ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಾಗೂ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಅವರ ನಡೆಸುತ್ತಿರುವ “ಸಂಸತ್ ಚಲೋ” ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಕೊನೆಗೂ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ.
ನೀಟ್ ಹಗರಣ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆ ದೆಹಲಿಯ ಜಂತರ್ ಮಂತರ್ನಲ್ಲಿ ತೀವ್ರಗೊಂಡಿದ್ದು, ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಸಂಘರ್ಷಣೆ ಉಂಟಾಗಿದೆ.
ಸಿಜೆಪಿಯ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ‘ಸಂಸತ್ ಚಲೋ’ ಮೂಲಕ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಾಗೂ ಆರ್ಪಿಎಫ್ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದು, ಹಲವರನ್ನು ಬಂಧಿಸಲಾಗಿದೆ. ಸಿಜೆಪಿ ಉದ್ದೇಶಿತ ಸಂಸತ್ ಚಲೋ ಪ್ರತಿಭಟನೆ ಹಿನ್ನೆಲೆ ಭದ್ರತಾ ಪಡೆಗಳು ಭಾರಿ ಕಟ್ಟೆಚ್ಚರ ವಹಿಸಿವೆ. ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ.
ನೀಟ್ (NEET) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಗೆ ಸಂಬಂಧಿಸಿದ ತೀವ್ರ ಕಳವಳಗಳ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರದಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸತ್ ಚಲೋ ಮೆರವಣಿಗೆ ಆರಂಭಿಸಿದೆ.
ಈ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ ಇರದ ಕಾರಣ ಕೆಲ ಕಡೆಗಳಲ್ಲಿ ಲಾಠಿ ಚಾರ್ಜ್ ಕೂಡ ಆಗಿದೆ ಎಂದು ವರದಿಯಾಗಿದೆ. ಅಲ್ಲದೆ, ಜಂತರ್ ಮಂತರ್ ಬಳಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಸಹ ಮಾಡಲಾಗಿದೆ. ಆದರೆ ಈಗ ಈ ಪ್ರತಿಭಟನೆಯನ್ನು ಗಂಭೀರಾವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಈ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಮಾತುಕತೆ ನಡೆಸಿದ್ದಾರೆ. ಶಾ ಅವರನ್ನು ಸಂಸತ್ತಿನ ಆವರಣದಲ್ಲಿರುವ ಅವರ ಕಚೇರಿಯಲ್ಲೇ ಪ್ರಧಾನ್ ಭೇಟಿಯಾಗಿದ್ದಾರೆ. ಯಾವ ವಿಚಾರ ಚರ್ಚೆಯಾಗಿದೆ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ ಎಂದು ವರದಿಯಾಗಿದೆ.


