ನೀಟ್ ಪಿಜಿ- 2026 ಪರೀಕ್ಷೆಗೆ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಆದ್ಯತೆಯ ರಾಜ್ಯಗಳಿಗೆ ವಿರುದ್ಧವಾಗಿ ಹಾಗೂ ವಾಸಸ್ಥಳದಿಂದ ಬಹುದೂರದ ಪರೀಕ್ಷಾ ನಗರಗಳನ್ನು ಹಂಚಿಕೆ ಮಾಡಿರುವ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು
ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮನವಿ ಸಲ್ಲಿಸಿ, ಪರೀಕ್ಷಾ ನಗರಗಳ ಹಂಚಿಕೆಯನ್ನು ತುರ್ತಾಗಿ ಪರಿಶೀಲಿಸುವಂತೆ ಹಾಗೂ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಸಮೀಪದ ಕೇಂದ್ರಗಳನ್ನು ಒದಗಿಸುವಂತೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.
ನೀಟ್ ಪಿಜಿ- 2026ರ ಪರಿಷ್ಕೃತ ವ್ಯವಸ್ಥೆಯಡಿ ಅಭ್ಯರ್ಥಿಗಳು ಮೂರು ಆದ್ಯತೆಯ ಪರೀಕ್ಷಾ ರಾಜ್ಯಗಳನ್ನು ಆಯ್ಕೆ ಮಾಡಬೇಕಾಗಿತ್ತು. ತಮ್ಮ ರಾಜ್ಯವನ್ನು ಮೊದಲ ಆದ್ಯತೆಯಾಗಿ ಹಾಗೂ ಎರಡು ನೆರೆಯ ರಾಜ್ಯಗಳನ್ನು ಉಳಿದ ಆದ್ಯತೆಗಳಾಗಿ ಸೂಚಿಸುವ ಅವಕಾಶ ನೀಡಲಾಗಿತ್ತು. ಆದರೆ, ಹಲವು ಅಭ್ಯರ್ಥಿಗಳಿಗೆ ಅವರು ಆಯ್ಕೆ ಮಾಡದ ರಾಜ್ಯಗಳಲ್ಲಿಯೂ ಹಾಗೂ ವಾಸಸ್ಥಳದಿಂದ ಬಹುದೂರದ ಪರೀಕ್ಷಾ ನಗರಗಳಲ್ಲಿ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವೈದ್ಯಕೀಯ ಪದವೀಧರರಿಗೆ ದೂರದ ಪರೀಕ್ಷಾ ಕೇಂದ್ರಗಳ ಹಂಚಿಕೆ ಹೆಚ್ಚುವರಿ ಆರ್ಥಿಕ ಹಾಗೂ ಮಾನಸಿಕ ಹೊರೆಯನ್ನು ಉಂಟುಮಾಡುತ್ತಿದೆ. ಕಡಿಮೆ ಅವಧಿಯೊಳಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವುದರಿಂದ ಸಾರಿಗೆ ಮತ್ತು ವಸತಿ ವೆಚ್ಚ ಹೆಚ್ಚುವುದರ ಜತೆಗೆ, ಪ್ರಯಾಣದ ವ್ಯವಸ್ಥೆ, ವಸತಿ ಹಾಗೂ ಪರೀಕ್ಷಾ ದಿನದಂದು ಕೇಂದ್ರ ತಲುಪುವ ಕುರಿತು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಗಮನಕ್ಕೆ ತಂದಿದ್ದಾರೆ.
ಇದರ ನಡುವೆ, ಕೆಲವು ಅಭ್ಯರ್ಥಿಗಳಿಗೆ ಎಸ್ ಎಂಎಸ್ ಮೂಲಕ ತಪ್ಪಾದ ಪರೀಕ್ಷಾ ನಗರಗಳ ವಿವರಗಳು ಬಂದಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ತಾಂತ್ರಿಕ ದೋಷದಿಂದ ತಪ್ಪಾದ ಸಂದೇಶಗಳು ರವಾನೆಯಾಗಿವೆ ಎಂದು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಸ್ಪಷ್ಟಪಡಿಸಿದ್ದು, ಅಭ್ಯರ್ಥಿಗಳು ಅಧಿಕೃತವಾಗಿ ನೀಡಲಾಗುವ ಪರೀಕ್ಷಾ ನಗರ ಮಾಹಿತಿ ಪತ್ರಿಕೆಗಳನ್ನು ಮಾತ್ರ ಪರಿಗಣಿಸುವಂತೆ ಸೂಚಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಎನ್ ಬಿಎಂಇಎಸ್ ಗೆ ಪರೀಕ್ಷಾ ಕೇಂದ್ರಗಳ ಹಂಚಿಕೆಯನ್ನು ಮರುಪರಿಶೀಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಸಾಧ್ಯವಿರುವ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ರಾಜ್ಯದೊಳಗೆ ಅಥವಾ ಅವರಿಗೆ ಲಭ್ಯವಿರುವ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಮರುಹಂಚಿಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅತಿಯಾದ ಪ್ರಯಾಣದ ತೊಂದರೆ ಎದುರಿಸುತ್ತಿರುವ ಅಭ್ಯರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ದೂರು ಪರಿಹಾರ ವ್ಯವಸ್ಥೆ ಕಲ್ಪಿಸುವಂತೆಯೂ ಮನವಿ ಮಾಡಿದ್ದಾರೆ.
ದೇಶದಾದ್ಯಂತ ಸಾವಿರಾರು ಯುವ ವೈದ್ಯರ ಭವಿಷ್ಯಕ್ಕೆ ನೀಟ್ ಪಿಜಿ ಪರೀಕ್ಷೆ ಮಹತ್ವದ್ದಾಗಿರುವುದರಿಂದ, ಪರೀಕ್ಷಾ ಪ್ರಕ್ರಿಯೆ ನ್ಯಾಯಸಮ್ಮತ, ಪಾರದರ್ಶಕ ಹಾಗೂ ಅಭ್ಯರ್ಥಿಗಳಿಗೆ ಸುಲಭವಾಗಿ ಪ್ರವೇಶಿಸಬಹುದಾದ ರೀತಿಯಲ್ಲಿ ನಡೆಯುವಂತೆ ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ.


