Homeಕರ್ನಾಟಕಕಾಂಗ್ರೆಸ್ ಸರ್ಕಾರ ಏನೇ ಬೊಬ್ಬೆ ಹೊಡೆದರೂ ಮುಂದೆ ಅಧಿಕಾರಕ್ಕೆ ಬರುವುದು ಬಿಜೆಪಿಯೇ: ಬಿ ವೈ ವಿಜಯೇಂದ್ರ

ಕಾಂಗ್ರೆಸ್ ಸರ್ಕಾರ ಏನೇ ಬೊಬ್ಬೆ ಹೊಡೆದರೂ ಮುಂದೆ ಅಧಿಕಾರಕ್ಕೆ ಬರುವುದು ಬಿಜೆಪಿಯೇ: ಬಿ ವೈ ವಿಜಯೇಂದ್ರ

ಈಗಿನ ಕಾಂಗ್ರೆಸ್ ಸರ್ಕಾರ ಏನೇ ಬೊಬ್ಬೆ ಹೊಡೆದರೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ವೃತ್ತಿಪರ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ನೇಕಾರರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ. ಮುಂದೆ ನಮ್ಮ ಸರ್ಕಾರ ನೇಕಾರರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ರೂಪಿಸಿ ಅನುಕೂಲ ಮಾಡಿಕೊಡಲಿದೆ” ಎಂದು ಭರವಸೆ ನೀಡಿದರು.

ನೇಕಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಶಕ್ತಿ ತುಂಬುಲು ಹಲವಾರು ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗಲೂ ನೇಕಾರರಿಗೆ ನೆರವು ನೀಡಿದ್ದರು. ಬಿಜೆಪಿ ಸರ್ಕಾರ ನೇಕಾರರಿಗೆ ಧ್ವನಿಯಾಗಿತ್ತು ಎಂದು ವಿಶ್ಲೇಷಿಸಿದರು. ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕೌಶಲ ಹೆಚ್ಚಳಕ್ಕೆ, ಮಾರುಕಟ್ಟೆ ವಿಸ್ತರಣೆಗೆ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿತು. ರಾಜ್ಯ ಸರ್ಕಾರದೊಂದಿಗೆ ಪಿಎಂ ಮಿತ್ರ ಪಾರ್ಕ್ ಯೋಜನೆ ಇವುಗಳಲ್ಲಿ ಮಹತ್ವದ್ದು. ನೇಕಾರಿಕೆ ಕೇವಲ ವೃತ್ತಿಯಲ್ಲ. ಅದೊಂದು ಕಲೆ ಎಂದು ಕೇಂದ್ರ ಸರ್ಕಾರ ಪರಿಭಾವಿಸಿದೆ ಎಂದು ಹೇಳಿದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ನೇಕಾರರಿಗೆ ಏನೂ ಮಾಡಲಿಲ್ಲ. ಮೋದಿ ಜೀ ಅವರು, ನೇಕಾರರ ವೃತ್ತಿ ಗುರುತಿಸಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಘೋಷಣೆ ಮಾಡಿ ಇದರ ಮೂಲಕ ಕೌಶಲ ಉಳಿಸುವ ಇಚ್ಛಾಶಕ್ತಿ ಹೊಂದಿದ್ದಾರೆ ಎಂದು ನುಡಿದರು.

ಉತ್ತರ ಕರ್ನಾಟಕ ಪ್ರವಾಸದ ವೇಳೆ ನೇಕಾರರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಕೈಮಗ್ಗಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ನೆರವು ನೀಡಲಿಲ್ಲ. ಆದರೆ ಯಡಿಯೂರಪ್ಪ ಅವರು, ಅನ್ನ ನೀಡುವ ರೈತ ಒಂದು ಕಣ್ಣಾದರೆ ನೇಕಾರರು ಮತ್ತೊಂದು ಕಣ್ಣು ಎಂದು ಹೇಳಿದ್ದರು. ಕೇವಲ ಭಾಷಣ ಮಾಡದೇ ಅವರ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದರು. ಮುಂದೆ ನಮ್ಮ ಸರ್ಕಾರ ಬಂದರೆ ಕೈಮಗ್ಗಗಳನ್ನು ಉಳಿಸಲು ಕೆಲಸ ಮಾಡಲಿದೆ ಎಂದು ತಿಳಿಸಿದರು.

ಕೈಮಗ್ಗ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ

ಉದ್ಯೋಗ ಎಂದರೆ ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಪದವಿ ಪಡೆದವರು, ಐಟಿ ಬಿಟಿ ಉದ್ಯೋಗ ಮಾತ್ರವಲ್ಲ. ಎಲ್ಲರೂ ಪದವಿ ಪಡೆಯಲು ನಮ್ಮ ದೇಶದಲ್ಲಿ ಕಷ್ಟ. ಸಾಕಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಯಾವುದೇ ಸರ್ಕಾರ ಎಲ್ಲರಿಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಬಡತನ ಇದೆ. ಇಂತಹ ಸಂದರ್ಭದಲ್ಲಿ ಕೈಮಗ್ಗಗಳು ಉದ್ಯೋಗ ನೀಡಬಲ್ಲವು. ಆದರೆ ಸರ್ಕಾರಗಳು ಈ ಕ್ಷೇತ್ರಕ್ಕೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಕುಲಕಸುಬುಗಳಿಗೆ ಆರ್ಥಿಕ ಶಕ್ತಿ ತುಂಬಬೇಕು. ಬ್ಯಾಂಕ್ ಸಾಲ, ವಿದುತ್ ಸಬ್ಸಿಡಿ ಕೊಡಿ ಎಂದು ನೇಕಾರರು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟು ಈ ಕಲೆಯನ್ನು, ವೃತ್ತಿಯನ್ನು ಉಳಿಸಬೇಕು. ಯಾವುದೇ ಉದ್ಯೋಗ ಲಾಭದಾಯಕ ಎಂದು ಅನಿಸಿದರೆ ಮುಂದಿನ ತಲೆಮಾರು ಸಹ ಅದನ್ನು ಮುಂದುವರಿಸುತ್ತಾರೆ. ಮಾರುಕಟ್ಟೆ ಸಿಕ್ಕರೆ, ಲಾಭವಾದರೆ ಹೆಚ್ಚು ಹೆಚ್ಚು ಜನ ಈ ಕಸುಬನ್ನು ಮಾಡುತ್ತಾರೆ ಎಂದು ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಮತ್ತು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್. ದತ್ತಾತ್ರೀ, ನೇಕಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಸ್. ಸೋಮಶೇಖರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್ ಚಿಕ್ಕಪೇಟೆ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments