Homeಕರ್ನಾಟಕಲಕ್ಷ್ಮಣ್ ಸವದಿಗೆ ಸದ್ಯದಲ್ಲೇ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ

ಲಕ್ಷ್ಮಣ್ ಸವದಿಗೆ ಸದ್ಯದಲ್ಲೇ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ

1500 ಕೋಟಿ ರೂ. ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ಕೊಡುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನಮ್ಮ ಕಾಂಗ್ರೆಸ್ ಸರ್ಕಾರ ಈ ಬೃಹತ್ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದನ್ನು ಮರೆಯಲಾಗದು. ಲಕ್ಷ್ಮಣ್ ಸವದಿಗೆ ಸದ್ಯದಲ್ಲೇ ಒಳ್ಳೆ ಭವಿಷ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

“ಈ ಯೋಜನೆಯಿಂದ ಎರಡು ರೀತಿಯ ಲಾಭ ಆಗಲಿದೆ. ಮೊದಲಿಗೆ ಒಣ ಭೂಮಿ ಇರುವ ಜಮೀನುಗಳಿಗೆ ನೀರು ಒದಗುತ್ತದೆ. ಎರಡನೆಯದಾಗಿ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿ ಕೂಡ ಆಗುತ್ತದೆ” ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಉದಾಹರಣೆಗಳನ್ನು ನೀಡಿ ವಿವರಿಸಿದರು.

“ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಒಂಚೂರು ಸಹಕಾರ ನೀಡುತ್ತಿಲ್ಲ. ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬೇ ಒಬ್ಬ ಸಂಸದ ಪಾರ್ಲಿಮೆಂಟಲ್ಲಿ ದ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ” ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.

“ನೀರಾವರಿ ಯೋಜನೆಗಳ ಬಗ್ಗೆಯೂ ಈ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು ಹೇಳಿ. ಬಿಜೆಪಿ ಇವತ್ತಿನವರೆಗೂ ನುಡಿದಂತೆ ನಡೆದ ಒಂದೇ ಒಂದು ಉದಾಹರಣೆ ಇದೆಯಾ ನೀವೇ ವಿಚಾರ ಮಾಡಿ. ಕಾಂಗ್ರೆಸ್ ಸರ್ಕಾರ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ನೀವು ಕೊಟ್ಟ ಓಟಿಗೆ ಗೌರವ ಕೊಟ್ಟಿದ್ದೇವೆ. ಹೌದೋ ಇಲ್ಲವೋ ಎದೆ ಮುಟ್ಟಿಕೊಂಡು ಕೇಳಿಕೊಳ್ಳಿ” ಎಂದು ಸಿಎಂ ಕರೆ ನೀಡಿದರು.

“ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ, ಕುಟುಂಬದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ಕೊಡುತ್ತಿರುವ ನಾವು ಬೇಕೋ-ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮ ಬದುಕಿಗೆ ವಂಚಿಸುತ್ತಿರುವ ಬಿಜೆಪಿ ಬೇಕಾ? ನಿಮ್ಮ ಹೃದಯವನ್ನು ಕೇಳಿಕೊಳ್ಳಿ. ನಿಮ್ಮ ಹೃದಯ ಹೇಳಿದವರಿಗೆ ಮತ ಹಾಕಿ” ಎಂದರು.

“ನರೇಂದ್ರ ಮೋದಿಯವರ ಸುಳ್ಳುಗಳಿಗೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳಿಗೆ ಕೋಲೆ ಬಸವನಂತೆ ತಲೆ ಆಡಿಸುವ ಬಿಜೆಪಿಯನ್ನು ತಿರಸ್ಕರಿಸಿ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕೆಲಸ ಮಾಡಿದವರಿಗೆ ನೀವು ಕೂಲಿ ಕೊಡಿ” ಎಂದು ಮನವಿ ಮಾಡಿದರು.

ಶಾಸಕರಾದ ಲಕ್ಷ್ಮಣ್ ಎಂ‌ ಸವದಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಎಂ ಪಟ್ಟಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments