Homeಕರ್ನಾಟಕ178 ತಾಲೂಕಲ್ಲಿ ಮಳೆ ಕೊರತೆ: ವಿಬಿಜಿ ರಾಮ್ ಜಿ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ

178 ತಾಲೂಕಲ್ಲಿ ಮಳೆ ಕೊರತೆ: ವಿಬಿಜಿ ರಾಮ್ ಜಿ ಉದ್ಯೋಗ ನೀಡಲು ಈಶ್ವರ ಖಂಡ್ರೆ ಸೂಚನೆ

  • ವಿಬಿಜಿ ರಾಮ್ ಜಿ ತಿಂಗಳಿಗೆ 1 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ: ಈಶ್ವರ ಖಂಡ್ರೆ

ರಾಜ್ಯದ 178 ತಾಲೂಕುಗಳಲ್ಲಿ ಮಳೆಯ ಕೊರತೆ ಆಗಿದ್ದು, 60 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಆಗಿದೆ. ಹೀಗಾಗಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲು ಮತ್ತು ಯಾರೂ ಗುಳೆ ಹೋಗದಂತೆ ಗ್ರಾಮಗಳಲ್ಲೇ ಉದ್ಯೋಗ ನೀಡಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಆಗಬಾರದು ಎಂದು 117 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದ್ದೇವೆ. 95 ಕೋಟಿ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನೂ 25 ಕೋಟಿ ರೂ. ವಿವಿಧ ಜಿಲ್ಲೆಗಳಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಗ್ರಾಮದಲ್ಲಿ, ತಾಂಡಾದಲ್ಲಿ ಮೇಲ್ಮೈ ನೀರು ದೊರಕದೆ, ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ, ಖಾಸಗಿ ಬೋರ್ ವೆಲ್, ಬಾವಿ ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲು ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಮೂರು ನಾಲ್ಕು ತಿಂಗಳು ಮಳೆಯೇ ಬಾರದಿದ್ದರೆ ಮುಂದಿನ ವರ್ಷ ಮುಂಗಾರು ಆರಂಭವಾಗುವವರೆಗೆ ನೀರಿನ ಕೊರತೆ ಆಗದಂತೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಕ್ರಮಗಳನ್ನು ಕೈಗೊಳ್ಳಲಾಗುವುದು, ಇದಕ್ಕೂ ಅಧ್ಯಯನ, ಸಿದ್ಧತೆ ನಡೆದಿದೆ ಎಂದರು.

ಬ್ಯಾಂಕ್ ಸಾಲ ಬಾಕಿ ಇರುವ ರೈತರು ಮತ್ತು ಸಾಲವನ್ನು ಒಂದು ಬಾರಿ ಇತ್ಯರ್ಥ ಮಾಡಿಕೊಂಡಿರುವ ರೈತರು ಸಮುದಾಯ ಸೇವಾ ಕೇಂದ್ರದಲ್ಲಿ ಬೆಳೆ ವಿಮೆ ಕಂತು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ತಾವು ಬಿತ್ತನೆ ಮಾಡಿರುವ ಬೆಳೆಗೆ ವಿಮೆ ಮಾಡಿಸಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.

ವಿಬಿಜಿ ರಾಮ್ ಜಿಯಡಿ 5 ಲಕ್ಷ ಮಾನವದಿನ ಉದ್ಯೋಗ ಸೃಷ್ಟಿ:

ಕೇಂದ್ರ ಸರ್ಕಾರ ಮನ್ರೇಗಾದಡಿ ನೀಡುತ್ತಿದ್ದ 90:10 ಅನುಪಾತ ಬದಲಿಸಿ 60:40 ಅನುಪಾತ ಮಾಡಿದ್ದು, ರಾಜ್ಯದ ಮೇಲೆ ಹೊರೆಯಾಗಿದ್ದರೂ ಕೂಡ ಬಡವರ, ಗ್ರಾಮೀಣರ, ದಲಿತರ, ವಂಚಿತರ ಹಿತದೃಷ್ಟಿಯಿಂದ ಜುಲೈ 1ರಿಂದ ಯೋಜನೆ ಜಾರಿಗೆ ತಂದಿದ್ದು, ನಿನ್ನೆಯವರೆಗೆ 5 ಲಕ್ಷ ಮಾನವದಿನ ಉದ್ಯೋಗ ಸೃಷ್ಟಿಸಲಾಗಿದೆ. ರಾಜ್ಯದ ಗ್ರಾಮ ಪಂಚಾಯತಿಗೆ ಉದ್ಯೋಗ ಕೇಳಿ ಬಂದವರಿಗೆಲ್ಲಾ ಉದ್ಯೋಗ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಬಿಜಿ ರಾಮ್ ಜಿಯಡಿ 318 ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಹೊಸದಾಗಿ ಹೆಚ್ಚುವರಿ ಕ್ರಿಯಾಯೋಜನೆ ಸಲ್ಲಿಸಲು ಪೋರ್ಟಲ್ ನಲ್ಲಿ ಅವಕಾಶವಿದೆ. ಜೊತೆಗೆ ಶಾಲಾ ಕೊಠಡಿ, ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳ ದುರಸ್ತಿ, ನಿರ್ವಹಣೆ, ಕೃಷಿ ಹೊಂಡ, ವಿತರಣಾ ಕಾಲುವೆ, ಹನಿ ನೀರಾವರಿ, ಕಿರು ಅರಣ್ಯದಂತಹ ಯೋಜನೆಗಳನ್ನೂ ಕೈಗೊಳ್ಳಲು ಅವಕಾಶವಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.

ಈ ತಿಂಗಳಾಂತ್ಯದೊಳಗೆ ವಿಬಿಜಿ ರಾಮ್ ಜಿ ಅಡಿ 10 ಲಕ್ಷ ಮಾನವ ದಿನ ಸೃಜಿಸಲಾಗುವುದು. ಆದರೆ ಪ್ರತಿ ತಿಂಗಳೂ 1.25 ಕೋಟಿ ಮಾನವ ದಿನ ಉದ್ಯೋಗ ಸೃಷ್ಟಿ ಗುರಿಯಿದ್ದು, ಮೊದಲ ತ್ರೈಮಾಸಿಕದಲ್ಲಿ 2900 ಕೋಟಿ ರೂ. ಬಿಡುಗಡೆ ಆಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಸಮಸ್ಯೆ ಬರುವುದಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರುವ ಪ್ರತಿಯೊಬ್ಬರಿಗೂ 125 ದಿನ ಉದ್ಯೋಗ ದೊರಕಲಿದೆ. ರೈತರ ಆತ್ಮಹತ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ಈ ದೇಶದ ಬೆನ್ನೆಲುಬು, ಅವರು ಅನ್ನದಾತರು, ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಆತ್ಮಹತ್ಯೆಯೇ ಪರಿಹಾರವಲ್ಲ, ಯಾರೂ ಆ ತಪ್ಪ ಮಾಡಬಾರದು ಸರ್ಕಾರ ಅನ್ನದಾತರ ರಕ್ಷಣೆಗೆ ಸದಾ ನಿಲ್ಲುತ್ತದೆ. ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments