ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂಆರ್ಒ) ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಮಂಗಳವಾರ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಭೂಮಿಪೂಜೆ ನೆರವೇರಿಸಿದರು.
2,100 ನೇರ ಉದ್ಯೋಗ ಸೃಷ್ಟಿ; 2031ರೊಳಗೆ ಏರೋಸ್ಪೇಸ್ ವಲಯಕ್ಕೆ ₹60 ಸಾವಿರ ಕೋಟಿ ಹೂಡಿಕೆ ಆಕರ್ಷಣೆ ಗುರಿ
ಈ ಘಟಕದ ಸ್ಥಾಪನೆಗೆ ರಾಜ್ಯ ಸರ್ಕಾರ 26 ಎಕರೆ ಜಮೀನು ಒದಗಿಸಿದ್ದು, ಇದರಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಈ ಘಟಕದ ಮೂಲಕ ಏಷ್ಯಾ-ಪೆಸಿಫಿಕ್ ಪ್ರದೇಶದ ವಿಮಾನ ನಿರ್ವಹಣಾ ಸೇವೆಗಳ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ಶೇ.65ರಷ್ಟು ಪಾಲು ಹೊಂದಿದೆ. ನೂತನ ಎಂಆರ್ಒ ಘಟಕದಿಂದ ವಿಮಾನ ಸೇವೆಗಳ ರಫ್ತು ವಹಿವಾಟಿಗೂ ಉತ್ತೇಜನ ದೊರೆಯಲಿದೆ. ಕಂಪನಿಯು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಕಳೆದ ವರ್ಷ ನವೆಂಬರ್ನಲ್ಲಿ ದೇವನಹಳ್ಳಿಯಲ್ಲೇ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಡಿ 2031ರ ವೇಳೆಗೆ ಈ ವಲಯದಲ್ಲಿ ₹60 ಸಾವಿರ ಕೋಟಿ ಬಂಡವಾಳ ಆಕರ್ಷಿಸುವ ಹಾಗೂ 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ವಿಮಾನ ತಯಾರಿಕೆಗೆ ಪೂರಕವಾದ ಸಮಗ್ರ ಪರಿಸರ ನಿರ್ಮಾಣ, ಎಂಆರ್ಒ ಘಟಕಗಳ ಅಭಿವೃದ್ಧಿ, ರಕ್ಷಣಾ ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವುದು ನೀತಿಯ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು.
ಜಾಗತಿಕ ಮಟ್ಟದ ಮೂಲ ಉಪಕರಣ ತಯಾರಿಕಾ (ಒಇಎಂ) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಇಂತಹ ಮೊದಲ ಘಟಕ ಇದಾಗಿದೆ. ಎಟಿಆರ್ 42 ಮತ್ತು ಎಟಿಆರ್ 72 ವಿಮಾನಗಳಲ್ಲಿನ 568ಎಫ್ ಮಾದರಿಯ ಪ್ರೊಪೆಲ್ಲರ್ಗಳು ಹಾಗೂ ಭಾರತೀಯ ಸೇನೆಯ ಸಿ295 ವಿಮಾನಗಳಿಗೆ ಅಗತ್ಯವಿರುವ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಈ ಘಟಕ ಒದಗಿಸಲಿದೆ. ಇದರಿಂದ ಬೆಂಗಳೂರು ಏಷ್ಯಾ-ಪೆಸಿಫಿಕ್ ವಲಯದ ಪ್ರಮುಖ ವಿಮಾನ ಸೇವಾ ಕೇಂದ್ರವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಏಪ್ರಿಲ್ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಜಾಗತಿಕ ಒಇಎಂ ಕಂಪನಿಗಳು, ಟೈಯರ್-1 ಕಂಪನಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಒಳಗೊಂಡ ವಿಶೇಷ ಸಮಾವೇಶ ಆಯೋಜಿಸಲಾಗುವುದು ಎಂದರು.
ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲ ವಿಸ್ತರಣೆಯಾಗುತ್ತಿದ್ದು, ರಕ್ಷಣಾ ವಲಯದಲ್ಲಿಯೂ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಸೇವೆಗಳ ಅಗತ್ಯ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಸ್ಥಳೀಯವಾಗಿಯೇ ಎಂಆರ್ಒ ಘಟಕಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಇದರಿಂದ ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಆರ್ಥಿಕ ಬೆಳವಣಿಗೆಗೂ ನೆರವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನೂ ರೂಪಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಈ ನೀತಿಯು ಕೇಂದ್ರದ ಉಡಾನ್ ಯೋಜನೆಗೂ ಪೂರಕವಾಗಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್, ಪ್ರೊಪೆಲ್ಲರ್ ಸಿಸ್ಟಮ್ಸ್ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಂಪನಿಯ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


