ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾಗಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ನೀಡಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಡಾ ಪ್ರಕರಣವನ್ನು ಸಿಬಿಐಗೆ ನೀಡುವಂತಹ ಅಂಶಗಳು ಇರಲಿಲ್ಲ. ಲೋಕಾಯುಕ್ತ ಸಂಸ್ಥೆಯ ಮೇಲೆ ಕೋರ್ಟ್ ವಿಶ್ವಾಸವಿಟ್ಟು ಈ ರೀತಿಯ ಆದೇಶ ನೀಡಲಾಗಿದೆ” ಎಂದರು.
“ಲೋಕಾಯುಕ್ತ ತನಿಖೆ ಸರಿಯಾಗಿ ನಡೆದಿದೆ ಎಂಬ ದೃಷ್ಟಿಯಲ್ಲಿ ಕೋರ್ಟ್ ಆದೇಶ ನೀಡಿದೆ. ಲೋಕಾಯುಕ್ತ ವರದಿ ಸರಿ ಇಲ್ಲ ಎಂದು ಹೇಳಲು ಆಗುವುದಿಲ್ಲ ಎನ್ನುವ ಅರ್ಥದಲ್ಲಿ ಕೋರ್ಟ್ ತೀರ್ಪು ನೀಡಿದೆ. ಇದು ಒಳ್ಳೆಯ ತೀರ್ಮಾನ. ಲೋಕಾಯುಕ್ತ ಸಂಸ್ಥೆಯ ತನಿಖೆಯ ಮೇಲೆ ನಂಬಿಕೆ ಇಡಬೇಕು. ಇಂತಹ ಸಂದರ್ಭದಲ್ಲಿ ಸಂಸ್ಥೆ ತನಿಖೆ ಮಾಡಿದ ಮೇಲೆ ವಿಶ್ವಾಸ ಬೇಕಲ್ಲವೇ?” ಎಂದು ಹೇಳಿದರು.
“ಸ್ನೇಹಮಯಿ ಕೃಷ್ಣ ಅವರು ಸುಪ್ರೀಂಕೋರ್ಟ್‌ಗೆ ಬೇಕಿದ್ದರೆ ಹೋಗಲಿ. ನಮ್ಮ ಕಾನೂನು ತಂಡ ಪರಿಶೀಲಿಸಿ ಅದಕ್ಕೆ ಉತ್ತರ ನೀಡುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ವಾಭಾವಿಕವಾಗಿ ನ್ಯಾಯಯುತವಾಗಿ ಇರುತ್ತವೆ ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಿದರು.