Homeಕರ್ನಾಟಕಕ್ವಿನ್ ಸಿಟಿಯಲ್ಲಿ ಲಕ್ಸಂಬರ್ಗ್ ಸಹಭಾಗಿತ್ವಕ್ಕೆ ಆಹ್ವಾನ, ಜಪಾನ್‌ನಲ್ಲಿ ಹೂಡಿಕೆ ಆಕರ್ಷಣೆ: ಸಚಿವ ಎಂ ಬಿ ಪಾಟೀಲ

ಕ್ವಿನ್ ಸಿಟಿಯಲ್ಲಿ ಲಕ್ಸಂಬರ್ಗ್ ಸಹಭಾಗಿತ್ವಕ್ಕೆ ಆಹ್ವಾನ, ಜಪಾನ್‌ನಲ್ಲಿ ಹೂಡಿಕೆ ಆಕರ್ಷಣೆ: ಸಚಿವ ಎಂ ಬಿ ಪಾಟೀಲ

ಲಕ್ಸಂಬರ್ಗ್ ಉಪ ಪ್ರಧಾನಿ ಕ್ಸೇವಿಯರ್ ಬೆಟಲ್ ಸೆ.7ರಿಂದ 9ರ ನಡುವೆ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಆ ದೇಶದ ಭಾರತೀಯ ರಾಯಭಾರಿಯಾಗಿರುವ ಕ್ರಿಶ್ಚಿಯನ್ ಬೀವರ್ ಮತ್ತು ಲಕ್ಸಂಬರ್ಗ್ ಎಂಬೆಸಿಯಲ್ಲಿ ಕೌನ್ಸೆಲರ್ ಆಗಿರುವ ಮ್ಯಾಕ್ಸಿಮ್ ವಿಕ್ಟರ್ ಸೋಮವಾರದಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಬೇಟಿ ಮಾಡಿ, ಹೂಡಿಕೆ ಮತ್ತು ಸಹಭಾಗಿತ್ವ ಕುರಿತು ವಿಚಾರ ವಿನಿಮಯ ನಡೆಸಿದರು.

ಖನಿಜ ಭವನದಲ್ಲಿ ನಡೆದ ಈ ಭೇಟಿಯ ಬಗ್ಗೆ ಮಾತನಾಡಿದ ಸಚಿವರು, ಹೂಡಿಕೆ, ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಲಕ್ಸಂಬರ್ಗ್ ಜತೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒಲವು ವ್ಯಕ್ತವಾಗಿದೆ. ಇದಕ್ಕೆ ಲಕ್ಸಂಬರ್ಗ್ ಕೂಡ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ಬೀವರ್ ಮತ್ತು ವಿಕ್ಟರ್ ಇಬ್ಬರೂ ಬೆಂಗಳೂರು ನಗರವು ಭಾರತದ ಸಿಲಿಕಾನ್ ಸಿಟಿ ಆಗಿ ಬೆಳೆದಿರುವುದನ್ನು ಮತ್ತು ಇಲ್ಲಿನ ಅತ್ಯುತ್ತಮ ಕೈಗಾರಿಕಾ ಕಾರ್ಯ ಪರಿಸರ ಹಾಗೂ ಪ್ರತಿಭಾನ್ವಿತ ಮಾನವ ಸಂಪನ್ಮೂಲವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಎಂದಿದ್ದಾರೆ.

ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ಅಭಿವೃದ್ಧಿ ಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಇರುವ ಸದವಕಾಶಗಳ ಬಗ್ಗೆಯೂ ಲಕ್ಸಂಬರ್ಗ್ ನಿಯೋಗಕ್ಕೆ ಮನದಟ್ಟು ಮಾಡಿಕೊಡಲಾಗಿದೆ. ಇಲ್ಲಿ ಆ ದೇಶದ ವಿಶ್ವವಿದ್ಯಾಲಯಗಳು, ಕಂಪನಿಗಳು ಮತ್ತು ನಾವೀನ್ಯತಾ ಸಂಸ್ಥೆಗಳು ಈ ಯೋಜನೆಯ ಭಾಗವಾಗಿ ಸಹಭಾಗಿತ್ವ ಸ್ಥಾಪಿಸಿಕೊಳ್ಳಬೇಕು ಮತ್ತು ಹೂಡಿಕೆ ಮಾಡಬೇಕು ಎಂದು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಲಕ್ಸಂಬರ್ಗ್ ಮೂಲದ ಸೆರಾಟಿಝಿಟ್ ಕಂಪನಿ ಈಗಾಗಲೇ ನಮ್ಮಲ್ಲಿ ಕೈಗಾರಿಕಾ ಬಳಕೆಗೆ ಬೇಕಾಗುವ ಆಧುನಿಕ ಸಾಧನಗಳನ್ನು (ಅಡ್ವಾನ್ಸ್ಡ್ ಕಟಿಂಗ್ ಮೆಟೀರಿಯಲ್ಸ್) ತಯಾರಿಸುತ್ತಿದೆ. ಮಿಕ್ಕಂತೆ ಉಕ್ಕು, ಆಟೋಮೋಟಿವ್, ಎಂಜಿನಿಯರಿಂಗ್, ಶುದ್ಧ ಇಂಧನ, ಕೈಗಾರಿಕಾ ಸಾಧನಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಲಯಗಳಲ್ಲಿ ಲಕ್ಸಂಬರ್ಗ್ ಪರಿಣತಿ ಹೊಂದಿದೆ ಎನ್ನುವುದನ್ನು ಅವರು ನಮ್ಮ ಗಮನಕ್ಕೆ ತಂದಿದ್ದಾರೆ. ಬೆಂಗಳೂರು ಮೂಲದ ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳು ಲಕ್ಸಂಬರ್ಗಿನಲ್ಲಿ ಬಂಡವಾಳ ಹೂಡಿದ್ದು, ಕ್ರಿಯಾಶೀಲವಾಗಿವೆ ಎಂದು ಪಾಟೀಲ ವಿವರಿಸಿದ್ದಾರೆ.

ಫುಕುವೋಕಾದಲ್ಲಿ ಹೂಡಿಕೆ ಆಕರ್ಷಣೆ ಕಾರ್ಯಕ್ರಮ: ಎಂ ಬಿ ಪಾಟೀಲ

ಜಪಾನಿನ ದ್ವಿತೀಯ ಸ್ತರದ ಸೆಮಿಕಂಡಕ್ಟರ್ ಕಂಪನಿಗಳು ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ರಾಜ್ಯದ ಕೈಗಾರಿಕಾ ಕಾರ್ಯಪರಿಸರ ಮತ್ತು ನೀತಿಗಳು ಪ್ರಶಸ್ತವಾಗಿವೆ. ಇದನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಆ ದೇಶದ ಫುಕುವೋಕಾದಲ್ಲಿ ಸದ್ಯದಲ್ಲೇ ಹೂಡಿಕೆ ಆಕರ್ಷಣೆ ಕಾರ್ಯಕ್ರಮ ನಡೆಸಲಾಗುವುದು ಎಂದೂ ಎಂ ಬಿ ಪಾಟೀಲ ಹೇಳಿದ್ದಾರೆ.

ಫುಕುವೋಕಾದಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಸಿ.ರಾಮಕುಮಾರ್ ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ನಂತರ ಅವರು ಈ ವಿಚಾರ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆ (ಆರ್ & ಡಿ) ಮತ್ತು ನೂರಾರು ಕಂಪನಿಗಳ ಜಿಸಿಸಿ ಕೇಂದ್ರಗಳ ಬಗ್ಗೆ ಜಪಾನಿನ ಉದ್ಯಮಿಗಳು ಸಾದ್ಯಂತವಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರೆಲ್ಲ ನಮ್ಮಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದು ಕಾನ್ಸುಲ್ ಜನರಲ್ ತಿಳಿಸಿದ್ದಾರೆ. ನಾವು ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಅವರು ನುಡಿದಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿರುವ ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ನಮ್ಮ ಕೈಗಾರಿಕಾ ಬೆಳವಣಿಗೆ ಮತ್ತು ಪ್ರತಿಭಾವಂತ ಮಾನವ ಸಂಪನ್ಮೂಲದ ಸೃಷ್ಟಿಯ ಹಿಂದಿವೆ. ಆದ್ದರಿಂದ ಫುಕುವೋಕಾ ಸೇರಿದಂತೆ ಮಿಕ್ಕ ಭಾಗಗಳ ಉದ್ಯಮಿಗಳು ಕೂಡ ರಾಜ್ಯದಲ್ಲಿ ಕೈಗಾರಿಕಾ ಸಹಭಾಗಿತ್ವ, ತಾಂತ್ರಿಕ ಸಹಯೋಗ ಮತ್ತು ಹೂಡಿಕೆ ಅವಕಾಶಗಳಿಗೆ ಕಾತರದಿಂದಿದ್ದಾರೆ ಎನ್ನುವುದು ದೃಢವಾಗಿದೆ. ಇದು ನನಸಾದರೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ದೊಡ್ಡ ಶಕ್ತಿ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments