Homeಕರ್ನಾಟಕKPSC ಯಲ್ಲಿ ಭಾರಿ ಅಕ್ರಮ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಎಚ್ ಡಿ ಕುಮಾರಸ್ವಾಮಿ...

KPSC ಯಲ್ಲಿ ಭಾರಿ ಅಕ್ರಮ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಎಚ್ ಡಿ ಕುಮಾರಸ್ವಾಮಿ ಆಗ್ರಹ

– ಕಾರ್ಬನ್ ಮೂಲಕ OMR ಶೀಟ್ ತಿದ್ದುಪಡಿ, ಸಿಸಿ ದೃಶ್ಯ ಹಾಳು; ತನಿಖೆಯಲ್ಲಿ ಎಲ್ಲವೂ ಸಾಬೀತು

ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿಯಾಗಿದ್ದಾಗ 2022ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದಿರುವ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್ 1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅವರು ಗಂಭೀರ ಆರೋಪ ಮಾಡಿದರು.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮ ನೇಮಕಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಹಾಗೂ ಸಚಿವ ಸ್ಥಾನಕ್ಕೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದರು.

ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಇದಾಗಿದೆ. ಇಡೀ ಹಗರಣವನ್ನು ಅವರು ಮುಚ್ಚಿ ಹಾಕಲು ಅವರು ಈಗ ಗೃಹ ಖಾತೆ ವಹಿಸಿಕೊಂಡಂತಿದೆ ಎಂದು ಸಚಿವರು ದೂರಿದರು. ಅಲ್ಲದೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿದರು. ತನಿಕಾ ವರದಿ, ಓಎಂಆರ್ ಶೀಟ್ ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವಾರು ದಾಖಲೆಗಳನ್ನು ಮಾಧ್ಯಮಗಳಿಗೆ ಸಚಿವರು ನೀಡಿದರು.

ಪ್ರಿಯಾಂಕ್ ಖರ್ಗೆ ಅವರು ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ ಖರ್ಗೆ ಅವರು. ನನಗೆ ಅಧಿಕಾರ ಕೊಟ್ಟರೆ ಕೆಪಿಎಸ್ಸಿ ಮತ್ತು ಕೃತಿಗಳನ್ನು ರದ್ದು ಮಾಡುವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಕಾನೂನು ಮಾಡುವುದು ನಾವೇ ಎಂದಿದ್ದಾರೆ. ಹೌದು, ಕಾನೂನು ಮಾಡುವುದು ನೀವೇ. ಒಂದು ಕಡೆ ಕೆಪಿಎಸ್ಸಿ ರದ್ದು ಮಾಡುತ್ತೇನೆ ಎಂದು ವೀರಾವೇಶ ಮಾತನ್ನಾಡುವ ಪ್ರಿಯಾಂಕ್ ಖರ್ಗೆ ಅವರು, ಇನ್ನೊಂದು ಕಡೆ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದಲ್ಲಿ ಭಾಗಿಯರುವ ಆರೋಪ ಎದುರಿಸುತ್ತಿರುವ ಅಂದು ಪರೀಕ್ಷಾ ನಿಯಂತ್ರಕರಾಗಿದ್ದ ಐಪಿಎಸ್ ಅಧಿಕಾರಿ ಗ್ಯಾನೇಂದ್ರ ಗಂಗ್ವಾರ್ ಅವರನ್ನು ಪ್ರಿಯಾಂಕ್ ಖರ್ಗೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.

ಪ್ರಿಯಾಂಕ್ ಖರ್ಗೆ ಅವರು ಆರೋಪಿತ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಸಮರ್ಥನೆ ಮಾಡಿಕೊಳ್ಳುತ್ತಾರೆ? ಸಚಿವರಾದ ಅವರಿಗೆ ಜವಾಬ್ದಾರಿ ಬೇಡವೇ? ಜಾರಿ ನಿರ್ದೇಶನಾಲಯ (ED) ದಾಳಿ ಮಾಡುತ್ತಿದ್ದಂತೆಯೇ ಅವರು ನಾಪತ್ತೆಯಾದರು. ಅವರ ನಾಪತ್ತೆಗೂ ಸಚಿವರಿಗೂ ಏನು ಸಂಬಂಧ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಕೆಪಿಎಸ್ಸಿ ಅಕ್ರಮಕ್ಕೆ ಕೊನೆಯೇ ಇಲ್ಲದಾಗಿದೆ. 400 ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿಯೂ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿದೆ. ಒಂದೊಂದು ಹುದ್ದೆಗೆ ₹80 ಲಕ್ಷ ರೇಟು ಫಿಕ್ಸ್ ಮಾಡಿದ್ದಾರೆ ಎಂದು ಮಂಜುನಾಥ್ ಎಂಬುವವರು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಇಡಿ ಅಧಿಕಾರಿಗಳು ಕೇಸು ದಾಖಲಿಸುತ್ತಾರೆ. ಅದಾದ ಕೂಡಲೇ ಈ ಅಧಿಕಾರಿ ನಾಪತ್ತೆ ಆಗಿದ್ದಾರೆ. ಇದರ ಬಗ್ಗೆ ಅತೀ ಉತ್ಸಾಹದಿಂದ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು; ತಮ್ಮ ತಂದೆಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಸರಕಾರದ ಅನುಮತಿ ಪಡೆದು ಅವರ ಸ್ವಂತ ಊರು ಲಖನೌಗೆ ಹೋಗಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಗ್ಯಾನೇಂದ್ರ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ತಮ್ಮ ತಂದೆಗೆ ಹುಷಾರಿಲ್ಲ ಎಂದು ತಿಳಿಸಿದ್ದರು. ಎರಡು ದಿನಗಳಲ್ಲಿ ವಾಪಸ್ ಬೆಂಗಳೂರಿಗೆ ಬರುತ್ತೇನೆ ಎಂದು ಮಾಹಿತಿ ನೀಡಿದ್ದರು. ತಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾಗಿ ಎಂದು ಗೃಹ ಸಚಿವರು ತಿಳಿಸಿದ್ದರು ಎಂಬುದಾಗಿ ಪ್ರಿಯಾಂಕ್ ಖರ್ಗೆ ಅವರ ಮಾಧ್ಯಮ ಹೇಳಿಕೆಗಳನ್ನು ಉಲ್ಲೇಖಿಸಿ ಕುಮಾರಸ್ವಾಮಿ ಅವರು ತಿಳಿಸಿದರು.

ಮುಂದುವರೆದು ಮಾತನಾಡಿದ ಕೇಂದ್ರ ಸಚಿವರು; ಆಗಸ್ಟ್ 25ರಂದು ಇನ್ನೊಂದು ಹೇಳಿಕೆ ನೀಡಿದ್ದ ಗೃಹ ಸಚಿವರು, ಗ್ಯಾನೇಂದ್ರ ಎಲ್ಲಿದ್ದಾರೋ ಗೊತ್ತಿಲ್ಲ ಎನ್ನುತ್ತಾರೆ. *ಗೊತ್ತಿಲ್ಲ ಅಂದರೆ ಗೃಹ ಇಲಾಖೆ ಯಾಕೆ ನಡೆಸ್ತೀರಾ?* ಗೃಹ ಇಲಾಖೆ ಸ್ವಚ್ಚ ಮಾಡ್ತೀನಿ ಎನ್ನುತ್ತೀರಿ. ಮತ್ತೊಂದು ಕಡೆ ಗ್ಯಾನೇಂದ್ರಗೆ ರಕ್ಷಣೆ ಕೊಟ್ಟಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುಧ್ಧ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಇಷ್ಟೆಲ್ಲಾ ರಾಜ್ಯದಲ್ಲಿ ಅನ್ಯಾಯ, ಅಕ್ರಮಗಳು ನಡೆಯುತ್ತಿದ್ದರೂ ಪರಪ್ಪನ ಅಗ್ರಹಾರದ್ದು ಒಂದು ವಾರ ನಡೆಯಿತು. ರಾಜ್ಯದಲ್ಲಿ ಯಾರ ಯಾರ ದನಿ ಅಡಗಿಸಲು ಮುಂದಾಗಿದ್ದಾರೆ ಎಂಬುದು ಗೊತ್ತಿದೆ. ಸರ್ಕಾರದ ವಿರುದ್ಧ ದನಿ ಎತ್ತುವವರ ವಿರುದ್ಧ ಏನೇನು ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ನಿಮ್ಮ ಆಟ ಬಹಳ ದಿನ ನಡೆಯುವುದಿಲ್ಲ. ಪ್ರಿಯಾಂಕ್ ಖರ್ಗೆಯವರೇ ನಿಮ್ಮಿಂದ ನನ್ನ ದನಿ ಅಡಿಗೆಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಖರ್ಗೆ ಅವರು ತಮ್ಮಲ್ಲಿ ಪಾರದರ್ಶಕತೆ ಅಥವಾ ಮಾತಿನ ಮೇಲೆ ನಿಗಾ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಸಿಬಿಐಗೆ ಕೊಡಬೇಕು ಎಂದು ಹೇಳಿತ್ತು. ಈ ಸರ್ಕಾರದ ಯೋಗಿತೆಗೆ ಒಂದು ಪ್ರಕರಣವನ್ನು ದಾಖಲಿಸಿ ಎಫ್ಐಆರ್ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.

ಈ ವಿಷಯವನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಈಗ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಕ್ರಮ ಆಗದೇ ನಾನು ಬಿಡುವುದಿಲ್ಲ. ಈ ಅಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗಿದ್ದಾರೆ. ಅಂದಿನ ಕಾರ್ಯದರ್ಶಿ ಕೂಡ ಶಾಮೀಲಾಗಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ದೂರಿದರು.

ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಹುದ್ದೆಯಲ್ಲಿ ಅಕ್ರಮವಾಗಿರುವುದರಲ್ಲಿ ಪ್ರಿಯಾಂಕ್ ಖರ್ಗೆ ಭಾಗಿ ಆಗಿರುವುದು ನಿಜ. 24 ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ಸಾಬೀತಾಗಿದೆ. ಅಕ್ರಮ ಸಾಬೀತಾಗಿದ್ದರೂ ಪ್ರಿಯಾಂಕ್ ಖರ್ಗೆ ತರಾತುರಿಯಲ್ಲಿ ನೇಮಕಾತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಅಕ್ರಮ ನಡೆದಿರುವುದು, ಓಎಂಆರ್ ಶೀಟ್ ತಿದ್ದಿರುವುದು ಫೋರೆನ್ಸಿಕ್ ತನಿಖೆಯ ವರದಿಯಲ್ಲಿ ಸಾಬೀತಾಗಿದೆ. ಸಬ್ ಕಮಿಟಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಓಎಂಆರ್ ಶೀಟ್ ಸೇರಿ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ. ನ್ಯೂನತೆ ಕಂಡು ಬಂದ ಹಿನ್ನಲೆಯಲ್ಲಿ ಆ ಸಬ್ ಕಮಿಟಿ ಅವರು 24 ಅಭ್ಯರ್ಥಿಗಳಿಗೆ ನೊಟೀಸ್ ಕೊಡುತ್ತಾರೆ. ಆ ಸಮಿತಿ ಮುಂದೆ 20 ಅಭ್ಯರ್ಥಿಗಳು ಬಂದು ಉಳಿದ ನಾಲ್ವರು ಅಭ್ಯರ್ಥಿಗಳು ಬರೋದಿಲ್ಲ. ಹೀಗಾಗಿ ಫೋರೆನ್ಸಿಕ್ ಪ್ರಯೋಗಾಲಕ್ಕೆ ಓಎಂಆರ್ ಶೀಟ್ ಸೇರಿ ಎಲ್ಲವನ್ನು ಕಳಿಸಲಾಗುತ್ತದೆ. ಆಯೋಗದ ಕಾರ್ಯದರ್ಶಿ ಡಿಪಿಆರ್ ಗೆ ಸಿಸಿ ಟಿವಿ ಪರಿಶೀಲನೆಗಾಗಿ ಪತ್ರ ಬರೆಯುತ್ತಾರೆ. ಬಳಿಕ ಫೋರೆನ್ಸಿಕ್ ಲ್ಯಾಬ್ ಗೆ ಫೋಟೋಜ್ ಕಳಿಸುತ್ತಾರೆ. ಅಲ್ಲಿ ಅಕ್ರಮ ಆಗಿರುವುದು ಸಾಬೀತಾಗುತ್ತದೆ ಎಂದು ಸಚಿವರು ದಾಖಲೆಗಳ ಸಮೇತ ಹೇಳಿದರು.

ಪ್ರಿಯಾಂಕ್ ಖರ್ಗೆ ಅವರಿದ್ದ ಇಲಾಖೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ತನಿಖೆಯಲ್ಲಿ ಎಲ್ಲವೂ ಸಾಬೀತಾಗಿದೆ. ಇಲ್ಲಿ ವ್ಯವಹಾರ ಆಗಿದೆ. 24 ಜನರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ನೇಮಕಾತಿ ಪತ್ರವನ್ನು ತರಾತುರಿಯಲ್ಲಿ ಕೊಟ್ಟಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸೀಬೆ ತನಿಖೆಗೆ ಕೊಡಬೇಕು ಎಂದು ಸ್ವತಃ ಹೈಕೋರ್ಟ್ ಹೇಳಿದೆ. ನಾನು ಕೂಡ ಅದನ್ನು ಹೇಳುತ್ತೇನೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಅಂದಿನ ಕಾರ್ಯದರ್ಶಿ ಅಧ್ಯಕ್ಷರು ಮತ್ತು ಸದಸ್ಯರು ಒಪ್ಪಿಗೆ ಇಲ್ಲದೆ ಪ್ರಾವಿಷನ್ ಲಿಸ್ಟ್ ಅಂತಿಮಗೊಳಿಸುತ್ತಾರೆ. ಯಾರ ಒತ್ತಡದ ಮೇಲೆ ಅವರು ಇದೆಲ್ಲವನ್ನು ಮಾಡಿದರು ಎಂಬುದು ಗೊತ್ತಾಗಬೇಕಿದೆ. ಅವರ ವಿರುದ್ಧ ಸರ್ಕಾರ ಏನು ಕ್ರಮ ಜರುಗಿಸಿದೆ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಈ ನೇಮಕಾತಿ ಅಕ್ರಮದಲ್ಲಿ ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಪ್ರಿಯಾಂಕ್ ಖರ್ಗೆ ಹೇಳಲಿ. 24 ಅಭ್ಯರ್ಥಿಗಳು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಓಎಂಆರ್ ಶೀಟ್ ಗಳು ತಿದ್ದುಪಡಿ ಆಗಿವೆ. ಅಕ್ರಮ ಆಗಿದೆ ಅಂತ ವರದಿ ‌ಇದೆ. ಇದರ ಬಗ್ಗೆ ಅವರು ಯಾಕೆ ಮಾತಾಡಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಯುವ ಜನರು ಬೀದಿಗೆ ಇಳಿಯಬೇಕು

ರಾಜ್ಯದಲ್ಲಿ ಇಷ್ಟೆಲ್ಲ ಅನ್ಯಾಯ ಮತ್ತು ಅಕ್ರಮಗಳು ನಡೆಯುತ್ತಿದ್ದರು ನಿರುದ್ಯೋಗಿಗಳು ಮತ್ತು ಯುವ ಸಮುದಾಯ, ವಿದ್ಯಾರ್ಥಿಗಳು ಸುಮ್ಮನಿರುವುದು ಬೇಡ. ನೀವೆಲ್ಲ ಬೀದಿಗಿಳಿದು ಹೋರಾಟ ನಡೆಸಬೇಕು. ಇಷ್ಟೆಲ್ಲ ನಡೆಯುತ್ತಿದ್ದರು ಏಕೆ ಮೌನವಾಗಿದ್ದೀರಿ? ದಯವಿಟ್ಟು ಬೀದಿಗಿಳಿಯಿರಿ ಎಂದು ಯುವ ಜನರಿಗೆ ಕೇಂದ್ರ ಸಚಿವರು ಕರೆ ನೀಡಿದರು.

ನಿರುದ್ಯೋಗಗಳು ಎದ್ದೇಳದಿದ್ದರೆ ನಿಮಗೆ ಉದ್ಯೋಗ ಸಿಗೋದು ಸುಲಭ ಅಲ್ಲ‌. ಮನೆ ಮಠ ಹಾಳು ಮಾಡಿಕೊಂಡು ಕೋಟಿ ಕೋಟಿ ಹಣ ಕೊಟ್ಟು ನೇಮಕಾತಿ ಪಡೆದು ಯಾರ ತಲೆ ಹೊಡೆಯುತ್ತೀರಾ? ಇದಕ್ಕೆಲ್ಲ ಯಾರು ಕಾಣೋರು ಎಂಬುದು ನಿಮಗೆ ಗೊತ್ತಿದೆ ಎಂದು ಸಚಿವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ದೊಡ್ಡನಗೌಡ ಪಾಟೀಲ್ ಮುಂತಾದವರು ಉಪಸ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments