Homeಕರ್ನಾಟಕಕನ್ನಡ ಕಾಯಕ ಮತ್ತು ಕೋಮು ಸೌಹಾರ್ದದ ಜೀವಂತ ಸಾಕ್ಷಿಪ್ರಜ್ಞೆ - ಸಮೀಉಲ್ಲಾ ಖಾನ್

ಕನ್ನಡ ಕಾಯಕ ಮತ್ತು ಕೋಮು ಸೌಹಾರ್ದದ ಜೀವಂತ ಸಾಕ್ಷಿಪ್ರಜ್ಞೆ – ಸಮೀಉಲ್ಲಾ ಖಾನ್

ಇಂದು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ವಿಭಜನೆಯ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, “ಕನ್ನಡ ಎಲ್ಲರದು, ಕರ್ನಾಟಕ ಎಲ್ಲರ ಮನೆ” ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರುತ್ತಿರುವ ಸಮೀಉಲ್ಲಾ ಖಾನ್ ಅವರು ನಿಜಕ್ಕೂ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡಿಗೆ ನೀಡಿದ ಅತ್ಯಂತ ಶ್ರೇಷ್ಠ ಸಂದೇಶವೆಂದರೆ “ವಿಶ್ವಮಾನವ” ಎಂಬ ಪರಿಕಲ್ಪನೆ. ಧರ್ಮ, ಜಾತಿ, ಭಾಷೆಗಳ ಗೋಡೆಗಳನ್ನು ಮೀರಿ ಮಾನವೀಯತೆಯೇ ಶ್ರೇಷ್ಠ ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ.

“ಎಲ್ಲಾದರು ಇರು, ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು.”
– ರಾಷ್ಟ್ರಕವಿ ಕುವೆಂಪು

ಕುವೆಂಪು ಅವರ ಈ ನುಡಿ ಕೇವಲ ಭಾಷಾಭಿಮಾನವನ್ನಷ್ಟೇ ಸಾರುವುದಿಲ್ಲ; ತನ್ನ ನೆಲ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜೀವನದರ್ಶನವನ್ನೂ ಸಾರುತ್ತದೆ. ಇದೇ ಆದರ್ಶವನ್ನು ಸಮೀಉಲ್ಲಾ ಖಾನ್ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ.

ಕುವೆಂಪು ಮತ್ತೊಂದು ಕಡೆ ಮಾನವೀಯತೆಯ ಮಹತ್ವವನ್ನು ಹೀಗೆ ಸಾರುತ್ತಾರೆ :

“ವಿಶ್ವ ಮಾನವನಾಗು”
– ರಾಷ್ಟ್ರಕವಿ ಕುವೆಂಪು

ಈ ಒಂದೇ ವಾಕ್ಯದಲ್ಲಿ ಕುವೆಂಪು ಅವರು ಇಡೀ ಮಾನವ ಸಮಾಜಕ್ಕೆ ನೀಡಿದ ಸಂದೇಶ ಅಡಗಿದೆ. ಧರ್ಮ, ಜಾತಿ, ಮತಗಳ ಎಲ್ಲೆಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ದೃಷ್ಟಿಕೋನವೇ ವಿಶ್ವಮಾನವತೆಯ ಸಾರ.

ಕನ್ನಡ ಕಾಯಕ ಮತ್ತು ಕೋಮು ಸೌಹಾರ್ದತೆಯ ಪ್ರತೀಕದಂತಿರುವ ಸಮೀವುಲ್ಲಾ ಖಾನ್ ಹೆಸರು ಕನ್ನಡಿಗರಿಗೆ ತೀರಾ ಚಿರಪರಿಚಿತ. ಅವರು ಕನ್ನಡವನ್ನು ಕೇವಲ ಭಾಷೆಯಾಗಿ ನೋಡಲಿಲ್ಲ; ಅದು ಮನುಷ್ಯರನ್ನು ಬೆಸೆಯುವ ಸಂಸ್ಕೃತಿ, ಸಹಬಾಳ್ವೆ ಮತ್ತು ರಾಷ್ಟ್ರೀಯ ಏಕತೆಯ ಪ್ರತೀಕ ಎಂಬ ನಂಬಿಕೆಯಿಂದ ಅವರು ಬದುಕುತ್ತಿದ್ದಾರೆ. ಅವರು ಬೆಂಗಳೂರಿನಮತ್ತಿಕೆರೆ ಮಸೀದಿಯಲ್ಲಿ ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಆಚರಿಸುವ ಪರಂಪರೆಯನ್ನು ಆರಂಭಿಸಿ, ಧರ್ಮ ಮತ್ತು ಭಾಷೆಯ ನಡುವೆ ಯಾವುದೇ ಗೋಡೆ ಇಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ, ಯುವಕರಿಗೆ ಉದ್ಯೋಗಕ್ಕಾಗಿ ಹೋರಾಟ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ನಡೆಸಿದ ನಿರಂತರ ಹೋರಾಟಗಳು ಅವರ ಕನ್ನಡ ಪ್ರೇಮದ ಜೀವಂತ ದಾಖಲೆಗಳಾಗಿವೆ.

ಅದೇ ರೀತಿ ಕನ್ನಡ ಭಾಷೆಯ ಪ್ರಾಚೀನತೆ, ವೈಭವ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಹಲ್ಮಿಡಿ ಶಾಸನ ಕನ್ನಡಿಗರ ಅಸ್ತಿತ್ವದ ಹೆಮ್ಮೆಯ ಸಂಕೇತವಾಗಿದೆ. “ಶ್ರೀ ವಿಜಯಸ್ಯ ಸಕ ವರ್ಷ…”

(ಕ್ರಿ.ಶ. 450ರ ಸುಮಾರಿನ ಹಲ್ಮಿಡಿ ಶಾಸನವು ಕನ್ನಡದ ಮೊದಲ ಸಂಪೂರ್ಣ ಶಾಸನವೆಂದು ಪರಿಗಣಿಸಲ್ಪಟ್ಟಿದ್ದು, ಕನ್ನಡ ಭಾಷೆಯ ಇತಿಹಾಸ ಮತ್ತು ವೈಭವಕ್ಕೆ ಸಾಕ್ಷಿಯಾಗಿದೆ.)

ಹಲ್ಮಿಡಿ ಶಾಸನದಿಂದ ಆರಂಭವಾದ ಕನ್ನಡದ ಈ ಸಾವಿರಾರು ವರ್ಷಗಳ ಪಯಣವನ್ನು ಇಂದಿನ ಸಮಾಜದಲ್ಲಿ ಜೀವಂತವಾಗಿಡಲು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ದುಡಿಯುವ ವ್ಯಕ್ತಿತ್ವಗಳು ಅತ್ಯಗತ್ಯ. ಅಂತಹ ಅಪರೂಪದ ಕನ್ನಡ ಕಾಯಕಯೋಗಿಗಳಲ್ಲಿ ಸಮೀಉಲ್ಲಾ ಖಾನ್ ಅವರ ಹೆಸರು ಅಗ್ರಸ್ಥಾನದಲ್ಲಿದೆ.

ಸಮೀಉಲ್ಲಾ ಖಾನ್ ಅವರು ಮಲ್ಲೇಶ್ವರಂ, ಶಿವಾಜಿನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿ, ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಕನ್ನಡ ಸಾಹಿತ್ಯ ಚಳವಳಿಗೆ ಹೊಸ ಆಯಾಮ ನೀಡಿದೆ. ಕರ್ನಾಟಕ ಏಕೀಕರಣದ ಹುತಾತ್ಮ ರಂಜಾನ್ ಸಾಬ್ ಅವರ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಕನ್ನಡ ಚರಿತ್ರೆಯ ಒಂದು ಮಹತ್ವದ ಅಧ್ಯಾಯವನ್ನು ಅವರು ಜೀವಂತವಾಗಿರಿಸಿದ್ದಾರೆ.

ಇಂದು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ವಿಭಜನೆಯ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, “ಕನ್ನಡ ಎಲ್ಲರದು, ಕರ್ನಾಟಕ ಎಲ್ಲರ ಮನೆ” ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರುತ್ತಿರುವ ಸಮೀಉಲ್ಲಾ ಖಾನ್ ಅವರು ನಿಜಕ್ಕೂ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.

ಸಮೀಉಲ್ಲಾ ಖಾನ್ (1)

ಚನ್ನಪಟ್ಟಣ ತಾಲೂಕಿನ ಕೋಡಂಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಸಮೀಉಲ್ಲಾ ಖಾನ್ ಅವರ ಬದುಕಿನ ಪಯಣವು ಸಾಮಾನ್ಯ ಕುಟುಂಬದಿAದ ಆರಂಭವಾಗಿ, ಕನ್ನಡ, ಸಾಮಾಜಿಕ ಸೇವೆ ಮತ್ತು ಕೋಮು ಸೌಹಾರ್ದದ ಪ್ರತೀಕವಾಗಿ ಬೆಳೆದ ಅಪರೂಪದ ಕಥೆಯಾಗಿದೆ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕುಟುಂಬ ಸಮೇತ ಬೆಂಗಳೂರಿಗೆ ಬಂದ ಅವರು, ಬದುಕಿನ ಕಷ್ಟಗಳನ್ನು ಎದುರಿಸುತ್ತಲೇ ಸಮಾಜದೊಳಗೆ ತಮ್ಮದೇ ಆದ ವಿಶಿಷ್ಟ ಹೆಜ್ಜೆಗುರುತು ಮೂಡಿಸಿದ್ದಾರೆ.

ಅವರ ತಂದೆ ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದ ದೇಶಭಕ್ತರು. ದೇಶಸೇವೆಯ ಮೌಲ್ಯಗಳನ್ನು ಕುಟುಂಬದಲ್ಲಿಯೇ ಕಲಿತ ಸಮೀಉಲ್ಲಾ ಖಾನ್ ಅವರಿಗೆ ನಾಲ್ವರು ಹಿರಿಯ ಸಹೋದರರು ಮತ್ತು ಮೂವರು ಹಿರಿಯ ಸಹೋದರಿಯರಿದ್ದರು. ಅವರ ಹಿರಿಯ ಸಹೋದರರಲ್ಲಿ ಕನ್ನಡ ಹೋರಾಟಗಾರ ರಹಮಾನ್ ಖಾನ್ ಪ್ರಮುಖರು. ಮನೆಯಲ್ಲೇ ಕನ್ನಡಾಭಿಮಾನ, ಸಾಮಾಜಿಕ ಜವಾಬ್ದಾರಿ ಮತ್ತು ದೇಶಪ್ರೇಮದ ವಾತಾವರಣ ಬೆಳೆದಿದ್ದರಿಂದ ಸಮೀಉಲ್ಲಾ ಖಾನ್ ಅವರ ಬದುಕಿನ ದಿಕ್ಕು ಸಹ ಅದೇ ಮೌಲ್ಯಗಳತ್ತ ಸಾಗಿತು.

ಕೇಂದ್ರ ರಕ್ಷಣಾ ಇಲಾಖೆಯ ಅಂಗ ಸಂಸ್ಥೆಯಾದ ಬೆಂಗಳೂರಿನ 515 ಭೂಸೇನಾ ಕಾರ್ಯಾಗಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮೀಉಲ್ಲಾ ಖಾನ್ ಅವರು 1992ರಲ್ಲಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಗುಪ್ತಾ ಬಾನು ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ಆ ನಂತರ, ಕುಟುಂಬ ಮತ್ತು ಸಮಾಜ ಸೇವೆ ಎರಡನ್ನೂ ಸಮಾನವಾಗಿ ಮುನ್ನಡೆಸುತ್ತಾ ಬರುತ್ತಿದ್ದಾರೆ. ವಿಶೇಷವೆಂದರೆ ಕನ್ನಡತನವನ್ನು ಕೇವಲ ಮಾತಿನಲ್ಲಿ ತೋರಿಕೆಯ ವಸ್ತುವಾಗಿಸದೇ, ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಹಿರಿಯ ಪುತ್ರಿ ಹಾಜೀರ ಖಾನಂ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಜಾನಪದ ಕಲಾವಿದ ಹಾಗೂ ಕನ್ನಡ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಹಿದಾಯತ್ ಅಹ್ಮದ್ ಅವರೊಂದಿಗೆ ಹಾಜೀರ ಖಾನಂ ವಿವಾಹವಾಗಿರುವುದು ಕುಟುಂಬದ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಕಿರಿಯ ಪುತ್ರಿ ಉಮೆ ಹಾನಿ ಖಾನಂ ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ನಿಮ್ಹಾನ್ಸ್ನಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜಮುಖಿ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಸಮೀಉಲ್ಲಾ ಖಾನ್ (2)

ಸಮೀಉಲ್ಲಾ ಖಾನ್ ಅವರ ಬದುಕಿನ ದೊಡ್ಡ ಸಾಧನೆ ಎಂದರೆ ಕನ್ನಡ ಮತ್ತು ಮುಸ್ಲಿಂ ಸಮುದಾಯದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದ ಪ್ರಯತ್ನ. ಭಾಷೆ ಯಾವುದೇ ಧರ್ಮದ ಸೊತ್ತಲ್ಲ; ಅದು ನಾಡಿನ ಆತ್ಮ ಎಂಬ ನಂಬಿಕೆಯಿAದ ಮತ್ತಿಕೆರೆಯ ಮಸೀದಿಯಲ್ಲಿ ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸೇರಿದಂತೆ ಹಲವು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ಆರಂಭಿಸುವ ಮೂಲಕ ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸುತ್ತಿದ್ದಾರೆ. ಇಂದು ಅದೇ ಮಸೀದಿಯ ಅಧ್ಯಕ್ಷರಾಗಿ ಸ್ಥಳೀಯ ಶಾಸಕರ ನೆರವಿನಿಂದ ಪ್ರದೇಶಾಭಿವೃದ್ಧಿ ಯೋಜನೆಯಡಿ ಕನ್ನಡ ಕಲಿಕಾ ಕೇಂದ್ರಕ್ಕಾಗಿ ಶಾಶ್ವತ ಕಟ್ಟಡ ನಿರ್ಮಿಸಿರುವುದು ಅವರ ದೂರದೃಷ್ಟಿಯ ಸಂಕೇತವಾಗಿದೆ.

ಸಮೀಉಲ್ಲಾ ಖಾನ್ ಅವರು 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮತ್ತಿಕೆರೆ ಮಸೀದಿಯಿಂದ ಆಯೋಜಿಸಿದ ಅಮೃತ ಮಹೋತ್ಸವ ನಡಿಗೆಯು ಧರ್ಮ, ಭಾಷೆ ಮತ್ತು ದೇಶಭಕ್ತಿಯ ಸಮ್ಮಿಲನವಾಗಿ ಗಮನ ಸೆಳೆಯಿತು. ರಾಷ್ಟ್ರಪ್ರೇಮ ಮತ್ತು ಕನ್ನಡಾಭಿಮಾನವನ್ನು ಒಂದೇ ವೇದಿಕೆಯಲ್ಲಿ ಬೆಸೆದ ಈ ಕಾರ್ಯಕ್ರಮ ಅವರ ಚಿಂತನೆಯ ಎತ್ತರವನ್ನು ಪ್ರತಿಬಿಂಬಿಸುತ್ತದೆ.

ಕನ್ನಡದ ಹಕ್ಕುಗಳ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಬೆಂಗಳೂರಿನ 515 ಭೂಸೇನಾ ಕಾರ್ಯಾಗಾರದಲ್ಲಿ ಕನ್ನಡ ಸಂಘಟನೆಗೆ ಮಾನ್ಯತೆ ನೀಡದ ಸಂದರ್ಭದಲ್ಲಿ ಅವರು, ಕನ್ನಡ ಕವಿ ಸಿದ್ದಯ್ಯ ಪುರಾಣಿಕ್ ಅವರ ಬೆಂಬಲದೊAದಿಗೆ ಹೋರಾಟ ಹಮ್ಮಿಕೊಂಡಿದ್ದಾರೆ. ಈ ವೇಳೆ ಅಲ್ಲಿನ ಆಡಳಿತದೊಂದಿಗೆ ಮಾತುಕತೆ ನಡೆಸಿ ಕನ್ನಡ ಸಂಘಟನೆಯನ್ನು ಸ್ಥಾಪಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಬೇಕು ಎಂಬ ಉದ್ದೇಶದಿಂದ ಅವರು ನಡೆಸಿದ ಹೋರಾಟ ಮತ್ತೊಂದು ಮೈಲಿಗಲ್ಲು. 2000ನೇ ಇಸವಿಯಲ್ಲಿ 120 ಹುದ್ದೆಗಳ ಪೈಕಿ ಶೇ. 80ರಷ್ಟನ್ನು ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರಾಜ್ಯಸಭೆ ಮತ್ತು ಲೋಕಸಭೆ ಮಟ್ಟದಲ್ಲಿಯೂ ಧ್ವನಿ ಎತ್ತಿದ್ದಾರೆ. ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೂಲಕ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಿ ಅದರ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಮೀಉಲ್ಲಾ ಖಾನ್ (3)

ಕೇಂದ್ರ ಸರ್ಕಾರಿ ಕಚೇರಿಗಳಲ್ಲಿಯೂ ಕನ್ನಡಿಗರಿಗೆ ಉದ್ಯೋಗ ದೊರಕಬೇಕೆಂಬ ಹೋರಾಟದಲ್ಲೂ ಅವರು ಮುಂಚೂಣಿಯಲ್ಲಿದ್ದರು. ಎಜಿ ಕಚೇರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ, ಸೋನಿಯಾ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಟ್ರಿನಿಟಿ ವೃತ್ತದಲ್ಲಿ ಪೊಲೀಸರ ಪ್ರತಿರೋಧವನ್ನೂ ಲೆಕ್ಕಿಸದೆ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದ್ದು ಅವರ ಹೋರಾಟದ ಸಂಕಲ್ಪವನ್ನು ಸಾರುತ್ತದೆ.

ಕಾವೇರಿ ಹೋರಾಟ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ಭಾಷಾ ಹಕ್ಕುಗಳ ಹೋರಾಟ… ಇವೆಲ್ಲದರ ಪರಿಣಾಮವಾಗಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಅವರು ಹಿಂದೆ ಸರಿಯಲಿಲ್ಲ. ನ್ಯಾಯದ ಮೇಲಿನ ನಂಬಿಕೆ ಮತ್ತು ಹೋರಾಟದ ಧೈರ್ಯದಿಂದ ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಹೊರಬಂದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಅವರ ಸೇವೆ ವಿಶಿಷ್ಟವಾಗಿದೆ. ಮಲ್ಲೇಶ್ವರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಒಟ್ಟು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ಜಿ. ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಘಟಕದ ಸಂಚಾಲಕರಾಗಿ ಅದರ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಅಧ್ಯಕ್ಷರಾಗಿ “ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಸಾಂಸ್ಕೃತಿಕ ಕೊಡುಗೆ” ಮತ್ತು “ಸೌಹಾರ್ದ ಸಂಪದ” ಎಂಬ ಮಹತ್ವದ ಸ್ಮರಣ ಸಂಚಿಕೆಗಳನ್ನು ಸಂಪಾದಿಸಿ ಕನ್ನಡ ಮತ್ತು ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಸಂಬಂಧವನ್ನು ದಾಖಲಿಸಿದ್ದಾರೆ.

ಕರ್ನಾಟಕ ಏಕೀಕರಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಏಕೈಕ ಮುಸ್ಲಿಂ ಕನ್ನಡಿಗ ಹುತಾತ್ಮ ರಂಜಾನ್ ಸಾಬ್ ಅವರ ಸ್ಮರಣೆಯನ್ನು ಜೀವಂತವಾಗಿಡುವ ಮಹತ್ತರ ಕಾರ್ಯವನ್ನೂ ಅವರು ಕೈಗೊಂಡಿದ್ದಾರೆ. ಬಳ್ಳಾರಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವುದಷ್ಟೇ ಅಲ್ಲದೆ, ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ನೀಡಿ ಗೌರವಿಸಿದ್ದಾರೆ. ಜೊತೆಗೆ ರಂಜಾನ್ ಸಾಬ್ ಕುರಿತ ಪುಸ್ತಕ ಪ್ರಕಟಿಸುವ ಮೂಲಕ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ.

ಸಮೀಉಲ್ಲಾ ಖಾನ್ (4)

ಸಮೀಉಲ್ಲಾ ಖಾನ್ ಅವರ ಸಮಾಜಸೇವೆಯನ್ನು ಗುರುತಿಸಿ ಕೆಂಪೇಗೌಡ ಪ್ರಶಸ್ತಿ, ಮೈಕೋ ಕನ್ನಡ ಬಳಗ ಪ್ರಶಸ್ತಿ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡು ಶಿಕ್ಷಣ ಮತ್ತು ಕನ್ನಡ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ಸಮೀಉಲ್ಲಾ ಖಾನ್ ಅವರ ಬದುಕಿನ ಅತ್ಯಂತ ದೊಡ್ಡ ಸಂದೇಶವೆAದರೆ ಕೋಮು ಸೌಹಾರ್ದತೆ. ಧರ್ಮ ಮನುಷ್ಯರನ್ನು ವಿಭಜಿಸಲು ಅಲ್ಲ, ಮಾನವೀಯತೆಯ ಮೂಲಕ ಬೆಸೆಯಬೇಕು ಎಂಬ ನಂಬಿಕೆಯನ್ನು ಅವರು ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಾರಗೊಳಿಸಿದ್ದಾರೆ. ಕನ್ನಡ, ಕರುಣೆ, ದೇಶಪ್ರೇಮ ಮತ್ತು ಮಾನವೀಯತೆ…ಈ ನಾಲ್ಕು ಮೌಲ್ಯಗಳನ್ನು ಜೀವನದ ಉಸಿರಾಗಿಸಿಕೊಂಡು ಸಾಗುತ್ತಿರುವ ಅವರ ಬದುಕು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. 515 ಭೂಸೇನಾ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮೀಉಲ್ಲಾ ಖಾನ್ ಅವರು ಇಂದು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಒಟ್ಟಾರೆ, ಸಮೀಉಲ್ಲಾ ಖಾನ್ ಎಂಬುದು ಕೇವಲ ಒಂದು ಹೆಸರಲ್ಲ; ಅದು ಕನ್ನಡದ ಮೇಲಿನ ಪ್ರೀತಿ, ಸಮಾಜದ ಮೇಲಿನ ಬದ್ಧತೆ, ಸೌಹಾರ್ದದ ಸಂದೇಶ ಮತ್ತು ತ್ಯಾಗ ಜೀವನದ ಪ್ರತೀಕ. ಇಂತಹ ವ್ಯಕ್ತಿತ್ವಗಳು ಸಮಾಜದಲ್ಲಿರುವವರೆಗೆ ಕನ್ನಡದ ಕೀರ್ತಿ, ಮಾನವೀಯತೆ ಮತ್ತು ಸಹಬಾಳ್ವೆಯ ಮೌಲ್ಯಗಳು ಎಂದಿಗೂ ಅಳಿದು ಹೋಗುವುದಿಲ್ಲ. ಅವರ ಮುಂದಿನ ಹೆಜ್ಜೆಗಳು ಯಶಸ್ವಿಯಾಗಿ ಸಾಗಲಿ…ಅವರ ಎಲ್ಲಾ ಕನಸುಗಳು ಕೈಗೂಡಲಿ ಎಂದು ಈ ಸಂದರ್ಭದಲ್ಲಿ ಅಭಿಮನ್ಯು ಪತ್ರಿಕಾ ಬಳಗ ಶುಭ ಹಾರೈಸುತ್ತಿದೆೆ.

ಸಮೀಉಲ್ಲಾ ಖಾನ್ (5)

ಇಡೀ ಕುಟುಂಬವೇ ಕನ್ನಡ ಸೇವೆಗೆ ಮೀಸಲು

ಕನ್ನಡ ಸೇವೆಯನ್ನು ವೃತ್ತಿಯಾಗಿಯಲ್ಲ, ಜೀವನ ಧರ್ಮವಾಗಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ ಸಮೀಉಲ್ಲಾ ಖಾನ್. ಅವರ ಕುಟುಂಬವೇ ಕನ್ನಡಾಭಿಮಾನ, ಸಮಾಜಸೇವೆ ಮತ್ತು ಸೌಹಾರ್ದದ ಮೌಲ್ಯಗಳಿಗೆ ತನ್ನ ಬದುಕನ್ನು ಅರ್ಪಿಸಿದೆ. ಗೋಕಾಕ್ ಚಳವಳಿಯ ನಂತರದ ಕನ್ನಡ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು, ಮಸೀದಿಗಳಲ್ಲಿ ಕುರಾನ್‌ನ ಉಕ್ತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಭಾಷೆಗಳ ನಡುವೆ ಸಾಂಸ್ಕöÈತಿಕ ಸೇತುವೆ ನಿರ್ಮಿಸಿದ್ದಾರೆ.

ಮತ್ತಿಕೆರೆ ಮಸೀದಿಯಲ್ಲಿ ಕನ್ನಡ ಕಲಿಕಾ ಕೇಂದ್ರ ಹಾಗೂ ಎಲ್ಲ ಧರ್ಮಗಳ ಗ್ರಂಥಗಳನ್ನು ಒಳಗೊಂಡ ಗ್ರಂಥಾಲಯ ಸ್ಥಾಪಿಸಿ, ಮಹಿಳೆಯರಿಗೂ ಮುಕ್ತ ಪ್ರವೇಶ ಕಲ್ಪಿಸಿರುವುದು ಅವರ ಉದಾತ್ತ ಚಿಂತನೆಯ ಪ್ರತೀಕವಾಗಿದೆ. ಮದರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸುವ ಧೈರ್ಯ ಅವರ ಕನ್ನಡ ಕಾಯಕದ ಅಪರೂಪದ ಅಧ್ಯಾಯ.

ಅವರ ಸಹೋದರ ರೆಹಮಾನ್ ಖಾನ್ ಕನ್ನಡಕ್ಕಾಗಿ ಅಮರಣಾಂತ ಉಪವಾಸ ಮಾಡಿ ಹುತಾತ್ಮರಾದರೆ, ಸಮೀಉಲ್ಲಾ ಖಾನ್ ಅವರು ಕನ್ನಡ ಹೋರಾಟಗಾರರ ಬೆನ್ನೆಲುಬಾಗಿ ನಿಂತಿದ್ದಾರೆ. ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಮೂಲಕ, ಕನ್ನಡ ಸೇವಕರನ್ನು ಅವರು ಗೌರವಿಸುತ್ತಿದ್ದಾರೆ. ಇಬ್ಬರು ಪುತ್ರಿಯರು ಹಾಗೂ ಅಳಿಯರು ಉನ್ನತ ಶಿಕ್ಷಣದ ಮೂಲಕ ಸಮಾಜಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಕನ್ನಡ, ಮಾನವೀಯತೆ ಮತ್ತು ಸಹಬಾಳ್ವೆಯ ಜೀವಂತ ಸಾಕ್ಷಿಪ್ರಜ್ಞೆಯಾಗಿ ಸಮೀಉಲ್ಲಾ ಖಾನ್ ಅವರು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments