Homeಕರ್ನಾಟಕವಿದ್ಯೆಯಿಂದ ಸ್ವಾತಂತ್ರ್ಯ ನಾರಾಯಣ ಗುರುಗಳ ಮಂತ್ರವಾಗಿತ್ತು: ಸಚಿವ ಮಧು ಬಂಗಾರಪ್ಪ

ವಿದ್ಯೆಯಿಂದ ಸ್ವಾತಂತ್ರ್ಯ ನಾರಾಯಣ ಗುರುಗಳ ಮಂತ್ರವಾಗಿತ್ತು: ಸಚಿವ ಮಧು ಬಂಗಾರಪ್ಪ

– “ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ನಾರಾಯಣ ಗುರುಗಳ ಸಂದೇಶ ಇಂದಿಗೂ ಸಮಾಜಕ್ಕೆ ದಾರಿದೀಪ

– ಮತ್ತೆ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡಿದ್ದು ನಾರಾಯಣ ಗುರುಗಳ ಆಶಯ ಈಡೇರಿಸಲು

ನಾಡಿನ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಹಾಗೂ ಮಾನವತಾವಾದಿ ಶ್ರೀ ನಾರಾಯಣ ಗುರುಗಳ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಅವರ ವಿಚಾರಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂಢನಂಬಿಕೆ, ಕಂದಾಚಾರ, ಜಾತಿ ತಾರತಮ್ಯ ಹಾಗೂ ಪುರೋಹಿತಶಾಹಿಯ ಕಟ್ಟುಪಾಡುಗಳ ವಿರುದ್ಧ ಧ್ವನಿ ಎತ್ತಿದ ನಾರಾಯಣ ಗುರುಗಳು, ಧರ್ಮವನ್ನು ಸಾಮಾನ್ಯ ಮನುಷ್ಯನ ಬದುಕಿನೊಂದಿಗೆ ಬೆಸೆದ ಮಹಾನ್ ಚಿಂತಕರಾಗಿದ್ದರು. ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ; ಇಡೀ ಮಾನವ ಸಮಾಜಕ್ಕೆ ದಾರಿ ತೋರಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

“ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ನಾರಾಯಣ ಗುರುಗಳ ಸಂದೇಶ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಜ್ಞಾನ, ಶಿಕ್ಷಣ, ಸಂಘಟನೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮೊದಲ ಸಲ ಶಾಸಕನಾದಾಗಲೇ ನಾರಾಯಣ ಗುರುಗಳ ವಿಚಾರ ಪ್ರಸ್ತಾಪ

ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆಗೆ ಪ್ರವೇಶಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳ ವಿಚಾರವಾಗಿ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆ. ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆ, ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತು ಪಾಠ ಅಳವಡಿಕೆ ಹಾಗೂ ನಾರಾಯಣ ಗುರು ಜಯಂತಿಯನ್ನು ಅಧಿಕೃತವಾಗಿ ಆಚರಿಸುವುದು ಆ ಮೂರು ಪ್ರಮುಖ ಬೇಡಿಕೆಗಳಾಗಿದ್ದವು ಎಂದು ಸಚಿವರು ನೆನಪಿಸಿಕೊಂಡರು.

ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸನ್ಮಾನ್ಯ ಸಿದ್ದರಾಮಯ್ಯ ಅವರು ಈ ಮೂರು ಮನವಿಗಳಿಗೂ ಸ್ಪಂದಿಸಿ ಅನುಮೋದನೆ ನೀಡಿದರು. ಅಂದಿನ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರು ಮುಂದಿನ ವರ್ಷವೇ ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಕುರಿತು ಪಾಠ ಅಳವಡಿಸಲು ಕ್ರಮ ಕೈಗೊಂಡರು. ಇದು ವೈಯಕ್ತಿಕವಾಗಿ ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಾರಾಯಣ ಗುರುಗಳ ವಿಚಾರಗಳು ಕೇವಲ ಜಯಂತಿ ವೇದಿಕೆಯಲ್ಲಿ ಕೇಳಿಸುವ ಮಾತುಗಳಾಗಬಾರದು. ಅವು ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲೂ ಇರಬೇಕು, ಅವರ ಮನಸ್ಸಿನಲ್ಲೂ ಬೇರೂರಬೇಕು ಎಂಬುದು ನನ್ನ ನಂಬಿಕೆ ಎಂದು ಮಧು ಬಂಗಾರಪ್ಪ ಹೇಳಿದರು.

ಶಿಕ್ಷಣವೇ ನಾರಾಯಣ ಗುರುಗಳ ದಾರಿ

ನಾರಾಯಣ ಗುರುಗಳು ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದ್ದರು. ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ಮನುಷ್ಯನನ್ನು ಸ್ವಾಭಿಮಾನಿ, ವಿವೇಕವಂತ ಹಾಗೂ ಸ್ವತಂತ್ರ ಚಿಂತನೆಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಎಂದು ಸಚಿವರು ಹೇಳಿದರು.

“ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ನಾರಾಯಣ ಗುರುಗಳ ಸಂದೇಶ ಇಂದಿನ ಕಾಲಘಟ್ಟದಲ್ಲೂ ಅತ್ಯಂತ ಪ್ರಸ್ತುತವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ನಾರಾಯಣ ಗುರುಗಳ ಚಿಂತನೆಗಳು ವಿಶೇಷ ಪ್ರೇರಣೆಯಾಗಿವೆ ಎಂದರು.

ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡೆ

ಕಾಂಗ್ರೆಸ್ ವರಿಷ್ಠರ ಆಶೀರ್ವಾದ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಬೆಂಬಲ ಹಾಗೂ ಸಮಾಜದ ಮುಖಂಡರ ಆಶೀರ್ವಾದದಿಂದ ಎರಡನೇ ಅವಧಿಗೆ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ, “ನಿಮಗೆ ಬೇರೆ ಖಾತೆ ಬೇಕಾ? ಅಥವಾ ಶಿಕ್ಷಣ ಇಲಾಖೆಯೇ ಇರಬೇಕಾ?” ಎಂದು ಕೇಳಿದ್ದರು. ನಾನು ಯಾವುದೇ ಮರುಯೋಚನೆ ಮಾಡದೆ ಶಿಕ್ಷಣ ಇಲಾಖೆಯೇ ಇರಲಿ ಎಂದು ಹೇಳಿದ್ದೆ. ಏಕೆಂದರೆ “ಮಕ್ಕಳ ಕೆಲಸವೇ ದೇವರ ಕೆಲಸ; ಅದೇ ನಾರಾಯಣ ಗುರುಗಳಿಗೆ ಸಲ್ಲಿಸುವ ನಿಜವಾದ ಸೇವೆ” ಎಂದು ನಾನು ಸದಾ ನಂಬಿದ್ದೇನೆ ಎಂದರು.

ರಾಜ್ಯದ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಗುರಿಯಾಗಿದೆ. ನಾರಾಯಣ ಗುರುಗಳು ಕಂಡ ಕನಸಿನ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಅತ್ಯಂತ ದೊಡ್ಡ ಸಾಧನ ಎಂದು ಅವರು ಹೇಳಿದರು.

ಬಂಗಾರಪ್ಪ–ರಾಜ್‌ಕುಮಾರ್ ಸಮುದಾಯದ ಎರಡು ಕಣ್ಣುಗಳು

ನಮ್ಮ ತಂದೆಯವರಾದ ಸಾರೆಕೊಪ್ಪ ಬಂಗಾರಪ್ಪ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರು ನಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ. ತಂದೆಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಆದರೆ, “ನೀನು ಮುಂದೆ ಮುಖ್ಯಮಂತ್ರಿ ಆಗುತ್ತೀಯ” ಎಂದು ತಂದೆಯವರು ಹೇಳಿದ್ದ ಮಾತು ಇಂದು ನಿಜವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ ಎಂದು ಸ್ಮರಿಸಿದರು.

ಇಂದು ಅಣ್ಣನ ಸಮಾನರಾದ ಡಿ.ಕೆ. ಶಿವಕುಮಾರ್ ಅವರ ಅಡಿಯಲ್ಲಿ ಸಚಿವನಾಗಿ ಕೆಲಸ ಮಾಡುತ್ತಿರುವುದು, ನಮ್ಮ ತಂದೆಯವರ ಅಡಿಯಲ್ಲೇ ಕೆಲಸ ಮಾಡುತ್ತಿರುವ ಅನುಭವ ನೀಡುತ್ತಿದೆ. ಇದು ನನ್ನ ಪಾಲಿನ ದೊಡ್ಡ ಭಾಗ್ಯ ಎಂದು ಮಧು ಬಂಗಾರಪ್ಪ ಹೇಳಿದರು.

ಸಮುದಾಯದ ಬೇಡಿಕೆ ಈಡೇರಿಸಲು ಮನವಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ನಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮುದಾಯಕ್ಕೆ ಆರ್ಥಿಕವಾಗಿ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸೋಣ. ಎಲ್ಲರಿಗೂ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಶುಭಾಶಯಗಳು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಸಂಡೂರಿನ ಮಹಾಕಾಳಿ ಓಂ ಶಕ್ತಿ ಪೀಠದ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ, ಸಾರಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಶ್ರೀಗಳು, ಹಜಲಾಫುರ ಬಲಭೀಮಸೇನ ದೇವಸ್ಥಾನದ ಶ್ರೀ ಶಂಕರಪ್ಪ ಸ್ವಾಮೀಜಿ, ಸೈದಾಪುರ ಬಾಲಯೋಗಿ ರಾಜೇಂದ್ರ ಮಠದ ಶ್ರೀ ಅನುಷ್ಠಾನಮೂರ್ತಿ ಭೀಮಾಶಂಕರ ಶರಣ ಸ್ವಾಮೀಜಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ. ವೇದಕುಮಾರ್, ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments