Homeಕರ್ನಾಟಕತ್ಯಾಗ ನಮ್ಮ ಸಂಸ್ಕೃತಿ, ಸಂಗ್ರಹ ಪಾಶ್ಚಿಮಾತ್ಯರ ಸಂಸ್ಕೃತಿ: ಬಸವರಾಜ ಬೊಮ್ಮಾಯಿ

ತ್ಯಾಗ ನಮ್ಮ ಸಂಸ್ಕೃತಿ, ಸಂಗ್ರಹ ಪಾಶ್ಚಿಮಾತ್ಯರ ಸಂಸ್ಕೃತಿ: ಬಸವರಾಜ ಬೊಮ್ಮಾಯಿ

ಎಸ್. ಷಡಕ್ಷರಿ ಅವರು ತಮ್ಮ ಬದುಕಿನಲ್ಲಿ ಅಕ್ಷರಗಳೊಂದಿಗೆ ಶಾಶ್ವತ ಸಂಬಂಧ ಬೆಳೆಸಿಕೊಂಡಿದ್ದು, ಅವರ ಬದುಕಿನ ಬ್ಯಾಲೆನ್ಸ್ ಶೀಟ್ ಅತ್ಯಂತ ಸುಂದರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ’ ಹಾಗೂ ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು’ ಭಾಗ-16 ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ನಿರಂತರವಾಗಿ ‘ಅಣಿ ಮುತ್ತು’ ಕೃತಿಗಳನ್ನು ರಚಿಸುತ್ತಿರುವ ಎಸ್. ಷಡಕ್ಷರಿ ಅವರನ್ನು ‘ಸದಾಕ್ಷರಿ’ ಎಂದು ಕರೆಯಬಹುದು. ಹಣದ ಹಿಂದೆ ಹೋಗುವವರು ಅಂಕಿಗಳೊಂದಿಗೆ ಸಂಬಂಧ ಇಟ್ಟುಕೊಂಡರೆ, ಷಡಕ್ಷರಿ ಅವರು ಅಕ್ಷರಗಳೊಂದಿಗೆ ಶಾಶ್ವತ ಸಂಬಂಧ ಬೆಳೆಸಿಕೊಂಡಿದ್ದಾರೆ. ಕರ್ತವ್ಯವೇ ಕಾಯಕ. ಕರ್ತವ್ಯದ ಫಲವನ್ನು ಇತರರಿಗೆ ಹಂಚಿದಾಗ ಅದು ಕಾಯಕವಾಗುತ್ತದೆ. ಷಡಕ್ಷರಿ ಅವರು ತಮ್ಮ ಕರ್ತವ್ಯವನ್ನು ಕಾಯಕವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅವರ ಹಾಸ್ಯಪ್ರಜ್ಞೆ ಹಾಗೂ ನಿರಂತರ ಕ್ರಿಯಾಶೀಲ ಬರವಣಿಗೆಯಿಂದಾಗಿ ಅವರ ವಯಸ್ಸು ಯಾರಿಗೂ ಗೋಚರಿಸುವುದಿಲ್ಲ ಎಂದು ಹೇಳಿದರು.

ನಮ್ಮದು ತ್ಯಾಗದ ಸಂಸ್ಕೃತಿ

ಭಾರತ ವಿಭಿನ್ನ ಚಿಂತನೆ ಹಾಗೂ ಸಂಸ್ಕೃತಿಗಳಿರುವ ದೇಶ. ಪಾಶ್ಚಿಮಾತ್ಯ ತತ್ವಜ್ಞಾನಿಗಳಿಗೆ ಇಂದಿಗೂ ಭಾರತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದರೆ, ನಾವು ಆಧ್ಯಾತ್ಮಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. ತ್ಯಾಗ ಮಾಡುವುದು ನಮ್ಮ ಸಂಸ್ಕೃತಿಯಾದರೆ, ಸಂಗ್ರಹಿಸುವುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ ಎಂದರು.

ಅಲೆಕ್ಸಾಂಡರ್‌ಗೆ ಆತನ ಗುರು ಅರಿಸ್ಟಾಟಲ್, ಭಾರತವನ್ನು ಗೆದ್ದರೆ ಜಗತ್ತನ್ನೇ ಗೆದ್ದಂತೆ ಎಂದು ಹೇಳಿದ್ದರ ಕುರಿತಾದ ಪ್ರಸಂಗವನ್ನು ಉಲ್ಲೇಖಿಸಿದ ಬೊಮ್ಮಾಯಿ, ಭಾರತಕ್ಕೆ ಬಂದ ತತ್ವಜ್ಞಾನಿಯೊಬ್ಬರು ಇಲ್ಲಿನ ಸಂತರನ್ನು ನಿಮ್ಮ ಮತ್ತು ನಮ್ಮ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನಿಸಿದಾಗ, ನಿಮ್ಮ ರಾಜ ಇಡೀ ಜಗತ್ತನ್ನು ಗೆಲ್ಲಲು ಹೊರಟಿದ್ದಾನೆ, ಅದೇ ನಿಮ್ಮ ತತ್ವಜ್ಞಾನ. ನಾವು ಈಗ ನಿಂತಿರುವುದಷ್ಟೇ ನಮ್ಮದು, ಇದೇ ನಮ್ಮ ತತ್ವಜ್ಞಾನ ಎಂದು ಸಂತರು ಉತ್ತರಿಸಿದ್ದರು. ಇಂತಹ ಉದಾತ್ತ ಚಿಂತನೆಗಳು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತವೆ ಎಂದು ಹೇಳಿದರು.

ಸಂಸ್ಕೃತಿ ಮತ್ತು ನಾಗರಿಕತೆಯ ನಡುವೆ ವ್ಯತ್ಯಾಸವಿದೆ

ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ, ನಾವೇನಾಗಿದ್ದೇವೋ ಅದು ಸಂಸ್ಕೃತಿ. ಸಂಸ್ಕೃತಿ ಮತ್ತು ನಾಗರಿಕತೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಕುತೂಹಲ ಮತ್ತು ಮುಗ್ಧತೆ ಮಕ್ಕಳಲ್ಲಿ ಮಾತ್ರ ಸಹಜವಾಗಿ ಕಾಣಸಿಗುವ ಗುಣಗಳು. ಹುಟ್ಟಿದಾಗ ಇರುವ ಮುಗ್ಧತೆಯನ್ನು ಜೀವನದುದ್ದಕ್ಕೂ ಕಾಪಾಡಿಕೊಳ್ಳುವುದೇ ನಿಜವಾದ ಸಾಧನೆ. ಈ ಗುಣಗಳನ್ನು ಷಡಕ್ಷರಿ ಅವರಲ್ಲಿ ಕಾಣಬಹುದು. ಅವರ ಲೇಖನಗಳಲ್ಲಿ ಇಂತಹ ಅನೇಕ ಉತ್ತಮ ವಿಚಾರಗಳು ಪ್ರತಿಬಿಂಬಿತವಾಗಿವೆ. ಅವರ ಜನ್ಮದಿನವನ್ನು ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಾಧಕನಿಗೆ ಸಾವಿನ ಅಂತ್ಯವಿಲ್ಲ

ಯಶಸ್ಸು ಕಂಡವರು ಮತ್ತು ನಿಜವಾದ ಸಾಧಕರ ನಡುವೆ ವ್ಯತ್ಯಾಸವಿದೆ. ಸಾಧಕ ತನ್ನೊಬ್ಬನಿಗಾಗಿ ಮಾತ್ರವಲ್ಲ, ಇಡೀ ಮನುಕುಲದ ಒಳಿತಿಗಾಗಿ ಬದುಕುತ್ತಾನೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ನಿಜವಾದ ಸಾಧಕ ಸಾವಿನ ನಂತರವೂ ತನ್ನ ಚಿಂತನೆ ಹಾಗೂ ಕಾರ್ಯಗಳ ಮೂಲಕ ಜೀವಂತವಾಗಿರುತ್ತಾನೆ ಎಂದು ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರಧಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರನ್ನು ಸಮಾಜದ ಅಮೂಲ್ಯ ರತ್ನಗಳೆಂದು ಬಣ್ಣಿಸಲಾಯಿತು.

ಮಂಡ್ಯದ ಚಿನ್ಮಯ ಮಿಷನ್‌ನ ಸ್ವಾಮಿ ಆದಿತ್ಯಾನಂದಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿ ಮುತ್ತು’ ಭಾಗ-16 ಕೃತಿಯನ್ನು ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ, ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್, ‘ಕನ್ನಡಪ್ರಭ’ ಸಂಪಾದಕ ರವಿ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments