Homeಕರ್ನಾಟಕಸೈಬರ್ ಸೆಕ್ಯೂರಿಟಿ ಪಾಲಿಸಿಯನ್ನು ಸರ್ಕಾರ ಶೀಘ್ರ ಜಾರಿಗೆ ತರಲಿದೆ: ಸಚಿವ ಡಾ.‌ಜಿ.ಪರಮೇಶ್ವರ್

ಸೈಬರ್ ಸೆಕ್ಯೂರಿಟಿ ಪಾಲಿಸಿಯನ್ನು ಸರ್ಕಾರ ಶೀಘ್ರ ಜಾರಿಗೆ ತರಲಿದೆ: ಸಚಿವ ಡಾ.‌ಜಿ.ಪರಮೇಶ್ವರ್

ರಾಜ್ಯ ಸರ್ಕಾರವು ಶೀಘ್ರವಾಗಿ ಸೈಬರ್ ಸೆಕ್ಯೂರಿಟಿ ಪಾಲಿಸಿಯನ್ನು ಜಾರಿಗೆ ತರಲಾಗುವುದು. ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಅನುಕೂಲವಾಗುತ್ತದೆ. ಈ ದೃಷ್ಟಿಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಒಂದು ಹೆಜ್ಜೆ ಮುಂದಿದೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ್ ಹೇಳಿದರು.

ರಾಜ್ಯ ಪೊಲೀಸ್ ಇಲಾಖೆ, ಸಿಐಡಿ ಹಾಗೂ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ಸೈಬರ್ ಅಪರಾಧ ತನಿಖಾ‌ ಶೃಂಗ ಸಭೆ-2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ದೇಶದ ಬಹುತೇಕ ವಲಯಗಳಲ್ಲಿ ಡಿಜಿಟಲ್ ಸೇವೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ‌ ಪೂರಕವಾಗಿ ಸೈಬರ್ ಭದ್ರತೆ ಕುರಿತು ಅರಿತುಕೊಳ್ಳುವುದು ಅಗತ್ಯ. ಸರ್ಕಾರದ ಹಲವು ಇಲಾಖೆಗಳು ಜನರಿಗೆ ಸುಲಭವಾಗಿ ಸೇವೆ ಒದಗಿಸಲು ಡಿಜಿಟಲ್ ಮೊರೆ ಹೋಗುತ್ತಿವೆ‌. ಸೇವಾಸಿಂಧು, ಮೊಬೈಲ್ ಬ್ಯಾಂಕಿಂಗ್, ವರ್ಚ್ಯುವಲ್ ಕ್ಲಾಸ್‌ಗಳು ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಸೈಬರ್ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಗಮನಹರಿಸಬೇಕು” ಎಂದರು.

“ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳು, ಸೈಬರ್ ವಂಚನೆಗೊಳಗಾದ ಜನರಿಗೆ ಸುರಕ್ಷತೆ ಒದಗಿಸುವ ಕೆಲಸ ಮಾಡುತ್ತಿವೆ. ಸೈಬರ್ ಅಪರಾಧಿಗಳು ಡಿಜಿಟಲ್ ಜಗತ್ತಿನಲ್ಲಿ ಹ್ಯಾಕಿಂಗ್ ಮೂಲಕ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದತ್ತಾಂಶವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದೇ ಇದಕ್ಕೆ ಪರಿಹಾರ. ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು” ಎಂದು ಹೇಳಿದರು.

“ರಾಜ್ಯ ಸರ್ಕಾರವು ಸೈಬರ್ ಕ್ರೈಂ ವಿಭಾಗದ ಬಲ ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳ ನೆರವು ಪಡೆದುಕೊಳ್ಳಲಾಗುವುದು. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.‌ ಪೊಲೀಸ್, ನ್ಯಾಯಾಂಗ ಮತ್ತು ಭಾರತೀಯ ರಕ್ಷಣೆ ಪಡೆಗಳ 33 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಸಿಐಡಿ ಕಚೇರಿಯಲ್ಲಿ ಸ್ಥಾಪಿಸಿರುವ ಸಿಸಿಐಟಿಆರ್‌ನಲ್ಲಿ ಆರೋಜಿಸುತ್ತಿರುವ ತರಬೇತಿ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡಿದ್ದಾರೆ” ಎಂದು ವಿವರಿಸಿದರು.

“ಸೈಬರ್ ಅಪರಾಧಿಗಳು ಜಗತ್ತಿನ ಯಾವುದೋ ಪ್ರದೇಶದಲ್ಲಿ ಕುಳಿತುಕೊಂಡು ಇನ್ನೊಂದು ಪ್ರದೇಶದ ಮೇಲೆ ಬೆದರಿಕೆ, ವಂಚನೆ ಸೇರಿದಂತೆ ಇನ್ನಿತರ ಸೈಬರ್ ದಾಳಿ ನಡೆಸುತ್ತಾರೆ. ಇದು ಆಯಾ ವಲಯದ ಮಾರುಕಟ್ಟೆ, ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತನಿಖೆ ನಡೆಸಿ ಅಪರಾಧಿಗಳನ್ನು ಮಟ್ಟಹಾಕಲು ಜಾಗತಿಕ ಮಟ್ಟದಲ್ಲಿ ಸಹಯೋಗ ಅಗತ್ಯವಾಗುತ್ತದೆ” ಎಂದು ಹೇಳಿದರು.

“ಡೀಪ್‌ಫೇಕ್, ಅಕ್ರಮ ಹಣ ವರ್ಗಾವಣೆ, ಆನ್ಲೈನ್ ಬ್ಯಾಂಕಿಂಗ್, ಲೋನ್ ಆ್ಯಪ್ ವಂಚನೆ ಸೇರಿದಂತೆ ಇನ್ನಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಗಂಭೀರ ಪ್ರಕರಣಗಳಲ್ಲಿ ವಿದೇಶಿ ಕಂಪನಿಗಳ ನೆರವು ಸಿಗದಿದ್ದರೆ ತನಿಖೆ ಕಷ್ಟವಾಗುತ್ತದೆ. ಸೈಬರ್ ಕ್ರೈಂ ಜಾಗತಿಕ ಸವಾಲು ಮತ್ತು ಸಮಸ್ಯೆಯಾಗಿದೆ. ಹೀಗಾಗಿ ಹಲವು ಕಂಪನಿಗಳು ಸೈಬರ್ ಅಪರಾಧ ತಡೆಗಟ್ಟಲು ಸಂಶೋಧನೆಗೆ ಇಳಿದಿವೆ” ಎಂದು ತಿಳಿಸಿದರು.

ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಡಾ. ಎಂ.ಎ.ಸಲೀಂ, ಎಡಿಜಿಪಿ ಪ್ರಣಬ್ ಮೊಹಂತಿ,‌ ಇನ್ಫೋಸಿಸ್ ಫೌಂಡೇಷನ್‌ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಸಿಇಓ ವಿನಾಯಕ್ ಗೋಡ್ಸೆ ಉಪಸ್ಥಿತರಿದ್ದರು‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments