಿಂದ ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಕ್ರಮ ಅತ್ಯಂತ ಪಾರದರ್ಶಕ ಹಾಗೂ ಕಾನೂನುಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.

‘ವೋಟ್ ಚೋರಿ’ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಾಖಲೆಗಳನ್ನು ಮುಂದಿಟ್ಟು ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಚುನಾವಣೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಇದೀಗ ಆಯೋಗದ ಇಬ್ಬರು ಸದಸ್ಯರೇ ದಾಖಲಿಸಿರುವ ಆಕ್ಷೇಪಗಳ ಕುರಿತು ಚುನಾವಣಾ ಆಯೋಗ ತನ್ನ ನಿಲುವನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗದ ಸ್ವತಂತ್ರತೆ ಮತ್ತು ನಿಷ್ಪಕ್ಷಪಾತಿತನದ ಬಗ್ಗೆ ಜನರಲ್ಲಿ ಅನುಮಾನ ಮೂಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಜ್ಞಾನೇಶ್ ಕುಮಾರ್ ಅವರ ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿರುವ ವಿವಾದಿತ ನಿರ್ಧಾರಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾಂವಿಧಾನಿಕ ಸಂಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳ ಕುರಿತು ನ್ಯಾಯಾಂಗ ತನಿಖೆಗೆ ಕ್ರಮ ಕೈಗೊಳ್ಳಬೇಕು. ತನಿಖೆಯ ಫಲಿತಾಂಶದ ಆಧಾರದ ಮೇಲೆ ಕಾನೂನುಬದ್ಧ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗದ ಘನತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments