ರಾಜ್ಯದಲ್ಲಿ ತೀವ್ರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಕರ್ನಾಟಕಕ್ಕೆ ₹22,400.58 ಕೋಟಿ ಬರ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಭೇಟಿಗೆ ಸಮಯ ನೀಡುವಂತೆಯೂ ಮನವಿ ಮಾಡಿದ್ದಾರೆ.
ರಾಜ್ಯದ 226 ತಾಲ್ಲೂಕುಗಳು ಬರಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ. ಲಕ್ಷಾಂತರ ರೈತ ಕುಟುಂಬಗಳು, ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪರಿಹಾರ ಮಾನದಂಡ ಪರಿಷ್ಕರಣೆಗೆ ಒತ್ತಾಯ
ಕೇಂದ್ರ ಸರ್ಕಾರವು 2026–27ರಿಂದ 2030–31ರ ಅವಧಿಗೆ SDRF ಮತ್ತು NDRF ಅಡಿಯಲ್ಲಿ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ, ರಾಜ್ಯದ ಬರ ಪರಿಹಾರದ ಬೇಡಿಕೆಯನ್ನು ₹20,585.73 ಕೋಟಿಯಿಂದ ₹22,400.58 ಕೋಟಿಗೆ ಹೆಚ್ಚಿಸಲಾಗಿದೆ. ಬೆಳೆ ಹಾನಿ ಪರಿಹಾರದ ಅಗತ್ಯ ಮೊತ್ತ ₹6,128.70 ಕೋಟಿಯಿಂದ ₹7,943.55 ಕೋಟಿಗೆ ಏರಿಕೆಯಾಗಿದ್ದು, ಹೆಚ್ಚುವರಿಯಾಗಿ ₹1,814.85 ಕೋಟಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹11 ಸಾವಿರ, ನೀರಾವರಿ ಬೆಳೆಗಳಿಗೆ ₹22 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹30 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಮತ್ತು ನೀರಾವರಿ ಸೇರಿದಂತೆ ಕೃಷಿಯ ನೈಜ ವೆಚ್ಚಕ್ಕೆ ಹೋಲಿಸಿದರೆ ಈ ಮೊತ್ತ ಸಾಕಾಗುವುದಿಲ್ಲ. ಪ್ರಸ್ತುತ ಕೃಷಿ ವೆಚ್ಚ ಹಾಗೂ ರೈತರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಮಾನದಂಡಗಳನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
FRUITS ದತ್ತಾಂಶ ಬಳಕೆಗೆ ಮನವಿ
ರೈತರ ಅರ್ಹತೆ ನಿರ್ಧರಿಸಲು 2015–16ರ ಕೃಷಿ ಗಣತಿಯ ದತ್ತಾಂಶ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಹತ್ತು ವರ್ಷಗಳ ಹಿಂದಿನ ಮಾಹಿತಿ ಇಂದಿನ ಭೂಹಿಡುವಳಿ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ. ಇದರಿಂದ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದ FRUITS ದತ್ತಾಂಶವನ್ನು ಪರಿಗಣಿಸಿ ಫಲಾನುಭವಿಗಳನ್ನು ಗುರುತಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಬರ ಪರಿಹಾರವು ಕೇವಲ ಸಾಂಕೇತಿಕ ನೆರವಾಗಬಾರದು. ಬೆಳೆ ನಷ್ಟದಿಂದ ರೈತರು ಚೇತರಿಸಿಕೊಂಡು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಷ್ಟು ಅರ್ಥಪೂರ್ಣ ನೆರವು ದೊರೆಯಬೇಕು. ರೈತರು ಕೃಷಿಗೆ ಮಾಡಿರುವ ನೈಜ ವೆಚ್ಚ ಮತ್ತು ಅನುಭವಿಸಿರುವ ನಷ್ಟವನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ತುರ್ತು ನೆರವು ಬಿಡುಗಡೆಗೆ ಆಗ್ರಹ
ರಾಜ್ಯದ ಪರಿಷ್ಕೃತ ಮನವಿ ಪತ್ರದ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಯಮಾನುಸಾರ ದೊರೆಯಬೇಕಾದ ಪರಿಹಾರವನ್ನು ಆದಷ್ಟು ಬೇಗ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ರೈತರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಆಶಯದಂತೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ನ್ಯಾಯಯುತ ಪರಿಹಾರ ಒದಗಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.


