ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ ಕಾನೂನು ಪಾಲಿಸಿಯೇ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ಮಂಗಳೂರು ಟೌನ್‌ಹಾಲ್ ಸಮೀಪದ ಪಾದಚಾರಿ ಮಾರ್ಗದ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹಾಗೂ ಇತರರ ವಿರುದ್ಧ ದಾಖಲಾಗಿರುವ ಪ್ರಕರಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಐಟಿಯು ಬೆಂಬಲಿತ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಹಾಗೂ ವಕೀಲೆ ರಕ್ಷಿತಾ ಸಿಂಗ್ ವಾದ ಮಂಡಿಸಿದರು.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಲಾಗಿದೆ ಎಂಬ ಆರೋಪದಡಿ ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ (ಪ್ರಭಾರ) ಭಾರತಿ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಪ್ರಶ್ನಿಸಿ ಬಿ.ಕೆ. ಇಮ್ತಿಯಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಬೀದಿ ವ್ಯಾಪಾರಿಗಳ ತೆರವಿಗೆ ಆದೇಶಿಸಿಲ್ಲ
ಅರ್ಜಿಯ ವಿಚಾರಣೆ ವೇಳೆ ಎಸ್. ಬಾಲನ್ ಅವರು, ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಯಾವುದೇ ನೇರ ಆದೇಶ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಧಿಕಾರಿಗಳು Maniyar Iliyaz v. P. Ayyappan & Others, Civil Appeal Nos. 4665-4666 of 2025 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಆಧಾರವಾಗಿಸಿಕೊಂಡಿದ್ದಾರೆ. ಆದರೆ, ಆ ತೀರ್ಪು ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸುವುದು ಹಾಗೂ ರಸ್ತೆಗಳೊಂದಿಗೆ ಸೂಕ್ತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಕುರಿತು ನೀಡಿರುವ ನಿರ್ದೇಶನಗಳಿಗೆ ಸಂಬಂಧಿಸಿದೆ. ಬೀದಿ ಬದಿ ವ್ಯಾಪಾರಿಗಳು ಅಥವಾ ವಾರದ ಮಾರುಕಟ್ಟೆಗಳನ್ನು ತೆರವುಗೊಳಿಸುವಂತೆ ಅದರಲ್ಲಿ ಯಾವುದೇ ನಿರ್ದೇಶನವಿಲ್ಲ ಎಂದು ಬಾಲನ್ ವಾದಿಸಿದರು.
ಅಲ್ಲದೆ, Street Vendors (Protection of Livelihood and Regulation of Street Vending) Act, 2014 ಜಾರಿಯಲ್ಲಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳಿಗೆ ಕಾನೂನು ರಕ್ಷಣೆ ಇದೆ. ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಮೊದಲು ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದರು.
‘ಬೀದಿ ವ್ಯಾಪಾರಿಗಳ ಹಿತರಕ್ಷಣಾ ಕಾಯ್ದೆ ರದ್ದಾಗಿಲ್ಲ’
ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸುಪ್ರೀಂ ಕೋರ್ಟ್‌ನ ಆದೇಶವು ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಸೂಕ್ತ ಪಾದಚಾರಿ ಮಾರ್ಗ ಕಲ್ಪಿಸುವುದಕ್ಕೆ ಸಂಬಂಧಿಸಿದೆ. ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣಾ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುವ ಹಕ್ಕು ಇದ್ದು, ಅವರನ್ನು ತೆರವುಗೊಳಿಸುವ ಸಂದರ್ಭ ಕಾನೂನಿನ ಪ್ರಕಾರ ಪುನರ್ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕಾನೂನು ಪಾಲಿಸದೆ ನಡೆಸಿರುವ ತೆರವು ಕಾರ್ಯಾಚರಣೆ ಸರಿಯಲ್ಲ ಎಂದು ನ್ಯಾಯಮೂರ್ತಿಗಳು ರಾಜ್ಯ ಸರ್ಕಾರಕ್ಕೆ ಸೂಚಿಸಿದರು.
‘ಸಂಡೇ ಬಜಾರ್ ಶಾಶ್ವತ ಅತಿಕ್ರಮಣವಲ್ಲ’
ಸಂಡೇ ಬಜಾರ್ ವಾರಕ್ಕೆ ಒಂದು ದಿನ ನಡೆಯುವ ತಾತ್ಕಾಲಿಕ ಮಾರುಕಟ್ಟೆಯಾಗಿದ್ದು, ಇಲ್ಲಿ ಶಾಶ್ವತ ಕಟ್ಟಡಗಳು ಅಥವಾ ಶಾಶ್ವತ ಅತಿಕ್ರಮಣಗಳಿಲ್ಲ. ಇಂತಹ ತಾತ್ಕಾಲಿಕ ವ್ಯಾಪಾರ ಚಟುವಟಿಕೆಯನ್ನು ಶಾಶ್ವತ ಅಕ್ರಮ ಅತಿಕ್ರಮಣವೆಂದು ಪರಿಗಣಿಸುವುದು Street Vendors Act, 2014ರ ಉದ್ದೇಶ ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಎಸ್. ಬಾಲನ್ ಅರ್ಜಿಯಲ್ಲಿ ವಾದಿಸಿದ್ದರು.
ತೆರವು ಕಾರ್ಯಾಚರಣೆಗೆ ಮುನ್ನ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೆ, ವಿಚಾರಣೆಗೆ ಅವಕಾಶ ಕಲ್ಪಿಸದೆ ಅಂಗಡಿಗಳನ್ನು ತೆರವುಗೊಳಿಸಿ ಧ್ವಂಸ ಮಾಡಲಾಗಿದೆ. ಇದು ನೈಸರ್ಗಿಕ ನ್ಯಾಯದ ತತ್ವ ಹಾಗೂ ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.
‘ಹಲ್ಲೆ ಆರೋಪಕ್ಕೂ ಆಧಾರವಿಲ್ಲ’
ಬಿ.ಕೆ. ಇಮ್ತಿಯಾಜ್ ಮತ್ತು ಇತರರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಸಹ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಘಟನೆ ಸಂಪೂರ್ಣವಾಗಿ ವಿಡಿಯೋದಲ್ಲಿ ದಾಖಲಾಗಿದ್ದು, ಇಮ್ತಿಯಾಜ್ ಅವರು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ತೆರವು ಕಾರ್ಯಾಚರಣೆ ಮುಂದುವರಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ ಎಂದು ಬಾಲನ್ ವಾದಿಸಿದರು.
ದೂರಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಗುರುತು, ಹಲ್ಲೆಯ ಸ್ವರೂಪ ಅಥವಾ ಗಾಯದ ಕುರಿತು ಯಾವುದೇ ಸ್ಪಷ್ಟ ವಿವರಗಳಿಲ್ಲ. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 132 ಮತ್ತು 115(2)ರ ಮೂಲಭೂತ ಅಂಶಗಳು ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಅವರು ವಾದಿಸಿದರು.
ಇದಲ್ಲದೆ, ಅಧಿಕಾರಿಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಇಮ್ತಿಯಾಜ್ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವುದು ಕೂಡ ಪ್ರಶ್ನಾರ್ಹವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಎಫ್‌ಐಆರ್ ಬಳಿಕ ಸಂಘವನ್ನೇ ಸಭೆಗೆ ಆಹ್ವಾನಿಸಿದ ಪಾಲಿಕೆ
ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘವು ನೋಂದಾಯಿತ ಸಂಘಟನೆಯಾಗಿದ್ದು, ಬೀದಿ ವ್ಯಾಪಾರಿಗಳ ಹಕ್ಕು ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. ವ್ಯಾಪಾರಿಗಳನ್ನು ಕಾನೂನುಬದ್ಧ ಪ್ರಕ್ರಿಯೆ ಇಲ್ಲದೆ ತೆರವುಗೊಳಿಸಬಾರದು ಎಂದು ಮನವಿ ಮಾಡಲು ಸಂಘದ ಪ್ರತಿನಿಧಿಗಳಾಗಿ ಇಮ್ತಿಯಾಜ್ ಹಾಗೂ ಇತರರು ಸ್ಥಳದಲ್ಲಿ ಹಾಜರಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಿಪರ್ಯಾಸವೆಂದರೆ, ಇಮ್ತಿಯಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಇದೇ ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘವನ್ನು ಮಂಗಳೂರು ಮಹಾನಗರ ಪಾಲಿಕೆ ಸಭೆಗೆ ಆಹ್ವಾನಿಸಿ, ಬೀದಿ ವ್ಯಾಪಾರಿಗಳ ಅಹವಾಲು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ನೋಟಿಸ್ ನೀಡಿದೆ. ಇದರಿಂದ ಪಾಲಿಕೆಯೇ ಸಂಘವನ್ನು ಬೀದಿ ವ್ಯಾಪಾರಿಗಳ ಪ್ರತಿನಿಧಿ ಸಂಸ್ಥೆಯಾಗಿ ಗುರುತಿಸಿರುವುದು ಸ್ಪಷ್ಟವಾಗುತ್ತದೆ ಎಂದು ಎಸ್. ಬಾಲನ್ ವಾದಿಸಿದರು.
ಹೀಗಿರುವಾಗ ಬೀದಿ ವ್ಯಾಪಾರಿಗಳ ಪರವಾಗಿ ಅವರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ ಸಂಘದ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಹೈಕೋರ್ಟ್‌ನ ಈ ಸ್ಪಷ್ಟ ನಿಲುವಿನಿಂದ ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕ್ರಮಕ್ಕೆ ಕಾನೂನುಬದ್ಧ ಮಿತಿ ಎದುರಾಗಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗೆ ಮಹತ್ವದ ಸಂದೇಶ ರವಾನೆಯಾಗಿದೆ.


