ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಗಳಿಸುವುದು ಮುಖ್ಯವಾದರೂ, ಅದರ ಬೆನ್ನತ್ತಿ ಸತ್ಯನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು. ಪತ್ರಕರ್ತರ ಪ್ರತಿಯೊಂದು ಬರಹವೂ ಸಮಾಜದ ಮೇಲೆ ಪರಿಣಾಮ ಬೀರುವ ಶಕ್ತಿ ಹೊಂದಿದ್ದು, ಸತ್ಯಾಸತ್ಯತೆ ಪರಿಶೀಲಿಸಿ, ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯೊಂದಿಗೆ ವರದಿ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಜೀವಾಳ. ಸಮಾಜದಲ್ಲಿ ಸಮಾನತೆ ಸ್ಥಾಪನೆ, ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಅಭಿವೃದ್ಧಿ ವಿಚಾರಗಳನ್ನು ಮುನ್ನೆಲೆಗೆ ತರುವುದು ಹಾಗೂ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪತ್ರಿಕಾ ಸ್ವಾತಂತ್ರ್ಯದ ಕುರಿತು ಪಂಡಿತ್ ಜವಾಹರಲಾಲ್ ನೆಹರು ಅವರ ನಿಲುವನ್ನು ಸ್ಮರಿಸಿದ ಅವರು, ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದಿಂದ ಅಪಾಯಗಳಿದ್ದರೂ, ನಿರ್ಬಂಧಿತ ಪತ್ರಿಕೆಗಳಿಗಿಂತ ಸಂಪೂರ್ಣ ಸ್ವತಂತ್ರ ಪತ್ರಿಕಾ ವ್ಯವಸ್ಥೆಯನ್ನೇ ತಾವು ಹೆಚ್ಚು ಇಷ್ಟಪಡುತ್ತೇನೆ ಎಂಬ ನೆಹರು ಅವರ ಅಭಿಪ್ರಾಯವನ್ನು ಉಲ್ಲೇಖಿಸಿದರು. ಪತ್ರಿಕಾ ಸ್ವಾತಂತ್ರ್ಯ ಕೇವಲ ಘೋಷಣೆಯಲ್ಲ, ಅದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಎಂಬುದನ್ನು ನೆಹರು ಅರಿತಿದ್ದರು ಎಂದು ಹೇಳಿದರು.
ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ 1966ರ ನವೆಂಬರ್ 16ರಂದು ಭಾರತೀಯ ಪತ್ರಿಕಾ ಮಂಡಳಿ ಕಾರ್ಯಾರಂಭ ಮಾಡಿತು. ಈ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಪತ್ರಿಕೋದ್ಯಮದ ಪಯಣವನ್ನು ಅವಲೋಕಿಸಿ, ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಕೊಡುಗೆಯನ್ನು ಮೌಲ್ಯಮಾಪನ ಮಾಡಬೇಕಿದೆ ಎಂದರು.
ಒಂದು ಲೇಖನದ ಪರಿಣಾಮ ಅಗಾಧ
ಪತ್ರಕರ್ತರ ಬರಹ ಸಮಾಜದ ಮೇಲೆ ಎಂತಹ ಪ್ರಭಾವ ಬೀರಬಲ್ಲದು ಎಂಬುದಕ್ಕೆ ತಮ್ಮ ವಿದ್ಯಾರ್ಥಿ ಜೀವನದ ಘಟನೆಯೊಂದನ್ನು ನೆನಪಿಸಿಕೊಂಡ ಡಾ. ಪರಮೇಶ್ವರ, 1970ರ ದಶಕದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಹಿನ್ನೆಲೆಯಲ್ಲಿ ಅದರ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಉಲ್ಲೇಖಿಸಿದರು.
ಒಂದು ಲೇಖನ ಸಮಾಜದಲ್ಲಿ ಬದಲಾವಣೆ ತರಬಲ್ಲದು. ಅದೇ ರೀತಿ ತಪ್ಪಾಗಿ ಅರ್ಥೈಸಲ್ಪಟ್ಟ ಅಥವಾ ಜವಾಬ್ದಾರಿಯಿಲ್ಲದೆ ಪ್ರಕಟವಾದ ಬರಹ ವಿನಾಶಕಾರಿ ಪರಿಣಾಮವನ್ನೂ ಉಂಟುಮಾಡಬಹುದು. ಸಾರ್ವಜನಿಕ ಜೀವನದಲ್ಲಿ 40-50 ವರ್ಷಗಳ ಕಾಲ ದುಡಿದು ಗೌರವ ಗಳಿಸಿದ ವ್ಯಕ್ತಿಯ ವ್ಯಕ್ತಿತ್ವಕ್ಕೂ ಒಂದೇ ಒಂದು ಲೇಖನ ಧಕ್ಕೆ ತರಬಹುದು. ಹೀಗಾಗಿ ಬರಹದ ಉದ್ದೇಶ, ಹಿನ್ನೆಲೆ ಹಾಗೂ ಪರಿಣಾಮಗಳ ಬಗ್ಗೆ ಪತ್ರಕರ್ತರು ಗಂಭೀರವಾಗಿ ಯೋಚಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಪಿ-ಪೇಸ್ಟ್ ಸಂಸ್ಕೃತಿ ಸಲ್ಲದು
ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಸ್ವಂತ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಬರವಣಿಗೆ ಕಡಿಮೆಯಾಗುತ್ತಿರುವುದು ಆತಂಕಕಾರಿ. ಕೀಬೋರ್ಡ್ ಮತ್ತು ಮೊಬೈಲ್ ಮೂಲಕ ಸುದ್ದಿ ರವಾನಿಸುವ ತಂತ್ರಜ್ಞಾನ ಬೆಳೆದಿದ್ದರೂ, ಪತ್ರಕರ್ತರ ಅಧ್ಯಯನ, ಸ್ವಂತಿಕೆ ಹಾಗೂ ಆಳವಾದ ಚಿಂತನೆ ಕುಂದಬಾರದು. ಕಾಪಿ-ಪೇಸ್ಟ್ ಸಂಸ್ಕೃತಿಯಿಂದ ಪತ್ರಕರ್ತರ ಪ್ರತಿಭೆ ಬೆಳೆಯುವುದಿಲ್ಲ. ವಿಷಯದ ಹಿನ್ನೆಲೆ ಅರಿತು, ಸ್ವಂತ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ಕೇವಲ ಘಟನೆಗಳನ್ನು ವರದಿ ಮಾಡುವುದಕ್ಕೆ ಸೀಮಿತವಾಗಬಾರದು. ವಿಷಯದ ಆಳಕ್ಕೆ ಇಳಿದು ಅಧ್ಯಯನ ನಡೆಸಿ, ಅದರ ಸಾಮಾಜಿಕ ಪರಿಣಾಮಗಳನ್ನು ವಿಶ್ಲೇಷಿಸುವುದು ಅಗತ್ಯ. ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿರುವ ವಿಶ್ಲೇಷಣಾತ್ಮಕ ಪತ್ರಿಕೋದ್ಯಮದ ಮಾದರಿಯನ್ನು ಅಧ್ಯಯನ ಮಾಡಬೇಕು. ಯುವ ಪತ್ರಕರ್ತರು ಈ ನಿಟ್ಟಿನಲ್ಲಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಜಿಟಲ್ ಮಾಧ್ಯಮಗಳು ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸುವ ಅವಕಾಶ ಕಲ್ಪಿಸಿವೆ. ಆದರೆ ವೇಗದ ವರದಿಗಾರಿಕೆಯ ಭರದಲ್ಲಿ ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗಬಾರದು. ತಂತ್ರಜ್ಞಾನದ ಬಳಕೆಯಲ್ಲಿ ಜವಾಬ್ದಾರಿ ಹಾಗೂ ವಿವೇಚನೆ ಇರಬೇಕು ಎಂದು ಎಚ್ಚರಿಸಿದರು.
ಜನಪ್ರಿಯತೆ ಮತ್ತು ಜವಾಬ್ದಾರಿ ಪರಸ್ಪರ ಪೂರಕ
ಪ್ರಸ್ತುತ ಮಾಧ್ಯಮ ಸಂಸ್ಥೆಗಳನ್ನು ನಡೆಸುವುದು ಸವಾಲಿನ ಕೆಲಸ. ಅವುಗಳ ಅಸ್ತಿತ್ವ ಮತ್ತು ನಿರ್ವಹಣೆಗೆ ಜನಪ್ರಿಯತೆ ಅಗತ್ಯ. ಆದರೆ ಜನಪ್ರಿಯತೆ ಗಳಿಸುವ ಪ್ರಯತ್ನದಲ್ಲಿ ಪತ್ರಿಕೋದ್ಯಮದ ಮೂಲ ಮೌಲ್ಯಗಳನ್ನು ಬಲಿಕೊಡಬಾರದು. ಜನಪ್ರಿಯತೆ ಮತ್ತು ಜವಾಬ್ದಾರಿ ಎರಡೂ ಪರಸ್ಪರ ಪೂರಕವಾಗಿದ್ದು, ಅವುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವುದರ ಜತೆಗೆ ಜನರ ಬದುಕಿನ ವಾಸ್ತವಗಳನ್ನು ಪ್ರತಿಬಿಂಬಿಸುವುದು ಪತ್ರಿಕೋದ್ಯಮದ ಮುಖ್ಯ ಕರ್ತವ್ಯ. ಪತ್ರಕರ್ತರ ಪ್ರತಿಯೊಂದು ಬರಹದಲ್ಲೂ ಸತ್ಯನಿಷ್ಠೆ, ಸ್ವಂತಿಕೆ ಮತ್ತು ಸಾಮಾಜಿಕ ಕಳಕಳಿ ಇರಬೇಕು. ಆಗ ಮಾತ್ರ ಮಾಧ್ಯಮಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ರಾಷ್ಟ್ರ ನಿರ್ಮಾಣದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಮಾಜಿ ಸಂವಹನ ಸಲಹೆಗಾರ ಪಂಕಜ್ ಪಚೌರಿ, ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಸಹ ಸಂಪಾದಕ ಎಸ್.ಆರ್. ರಾಮಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


