- ಆಗಸ್ಟ್ 01 ರಿಂದ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ
- ನಗರದ 1,616 ಸ್ಥಳಗಳಲ್ಲಿ 22 ಸಾವಿರ ಟನ್ ತ್ಯಾಜ್ಯ ಗುರುತು
- ಜಸ್ಟ್ ಕ್ಲೀನ್ ಬೆಂಗಳೂರು(JCB)’ಗೆ ನಾಗರಿಕರ ಸಹಭಾಗಿತ್ವಕ್ಕೆ ಕರೆ
- ಸಿ & ಡಿ ವೇಸ್ಟ್ ಸಾಗಿಸುವ ವಾಹನಗಳಿಗೆ ಜಿಪಿಎಸ್ ಕಡ್ಡಾಯ
ಬೆಂಗಳೂರಿನಾದ್ಯಂತ ಆಗಸ್ಟ್ 1ರಿಂದ ಹಮ್ಮಿಕೊಳ್ಳಲಾಗುತ್ತಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನ ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯವನ್ನು(Legacy waste) ಮಾತ್ರ ತೆರವುಗೊಳಿಸಲಾಗುತ್ತದೆ. ಗೃಹ ತ್ಯಾಜ್ಯದಿಂದ ಉಂಟಾಗಿರುವ ಬ್ಲಾಕ್ ಸ್ಪಾಟ್ ಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ ಆರಂಭವಾಗಲಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನ ಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಾದ್ಯಂತ ಹಲವು ವರ್ಷಗಳಿಂದ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಕಟ್ಟಡ ಭಗ್ನಾವಶೇಷಗಳು (ಸಿ & ಡಿ ವೇಸ್ಟ್), ಪೈಪ್‌ಗಳು, ವಿದ್ಯುತ್ ಕಂಬಗಳು ಸೇರಿದಂತೆ ವಿವಿಧ ಪಾರಂಪರಿಕ ತ್ಯಾಜ್ಯವನ್ನು ಈ ಅಭಿಯಾನದಡಿ ತೆರವುಗೊಳಿಸಲಾಗುತ್ತದೆ. ಗೃಹ ಬಳಕೆಯ ತ್ಯಾಜ್ಯದಿಂದ ಉಂಟಾಗಿರುವ ಬ್ಲಾಕ್ ಸ್ಪಾಟ್‌ಗಳ ತೆರವು ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರದ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಮತ್ತು ವಿವಿಧ ಸಾಮಗ್ರಿಗಳನ್ನು ಸುರಿಯುತ್ತಿರುವುದರಿಂದ ಅವುಗಳ ಮೇಲೆ ಗಿಡಗಂಟಿಗಳು ಬೆಳೆದು, ಇಲಿ, ಹಾವು ಹಾಗೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರ ಜೊತೆಗೆ, ತ್ಯಾಜ್ಯ ಬಿದ್ದಿರುವ ಸ್ಥಳಗಳಲ್ಲಿ ಮತ್ತಷ್ಟು ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.
ಅಲ್ಲದೆ, ನಗರದಲ್ಲಿರುವ ಅನೇಕ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಮಣ್ಣು, ತ್ಯಾಜ್ಯ ಹಾಗೂ ಕಳೆ-ಗಿಡಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾಗರಿಕರಿಂದ ನೂರಾರು ದೂರುಗಳು ಬಂದಿವೆ ಎಂದು ತಿಳಿಸಿದರು.
1,616 ಸ್ಥಳಗಳಲ್ಲಿ 22 ಸಾವಿರ ಟನ್ ತ್ಯಾಜ್ಯ ಗುರುತು
ರಸ್ತೆ ಬದಿ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು ಮಾತ್ರವಲ್ಲದೆ ವಿವಿಧ ಇಲಾಖೆಗಳ ಖಾಲಿ ಜಾಗಗಳಲ್ಲಿಯೂ ಪಾರಂಪರಿಕ ತ್ಯಾಜ್ಯ ಸಂಗ್ರಹವಾಗಿದ್ದು, ಇದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಪ್ರಸ್ತುತ *1,616 ಸ್ಥಳಗಳಲ್ಲಿ ಸುಮಾರು 22,000 ಟನ್ ಪಾರಂಪರಿಕ ತ್ಯಾಜ್ಯವನ್ನು ಗುರುತಿಸಲಾಗಿದೆ.* ನಗರದಾದ್ಯಂತ ಒಟ್ಟು *1 ಲಕ್ಷ ಟನ್‌ಗಿಂತ ಹೆಚ್ಚು ತ್ಯಾಜ್ಯ* ಇರಬಹುದೆಂದು ಅಂದಾಜಿಸಲಾಗಿದೆ.
ಈ ಸಂಬಂಧ ಜಿಬಿಎ, ಐದು ನಗರ ಪಾಲಿಕೆಗಳು, ರೈಲ್ವೆ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಕೆ-ರೈಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಾರಂಪರಿಕ ತ್ಯಾಜ್ಯ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೃಹತ್ ತ್ಯಾಜ್ಯ ತೆರವು ಕಾರ್ಯಕ್ಕಾಗಿ ಸುಮಾರು 100 ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಇನ್ನಷ್ಟು ವಾಹನಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ವಿಶೇಷ ಆಯುಕ್ತ ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಅಪರ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಬೆಸ್ಕಾಂ, ಸಂಚಾರ ಪೊಲೀಸ್, ರೈಲ್ವೆ, ಕೆ-ರೈಡ್, ಕೆ.ಐ.ಎ.ಡಿ.ಬಿ., ಬಿಡಿಎ, ಎನ್.ಎಚ್.ಎ.ಐ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


