ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಲು ಸರ್ಕಾರ ಮುಕ್ತವಾಗಿದ್ದು, ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಹೇಳಿದರು.
ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಸಂಘಟನೆಗಳೊಂದಿಗೆ ಶುಕ್ರವಾರ ಸಮಲೋಚನೆ ನಡೆಸಿದ ಸಚಿವರು, ಅತಿಥಿ ಉಪನ್ಯಾಸಕರ ವಿಚಾರದಲ್ಲಿ ನಮ್ಮ ಸರ್ಕಾರ ಸಹಾನುಭೂತಿ ಹೊಂದಿದೆ. ಮುಖ್ಯಮಂತ್ರಿಗಳು ಸಹ ಈ ವಿಚಾರದಲ್ಲಿ ಸ್ಪಷ್ಟತೆ ಹೊಂದಿದ್ದಾರೆ. ಹಾಗಾಗಿ ಮುಷ್ಕರವನ್ನು ಕೈ ಬಿಟ್ಟು ತರಗತಿಗಳಿಗೆ ತೆರಳಿ” ಎಂದು ಅತಿಥಿ ಉಪನ್ಯಾಸಕರಲ್ಲಿ ಮನವಿ ಮಾಡಿದರು.
“2013-18ರ ಅವಧಿಯಲ್ಲಿ ನೀಡಲಾಗಿದ್ದ ಎಲ್ಲ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿತ್ತು. ಹಾಗೆ ಈ ಅವಧಿಯಲ್ಲೂ ಸಹ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಾವು ನಡೆದುಕೊಳ್ಳಲು ಬದ್ಧರಾಗಿದ್ದೇವೆ” ಎಂದರು.
” ಅತಿಥಿ ಉಪನ್ಯಾಸಕರ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಡೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಪ್ರಸಕ್ತ ಶೇಕಡ 70ರಷ್ಟು ಅತಿಥಿ ಉಪನ್ಯಾಸಕರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮೇಲಿನ ಕಾರ್ಯದೊತ್ತಡ ನನಗೆ ತಿಳಿದಿದೆ. ತಮ್ಮನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.
“ತಮ್ಮ ಬೇಡಿಕೆ ಈಡೇರಿಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಮತ್ತು ಕಾನೂನು ಇಲಾಖೆಯ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ. ತಮ್ಮಗಳ ಸೇವೆಯನ್ನು ಉಳಿಸಿಕೊಂಡು ತಮಗೆ ಅನುಕೂಲವಾಗುವಂತೆ ಒಳ್ಳೆಯದನ್ನು ಮಾಡಬೇಕೆಂಬುದು ನಮ್ಮ ಉದ್ದೇಶ” ಎಂದರು.
ಇದೇ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದಾಗ ತಕ್ಷಣವೇ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅತಿಥಿ ಉಪನ್ಯಾಸಕರ ವಿವಿಧ ಸಂಘಟನೆಗಳ ನೂರಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಚರ್ಚೆಗೂ ಮುನ್ನ ಅತಿಥಿ ಉಪನ್ಯಾಸಕ ಸಂಘಟನೆಯ ವಿವಿಧ ಮುಖಂಡರು ತಮ್ಮ ಬೇಡಿಕೆಗಳನ್ನು ಕುರಿತಂತೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು. ಚರ್ಚೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾಶಂಕರ್, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಅಪ್ಪಾಜಿಗೌಡ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.