ನಾವು ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದಕ್ಕಿಂತ ಹೆಚ್ಚಾಗಿ ನಮ್ಮ ಶಾಸಕರನ್ನು ಒಡೆಯಲು ನಡೆಸಿದ ಯತ್ನವನ್ನು ವಿಫಲಗೊಳಿಸಲು ಸ್ಪರ್ಧೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಫಲಿತಾಂಶಕ್ಕೂ ಮುನ್ನವೇ ಪರೋಕ್ಷವಾಗಿ ಸೋಲು ಒಪ್ಪಿಕೊಂಡ ರೀತಿಯಲ್ಲಿ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾವು 19 ಜನರು ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕೊಡಲು ಈ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ” ಎಂದರು.
“ಶರಣ್‌ಗೌಡ ಕಂದಕೂರ್ ನಮ್ಮ ಕುಟುಂಬದ ಸದಸ್ಯ. ಕುಟುಂಬದವರು ಎಲ್ಲರೂ ಒಟ್ಟಾಗಿದ್ದೇವೆ ಎಂದು ತಿಳಿಸುವ ಉದ್ದೇಶದಿಂದ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ” ಎಂದು ತಿಳಿಸಿದರು.
ಡಿ ಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, “ಆಮಿಷ ಹಾಗೂ ಧಮ್ಕಿ ಎಂಬುದು ಕಾಂಗ್ರೆಸ್ ಸಂಸ್ಕೃತಿ. ಸರ್ಕಾರ ರಚನೆಯಾದ ದಿನದಿಂದ 12, 13 ಶಾಸಕರು ಕಾಂಗ್ರೆಸ್ ಬರಲು ಸಿದ್ದ ಎಂದಿದ್ದರು. ನಮ್ಮ ಶಾಸಕರಿಗೆ ಆಮಿಷ ಒಡ್ಡುವ ಕೆಲಸ ನಡೆಯುತ್ತಿತ್ತು. ನಮ್ಮ ಶಾಸಕರ ಬದ್ಧತೆ, ನಿಷ್ಠೆ ಸಾಬೀತು ಪಡಿಸಲು ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ” ಎಂದರು.
“ಎಸ್ ಟಿ ಸೋಮಶೇಖರ್ ಮೂರು ವರ್ಷ ಬಿಜೆಪಿಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕಾರಣಕ್ಕಾಗಿ ಬಿಜೆಪಿ ಸೇರಿದ್ದರು. ಮಂತ್ರಿಯಾಗಿ ಅಭಿವೃದ್ಧಿ ಕಾರ್ಯಕ್ರಮ ಯಚೇತ್ತವಾಗಿ ಪಡೆದುಕೊಂಡಿದ್ದು, ಅದು ಅಭಿವೃದ್ಧಿ ಮಾಡಿದ್ದಾರೆ ಎಂದು ಅರ್ಥ ಅಲ್ಲವೇ” ಎಂದು ಪ್ರಶ್ನಿಸಿದರು.
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮಂಗಳವಾರ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಸ್ಪರ್ಧೆಯಲ್ಲಿದ್ದು, ಚುನಾವಣೆ ಕಾವು ರಂಗೇರಿದೆ.
ಕಾಂಗ್ರೆಸ್‌ನಿಂದ ಜಿ ಸಿ ಚಂದ್ರಶೇಖರ್, ನಾಸೀರ್ ಹುಸೇನ್, ಅಜಯ್ ಮಾಕೇನ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧಿಸಿದ್ದಾರೆ. ಇನ್ನು, ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ನ ಮೂರು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.