ರಾಜ್ಯದಲ್ಲಿ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿ ಮಾಡದಿದ್ದರೆ ಕೇಂದ್ರ ಸರ್ಕಾರ ಅನುದಾನ ನಿಲ್ಲಿಸುವುದು ಸಾಧ್ಯವಿಲ್ಲ. ನಮ್ಮ ಮೇಲೆ ಒತ್ತಡ ಹಾಕುವುದು ಕೂಡ ಸರಿಯಲ್ಲ ಎಂದು ಸಚಿವ ಎಂ ಸಿ ಸುಧಾಕರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ಕೇರಳ ಹಾಗೂ ತಮಿಳುನಾಡು ಈಗಾಗಲೇ ತಮಗೆ ಅನುಕೂಲವಾಗುವಂತಹ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಅವಶ್ಯಕತೆ ಇದ್ದಂಥ ಯುಜಿಸಿ ಗೈಡ್ ಲೈನ್ ಗಳನ್ನು ಹೊಂದಿದ್ದಾರೆ. ಹಾಗಂತ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ” ಎಂದರು.
“ಕೇಂದ್ರ ಸರ್ಕಾರ 5 ವರ್ಷಕ್ಕೊಮ್ಮೆ ಮಾತ್ರ ಅನುದಾನ ನೀಡುತ್ತದೆ. ಅದರಲ್ಲಿ ಕೇಂದ್ರದ ಪಾಲು ಶೇಕಡ 60. ಆದರೆ ರಾಜ್ಯ ಸರ್ಕಾರದ ಪಾಲು ಶೇಕಡ 40 ಆಗಿರುತ್ತದೆ ಹಾಗಾಗಿ ಒತ್ತಡ ಪ್ರಕ್ರಿಯೆ ಸರಿಯಲ್ಲ” ಎಂದು ಹೇಳಿದರು.
“ವಿಶ್ವವಿದ್ಯಾಲಯಗಳಲ್ಲಿ ಎಲ್ ಐ ಸಿ ಸಮಿತಿಗಳ ವಿರುದ್ಧ ಆರೋಪ ಕೇಳಿ ಬಂದಿರುವುದು ನಿಜ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೂಕ್ತ ಬದಲಾವಣೆಗಳೊಂದಿಗೆ ತಿದ್ದುಪಡಿತರಲು ಚಿಂತಿಸಲಾಗುತ್ತಿದೆ” ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ರೆಸಾರ್ಟ್ ರಾಜಕಾರಣ ಅಲ್ಲ
“ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು ರೆಸಾರ್ಟ್ ಗೆ ತೆರಳುತ್ತಿದ್ದೇವೆ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ರಾಜ್ಯಸಭೆಗೆ ಮತದಾನ ಮಾಡುವಾಗ ಕೆಲವು ನಿಯಮಾವಳಿಗಳನ್ನು ಹಾಗೂ ಮತದಾನದ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕಾಗುತ್ತದೆ ಪ್ರಾಶಸ್ತ್ಯದ ಮತಗಳು ಇರುವುದರಿಂದ ಇದರ ಬಗ್ಗೆ ಎಲ್ಲರಿಗೂ ತಿಳಿಸಲು ಪಕ್ಷ ಸಭೆ ಕರೆದಿದೆ” ಎಂದರು.
“ರಾಜ್ಯಸಭೆಗೆ ಮತದಾನ ಮಾಡುವಾಗ ನೇರಳೆ ಬಣ್ಣದ ಸ್ಕೆಚ್ ಪೆನ್ ನಲ್ಲೆ ಮಾರ್ಕ್ ಮಾಡಬೇಕಾಗಿರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಕುಲಗೆಟ್ಟ ಮತವಾಗಬಾರದು ಎಂಬ ಕಾರಣಕ್ಕೆ ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಲು ಈ ಸಭೆ ಉಪಯುಕ್ತವಾಗಲಿದೆ” ಎಂದು ತಿಳಿಸಿದರು.