Homeಕರ್ನಾಟಕಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಕುಟುಕಿದ್ದ ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು. ಪಿಎಂ ಎಂದರೆ ನಾವು ಪ್ರಧಾನಮಂತ್ರಿ ಎಂದು ತಿಳಿದುಕೊಂಡಿದ್ದೇವೆ. ಇವರು ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು. ಕರ್ನಾಟಕ ರಾಜ್ಯದ ರಾಜಕಾರಣದ ಬಗ್ಗೆ ಕಮ್ಮಿ ಮಾತಾಡೋದು ಒಳ್ಳೆಯದು. ನರೇಂದ್ರ ಮೋದಿಯವರನ್ನು ನಾನು ಯಾವಾಗ ಬೇಕಾದರೂ ಇಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ. ಕರ್ನಾಟಕ ಸಿಎಂ ಕುರ್ಚಿ ಬಗ್ಗೆ ಮಾತಾಡುವ ಮೊದಲು, ಅವರ ಕುರ್ಚಿ ಗಟ್ಟಿಯಾಗಿದೆಯೇ ಎಂದು ನೋಡಿಕೊಳ್ಳಲಿ ಎಂದಿದ್ದಾರೆ.

ಎಪ್‍ಸ್ಟೀನ್ ಫೈಲ್ಸ್‌ನಲ್ಲಿ ಇವರ ಲೀಲೆಗಳು ಹೊರಗಡೆ ಬರುತ್ತೆ. ಆಗ ಚೇರ್‌ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಜನರಿಗೆ ಹೇಳಿದರೆ ಒಳ್ಳೆಯದು. ಮೊದಲು ಅದಕ್ಕೆ ಉತ್ತರ ಕೊಡಲಿ. ಈಗ ಗುಜರಾತ್ ಮಾಡೆಲ್ ಮರೆತು ಬಿಟ್ಟಿದ್ದಾರೆ. 12 ವರ್ಷಗಳ ಅರಾಜಕತೆ ಸೃಷ್ಟಿ ಮಾಡಿದವರು ಇವರು. ಬಿಹಾರದಲ್ಲಿ ನಿತೀಶ್ ಕುಮಾರ್, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಪ್ರಕಾಶಸಿಂಗ್ ಬಾದಲ್, ಎನ್‍ಸಿಪಿ ಯಾವ ರೀತಿ ಮುಗಿಸಿದರು. ಇದಕ್ಕೆಲ್ಲ ಕಾರಣ ಭಸ್ಮಾಸುರ ಆಗಿರುವ ನರೇಂದ್ರ ಮೋದಿ. ಅವರು ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು ಎಂದು ಕುಟುಕಿದ್ದಾರೆ.

ರಾಷ್ಟ್ರ ಅಧೋಗತಿಗೆ ಬಂದಿದೆ ಅನ್ನೋದು ಯಾರಿಗೂ ಕೂಡ ಗೊತ್ತಾಗ್ತಿಲ್ಲ. ಫೆ.28 ರಂದು ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾದ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಬಹಳ ಸ್ಪಷ್ಟವಾಗಿ ಹೇಳಿದ್ದರು. ದೇಶ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೆ, ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ಅವರ ಮಾತನ್ನು ಬಾಲಿಶ ಅಂತ ತಳ್ಳಿ ಹಾಕಿದ್ದರು. ಇವರಿಗೆ ನಾಲ್ಕು ತಿಂಗಳು ಚುನಾವಣೆ ಮಾಡಬೇಕಾಗಿತ್ತು. ಎಲ್ಲಿ ಹೋದರೂ ಕೂಡ ವಿರೋಧ ಪಕ್ಷವನ್ನು ನಂಬಬೇಡಿ, ಕಾಂಗ್ರೆಸ್ ನಂಬಬೇಡಿ ಸುಳ್ಳು ಹೇಳ್ತಿದ್ದಾರೆ ಎಂದಿದ್ದರು. ಯಾವುದೇ ತೊಂದರೆ ಆಗಲ್ಲ ಎಂದು ಭಾಷಣ ಬಿಗಿದರು.

ಈಗ ಪೆಟ್ರೋಲ್ ಮಿತವ್ಯಯ ಮಾಡಿ ಎಂದು ಹೇಳುತ್ತಿದ್ದಾರೆ. ಚಿನ್ನ ಖರೀದಿ ಮಾಡಬೇಡಿ, ಫಾರಿನ್ ಟೂರ್‌ಗೆ ಹೋಗಬೇಡಿ ಎನ್ನುತ್ತಿದ್ದಾರೆ. ಇವರು ಏನು ಮಾಡುತ್ತಿದ್ದಾರೆ? ಕಳೆದ 12 ವರ್ಷದಿಂದ ಇವರಿಗೆ ಯಾವ ಹೊಣೆಗಾರಿಕೆ ಇತ್ತು ಎಂದು ಹೇಳಲಿ. ಹೂಗ್ಲಿ ನದಿಯ ಬೋಟಲ್ಲಿ ಹೋಗುವಾಗ ಮಿತವ್ಯಯ ಕಾಣಲಿಲ್ವಾ? ಜಲ್ಮುರಿ ತಿನ್ನೋಕೆ ಹೋದಾಗ ಮಿತವ್ಯಯ ಕಂಡಿಲ್ಲ. ಸಿಕ್ಕಿಂನಲ್ಲಿ ಫುಟ್ಬಾಲ್ ಆಡೋಕೆ ಹೋದಾಗ ಕಾಣಲಿಲ್ಲ. ವಾರಾಣಸಿಯಲ್ಲಿ ದೇವಸ್ಥಾನದ ದರ್ಶನಕ್ಕೆ ಹೋದಾಗ ಕಾಣಲಿಲ್ಲ. ಬಂಗಾಳದಲ್ಲಿ ಲಕ್ಷಾಂತರ ಜನರ ಪಬ್ಲಿಕ್ ಮೀಟಿಂಗ್ ಮಾಡುವಾಗ ಮಿತವ್ಯಯ ಕಾಣಲಿಲ್ಲ. ನಾವು ಬೇರೆಯವರಿಗೆ ಹೇಳುವಾಗ ಮೊದಲು ಅನುಸರಿಸಬೇಕು. ಪ್ರಧಾನಿ ತಮ್ಮ ಮನೆಯಲ್ಲಿ ಮೊದಲು ಮಿತವ್ಯಯ ಪ್ರಾರಂಭ ಮಾಡಲಿ ಎಂದು ಹರಿಹಾಯ್ದರು.

ಮೋದಿ ಮಲೇಷ್ಯಾ, ಇಂಡೋನೇಷ್ಯಾದಿಂದ ಅಣಬೆ ತಂದು ತಿಂತಾರೆ, ಅದನ್ನು ನಿಲ್ಲಿಸಲಿ. ನಾಲ್ಕನೆಯ ಅತಿದೊಡ್ಡ ಆರ್ಥಿಕ ಶಕ್ತಿ ಎಂದು ಹೇಳುತ್ತಿದ್ದಾರೆ. ಆ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಹಿತ ಕಾಪಾಡುವ ಕೆಲಸ ಮಾಡಲಿ, ಜನಕ್ಕೆ ಪ್ರವಚನ ಕೊಡುವುದನ್ನು ನಿಲ್ಲಿಸಲಿ. ಕಳೆದ ಐದು ತಿಂಗಳ ಕಾಲ ಸರ್ಕಾರ ಏನು ಮಾಡ್ತಾ ಇದೆ ಎಂದು ಗೊತ್ತಿರಲಿಲ್ಲ. ಸರ್ಕಾರವನ್ನು ಇವರು ಆರ್‍ಎಸ್‌ಎಸ್‌ಗೆ ಔಟ್ ಸೋರ್ಸ್ ಮಾಡಿದ್ದಾರೆ. ಆರ್‌ಎಸ್‌ಎಸ್‌ನವರು ಸರ್ಕಾರ ನಡೆಸುತ್ತಿದ್ದಾರೆ. ಇವರ ಕೈಯಲ್ಲಿ ಏನೂ ಇಲ್ಲ. ವರ್ಕ್ ಫ್ರಮ್ ಹೋಮ್ ಮೊದಲು ನರೇಂದ್ರ ಮೋದಿ ಶುರು ಮಾಡಲಿ. ನೀವು ಮನೇಲಿ ಕೂತು ಪ್ರಚಾರ ಮಾಡಿ, ನಮಗೆ ಕೋಟಿ ದುಡ್ಡು ಉಳಿಯುತ್ತೆ. ಮಿತವ್ಯಯದ ಬಗ್ಗೆ ನರೇಂದ್ರ ಮೋದಿ ಹೇಳುವುದು ಹಾಸ್ಯಾಸ್ಪದ. ಇವರಂತಹ ಅಸಮರ್ಥ ದೇಶದ ಪ್ರಧಾನಿಯನ್ನು ಯಾವತ್ತು ನೋಡಿಲ್ಲ ಎಂದಿದ್ದಾರೆ.

ಇವರಿಗೆ ಎಂಟು ಸಾವಿರ ಕೋಟಿ ಏರೋಪ್ಲೇನ್ ಬೇಕು. ಮಿತವ್ಯಯ ಮಾಡಬೇಕಾದರೆ ಇವರು ಕಮರ್ಷಿಯಲ್ ಫ್ಲೈಟ್‌ಲ್ಲಿ ಓಡಾಡಲಿ. ಸಣ್ಣ ಕಾರಿನಲ್ಲಿ ಓಡಾಡಲಿ, ಇಂದಿರಾ ಗಾಂಧಿ ಅಂಬಾಸಿಡರ್ ಕಾರಿನಲ್ಲಿ ಓಡಾಡುತ್ತಿದ್ದರು. ಇವರು ಅಂತ ಕಾರು ಉಪಯೋಗಿಸಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಫಿಯೆಟ್ ಕಾರ್ ಇಟ್ಕೊಂಡಿದ್ರು. ಅಂತದ್ರಲ್ಲಿ ಇವರು ಓಡಾಡಲಿ. ಇವರು ಮಾಡೋದೆಲ್ಲ ಮಾಡಬಹುದು. ಜನ ಸಾಮಾನ್ಯರು ಜೀವನ ನಡೆಸುವುದಕ್ಕೆ ಕಷ್ಟ ಆಗ್ತಿದೆ ಅನ್ನೋದು ಇವರಿಗೆ ಅರ್ಥ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments