Homeಅಭಿಮನ್ಯುವಿಶ್ಲೇಷಣೆ | ಖರ್ಗೆ ಅವಿರತ ಶ್ರಮ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ

ವಿಶ್ಲೇಷಣೆ | ಖರ್ಗೆ ಅವಿರತ ಶ್ರಮ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ

ರಾಜಕೀಯ ಬದುಕಿನುದ್ದಕ್ಕೂ ಕೇವಲ ಅಭಿವೃದ್ಧಿ ಮಂತ್ರ ಜಪಿಸಿದ, ಹಿಂದುಳಿದ ಹೈದ್ರಾಬಾದ್ ಕರ್ನಾಟಕದ ಒಳಿತಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟ, ಒಂದೂ ಕಪ್ಪು ಚುಕ್ಕೆ ಹೊಂದದ ವ್ಯಕ್ತಿತ್ವ ಮಲ್ಲಿಕಾರ್ಜುನ ಖರ್ಗೆ ಅವರದ್ದು. ನಾಡು ಕಂಡ ಇಂಥ ಧೀಮಂತ ರಾಜಕಾರಣಿ ಬಗ್ಗೆ ಡಾ. ರಾಜಶೇಖರ ಹತಗುಂದಿ ಅವರು 'ಅಭಿಮನ್ಯು' ಮೇ ತಿಂಗಳ ಸಂಚೆಕೆಯಲ್ಲಿ ಬರೆದ ವಿಶ್ಲೇಷಣಾ ಬರಹ ಇಲ್ಲಿದೆ.

“ನೀವು ಕಾಂಗ್ರೆಸ್‌ಗೆ ವೋಟ್ ಹಾಕಲು ಬರದೇ ಇದ್ದರೂ ಪರವಾಗಿಲ್ಲ. ನಾನು ಸತ್ತ ಮೇಲೆ ನನ್ನ ಕೆಲಸಗಳನ್ನು ನೆನಪು ಮಾಡಿಕೊಂಡು ನನ್ನ ಅಂತ್ಯ ಸಂಸ್ಕಾರಕ್ಕಾದರೂ ಬನ್ನಿ… ಸುಟ್ಟರೆ ಮೇಣದ ಬತ್ತಿ ಹಚ್ಚಿ, ಹೂತ್ರೆ ಒಂದು ಹಿಡಿ ಮಣ್ಣಾಕಿ…ಆಗ ಜನ ನೋಡಪ್ಪ ಆತನ ಆಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು…”

ಅವರ ಈ ಮಾತುಗಳಲ್ಲಿ ಅದೆಂತಹ ಗಾಢ ಯಾತನೆ ಅಡಗಿದೆ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಸೋಲೇ ಇಲ್ಲದ ಸರದಾರರಾಗಿದ್ದ ಅವರನ್ನು ಕಳೆದ ಚುನಾವಣೆಯಲ್ಲಿ ಅವರ ಶಿಷ್ಯನೇ ಸೋಲಿಸಿದ ಪರಿಣಾಮ ಮೂಡಿ ಬಂದ ಈ ಮಾತುಗಳಿಗೆ ಒಂದು ಅರ್ಥವಿದೆ. ಯಾರೇ ಆ ಸ್ಥಾನದಲ್ಲಿ ಇದ್ದರೂ ಹೀಗೆಯೆ ಮಾತನಾಡುತ್ತಿದ್ದರು.

ಹೌದು…ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಕಲಬುರ್ಗಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಈ ರೀತಿ ತಮ್ಮ ಅಸಮಾಧಾನ, ಬೇಜಾರು ವ್ಯಕ್ತಪಡಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರ ಅಸಮಾಧಾನಕ್ಕೆ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಲಬುರ್ಗಿ ಮತದಾರ ಸೋಲಿಸಿದ್ದು. 2019ರ ಲೋಕಸಭಾ ಚುನಾವಣೆಯಲ್ಲಿ ಅವರೇ ಬೆಳೆಸಿದ ಉಮೇಶ್ ಜಾಧವ ಅವರು ಭಾರತೀಯ ಜನತಾ ಪಕ್ಷ ಸೇರಿ ಅವರ ವಿರುದ್ದ ಸ್ಪರ್ದಿಸಿದ್ದರು. ಆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೋಲಾಯಿತು.

ಸುಧೀರ್ಘ ಐವತ್ತು ವರ್ಷಗಳ ಕಾಲ ಅಧಿಕಾರ ರಾಜಕಾರಣದಲ್ಲಿ ಅಭಿವೃದ್ಧಿ ಮಂತ್ರವನ್ನೇ ಜಪಿಸಿರುವ ಅವರಿಗೆ ಆ ಸೋಲು ಅತಿ ಹೆಚ್ಚು ಅಸಮಾಧಾನ ತಂದಿತ್ತು. ಈಗ ಅದು ಜ್ವಾಲಾಮುಖಿಯಂತೆ ಸ್ಪೋಟಿಸಿ ಈ ರೀತಿ ಹೊರಬಂದಿದೆ ಅಷ್ಟೆ. ಹಾಗೆ ನೋಡಿದರೆ ಅದು ಅವರ ಮೊದಲ ಸೋಲು. ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ, ಕೇಂದ್ರ ಮಂತ್ರಿಯಾಗಿ ನಿರಂತರ ಅಧಿಕಾರದಲ್ಲಿದ್ದ ಖರ್ಗೆಯವರು ಅಭಿವೃದ್ಧಿ ರಾಜಕಾರಣವನ್ನು ಉಸಿರಾಡಿದವರು.

ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದವರಾದ ಮಲ್ಲಿಕಾರ್ಜುನ ಖರ್ಗೆಯವರು ಬದುಕನ್ನು ಕಟ್ಟಿಕೊಂಡಿದ್ದು ಕಲ್ಬುರ್ಗಿಯಲ್ಲಿ. ವಿದ್ಯಾರ್ಥಿ ದಿನಗಳಿಂದ ವಿವಿಧ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅವರು ಏನಾದರೂ ಸಾಧಿಸಬೇಕೆಂಬ ಛಲವುಳ್ಳವರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾದ ಅವರು ಬುದ್ಧ, ಬಸವಣ್ಣನವರ ವಿಚಾರಧಾರೆ ಗಳನ್ನು ಬದುಕಿನ ದಾರಿದೀಪವೆಂದು ಸ್ವೀಕರಿಸಿದವರು.

ಕಾನೂನು ಪದವೀಧರರಾದ ಅವರು ಆರಂಭದ ದಿನಗಳಲ್ಲಿ ಕಲಬುರ್ಗಿ ಎಂ.ಎಸ್.ಕೆ ಮಿಲ್ ಕಾರ್ಮಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಆರ್‌ಪಿಐ ಪಕ್ಷದಲ್ಲಿ ಕೆಲ ಕಾಲ ಸಕ್ರಿಯರಾಗಿದ್ದ ಖರ್ಗೆಯವರು ಕಾಂಗ್ರೆಸ್ ಪಕ್ಷದ ಮಹಾ ವಿಘಟನೆಯ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಭಾಗವಾದರು. ಅಂದಿನಿಂದ ಇಂದಿನವರೆಗೆ ಖರ್ಗೆಯವರ ಪಕ್ಷ ನಿಷ್ಠೆ ಅಬಾಧಿತವಾಗಿ ಮುಂದುವರೆದಿದೆ.

ಅವರ ಪಕ್ಷ ನಿಷ್ಠೆ, ಸೈದ್ದಾಂತಿಕ ಬದ್ಧತೆ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧದ ರಾಜೀರಹಿತ ಹೋರಾಟ ಪ್ರಶ್ನಾತೀತವಾಗಿದೆ. ೮೩ರ ಹರೆಯದಲ್ಲೂ ಸಂವಿಧಾನ ಉಳಿಸಲು ಬದ್ಧತೆಯೊಂದಿಗೆ ಹೋರಾಡುತ್ತಿದ್ದಾರೆ. ಬೇರೆಯವರ ಹಾಗೆ ಖರ್ಗೆಯವರು ಅವಕಾಶವಾದಿ ರಾಜಕಾರಣ ಮಾಡಿದ್ದರೆ ಎಂದೋ ಮುಖ್ಯಮಂತ್ರಿ, ರಾಷ್ಟ್ರಪತಿಯಂಥ ಪ್ರಮುಖ ಹುದ್ದೆಗಳನ್ನು ಅಲಂಕರಿಸಬಹುದಿತ್ತು. ಆದರೆ ಅವರು ಅಧಿಕಾರಕ್ಕಿಂತ ಸಿದ್ದಾಂತ ಮುಖ್ಯವೆಂದು ಭಾವಿಸಿ ರಾಜಕಾರಣ ಮಾಡಿದವರು.

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸು ಅವರ ನಾಯಕತ್ವದಲ್ಲಿ 1972ರಲ್ಲಿ ಮೊದಲ ಬಾರಿಗೆ ಕಲಬುರ್ಗಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಅಧಿಕಾರ ರಾಜಕಾರಣ ಶುರು ಮಾಡಿದರು. ಆ ಕ್ಷೇತ್ರದಿಂದ 72, 78, 83, 85, 89, 94, 99, 2004ರ ವಿಧಾನಸಭಾ ಚುನಾವಣೆಗಳಲ್ಲಿ ನಿರಂತರ ಎಂಟು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ವಿಧಾನ ಸಭಾ ಕ್ಷೇತ್ರಗಳ ವಿಂಗಡಣೆಯಾದ ನಂತರ ನಡೆದ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ದಾಖಲೆ ಬರೆದರು. 1974ರಿಂದ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಖರ್ಗೆಯವರು ತಮಗೆ ದೊರೆತ ಖಾತೆಗಳಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗೃಹ, ಜಲಸಂಪನ್ಮೂಲದಂತ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡವರು. ನಮ್ಮಲ್ಲಿ ಬಹುತೇಕ ಶಾಸಕರು ಒಂದು ಬಾರಿ ಮಂತ್ರಿಯಾದರೆ ಹಗರಣಗಳ ಸುಳಿಯಲ್ಲಿ ಸಿಲುಕಿ ಮೈತುಂಬ ಕೊಳೆ ಮಾಡಿಕೊಂಡಿರುತ್ತಾರೆ. ಆದರೆ, ಖರ್ಗೆಯವರು ತಮ್ಮ ಸುದೀರ್ಘ ಅಧಿಕಾರ ರಾಜಕಾರಣದಲ್ಲಿ ಒಂದೇ ಒಂದು ಹಗರಣದಲ್ಲಿ ಸಿಲಿಕಿಕೊಳ್ಳಲಿಲ್ಲ. ಅವರ ಒಟ್ಟು ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಅಂಟಿಸಿಕೊಳ್ಳದೆ ಶುದ್ಧ ಹಸ್ತರಾಗಿದ್ದು ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಕೊಟ್ಟ ಕೆಲಸವನ್ನು ವಿವಾದಕ್ಕೆ ಅವಕಾಶ ಇಲ್ಲದಂತೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವ ಖರ್ಗೆಯವರು 2009ರ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಿ ಗೆದ್ದು ಕೇಂದ್ರ ರಾಜಕಾರಣಕ್ಕೆ ಹೋದರು. ಹಾಗೆ ನೋಡಿದರೆ ಅವರು ೨೦೦೮ರ ವಿಧಾನ ಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ 9ನೇ ಬಾರಿಗೆ ಗೆದ್ದು ದಾಖಲೆ ಬರೆದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 80 ಸೀಟುಗಳು ಲಭಿಸಿದ್ದರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.

ಆಗ ಮೊದಲ ಬಾರಿಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅನುಭವಿ ಮಲ್ಲಿಕಾರ್ಜುನ ಖರ್ಗೆಯವರು ವಿರೋಧ ಪಕ್ಷದ ನಾಯಕರಾಗಿದ್ದರು. ಹೈಕಮಾಂಡ್ ಸೂಚನೆಯಂತೆ ಅವರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಕೇಂದ್ರ ರಾಜಕಾರಣಕ್ಕೆ ಹೋದರು. ಪಕ್ಷಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ದವಿರುವ ಖರ್ಗೆಯವರಿಗೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಒದಗಿ ಬಂದಿತ್ತು. ಹೈಕಮಾಂಡ್ ಸೂಚನೆಯಿಲ್ಲದೇ ಅನಗತ್ಯ ಲಾಬಿ ಮಾಡದ ಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಖಾತೆ ನೀಡಿದಾಗಲೂ ಬೇಸರಿಸಿಕೊಳ್ಳಲಿಲ್ಲ. ಕೊಟ್ಟ ಅವಕಾಶವನ್ನು ಸದಾವಕಾಶವನ್ನಾಗಿ ಮಾಡಿಕೊಂಡು ಕಾರ್ಮಿಕ ಖಾತೆಯಲ್ಲಿ ಅದ್ಬುತ ಕೆಲಸ ಮಾಡಿ ಹೈಕಮಾಂಡ್ ಮೆಚ್ಚುಗೆ ಗಳಿಸಿದರು. ಇವರ ಕಾರ್ಯವೈಖರಿ ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ರೈಲ್ವೆ ಖಾತೆಗೆ ಬಡ್ತಿ ನೀಡಿತು. ಕಡಿಮೆ ಅವಧಿಯಲ್ಲಿ ಆ ಖಾತೆಯಲ್ಲೂ ಅವರು ಗಮನ ಸೆಳೆಯುವ ಸಾಧನೆ ಮಾಡಿದರು.

ಮಲ್ಲಿಕಾರ್ಜುನ ಖರ್ಗೆಯವರ ಗಂಭೀರ ಪ್ರಯತ್ನ ಇಲ್ಲದಿದ್ದರೆ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಗುವುದು ಕನಸಿನ ಮಾತಾಗಿತ್ತು. ಯಾಕೆಂದರೆ 1999ರಿಂದ 2004ರವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ವಿಶೇಷ ಸ್ಥಾನಮಾನದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಕರ್ನಾಟಕದ ಉಭಯ ಸದನಗಳಲ್ಲಿ ಪಾಸು ಮಾಡಿದ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಸರ್ವಾನುಮತದ ನಿರ್ಣಯ ಮತ್ತು ಪ್ರಸ್ತಾವನೆಯನ್ನು ಅಂದಿನ ಗೃಹ ಮಂತ್ರಿ ಎಲ್.ಕೆ. ಅಡ್ವಾಣಿಯವರು ತಿರಸ್ಕರಿಸಿದ್ದರು.

ಖರ್ಗೆಯವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಮೇಲೆ ಮಂತ್ರಿಯೂ ಆದರು. ಹಾಗೆ ನೋಡಿದರೆ ಆ ಚುನಾವಣೆಯಲ್ಲಿ ಖರ್ಗೆಯವರು ಗೆದ್ದಿದ್ದು ಕೇವಲ ಹದಿಮೂರು ಸಾವಿರ ಮತಗಳ ಅಂತರದಿಂದ. ಖರ್ಗೆಯವರು ಆ ಚುನಾವಣೆಯಲ್ಲಿ ಗೆಲ್ಲದೆ ಹೋಗಿದ್ದರೆ ಹೈದ್ರಾಬಾದ್ ಕರ್ನಾಟಕದ ಜನ ವಿಶೇಷ ಸ್ಥಾನಮಾನದಿಂದ ಖಾಯಂ ವಂಚಿತರಾಗುತ್ತಿದ್ದರು.

ವಿಶೇಷ ಸ್ಥಾನಮಾನ ನೀಡಬೇಕೆಂದರೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರಬೇಕು. ತಿದ್ದುಪಡಿ ತರಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬೆಂಬಲ ಸಿಗಬೇಕು. ಖರ್ಗೆಯವರು ಅದನ್ನೊಂದು ಸವಾಲಾಗಿ ಸ್ವೀಕರಿಸಿದ್ದರಿಂದ ವಿಶೇಷ ಸ್ಥಾನಮಾನ ಸಿಕ್ಕಿತು. ಅದರಿಂದಾಗಿ ಹೈದ್ರಾಬಾದ್ ಕರ್ನಾಟಕದ ಜನರಿಗೆ ನೌಕರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ದೊರೆಯುವಂತಾಗಿದೆ. ಮೆಡಿಕಲ್ ಇಂಜಿನಿಯರಿಂಗ್ ಸೀಟುಗಳು ಪಡೆಯುವಲ್ಲಿ, ಸರ್ಕಾರದ ನೌಕರಿ ಗಿಟ್ಟಿಸಿಕೊಳ್ಳುವಲ್ಲಿ ಈ ವಿಶೇಷ ಸ್ಥಾನಮಾನ ನೆರವಿಗೆ ಬರುತ್ತಿದೆ. ಹೈದ್ರಾಬಾದ್ ಕರ್ನಾಟದ ಅಭಿವೃದ್ಧಿಗೆ ಇದು ಪೂರಕವಾಗಿದೆ.

ರಾಜಕೀಯ ಬದುಕಿನುದ್ದಕ್ಕೂ ಕೇವಲ ಅಭಿವೃದ್ಧಿ ಮಂತ್ರ ಜಪಿಸಿದ, ಹಿಂದುಳಿದ ಹೈದ್ರಾಬಾದ್ ಕರ್ನಾಟಕದ ಒಳಿತಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟ, ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಹೊಂದದ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಳೆದ ಚುನಾವಣೆಯಲ್ಲಿ ಸೋಲಾದದ್ದು ಕೆಲಸಗಾರನಿಗೆ ಮಾಡಿದ ಅಪಮಾನವಾಗಿದೆ.

ಖರ್ಗೆಯವರನ್ನು ಸೋಲಿಸುವಲ್ಲಿ ಸಂಘಪರಿವಾರದವರ ವಿಶೇಷ ಪ್ರಯತ್ನ ಇತ್ತು. ಸ್ವತಃ ಮೋದಿಯವರೇ ಖರ್ಗೆಯವರನ್ನು ಸೋಲಿಸಲು ವಿಶೇಷ ಆಸಕ್ತಿ ವಹಿಸಿದ್ದರು. ಲೋಕಸಭೆಯಲ್ಲಿ ಸಮರ್ಥ ಪ್ರತಿಪಕ್ಷದ ನಾಯಕರಾಗಿ ಖರ್ಗೆಯವರು ಕಾರ್ಯ ನಿರ್ವಹಿಸಿದ ಪರಿಗೆ ಮೋದಿ ಹೈರಾಣಾಗಿದ್ದರು. ಸುಳ್ಳು ಸಂಕಥನ ಸೃಷ್ಟಿಸಿ, ಅಪಪ್ರಚಾರ ಮಾಡಿ ಕೆಲಸಗಾರ ಖರ್ಗೆಯವರನ್ನು ಸೋಲಿಸಲಾಯಿತು. ಖರ್ಗೆಯವರು ಸೋತಿದ್ದರಿಂದ ಅವರಿಗೇನೂ ನಷ್ಟವಾಗಲಿಲ್ಲ. ಆದರೆ ಕಳೆದುಕೊಂಡವರು ಕಲಬುರ್ಗಿ ಜನ. ಹಾಗೆ ನೋಡಿದರೆ ಖರ್ಗೆಯವರಿಗೆ ಹೆಚ್ಚಿನ ಸ್ಥಾನಮಾನ ದೊರೆತಿದೆ.

ಕಲಬುರ್ಗಿ ಜನ ಕೈ ಬಿಟ್ಟರೂ ಹೈಕಮಾಂಡ್ ಖರ್ಗೆಯವರ ಕೈ ಬಿಡಲಿಲ್ಲ. ಅವರನ್ನು ರಾಜ್ಯಸಾಭಾ ಸದಸ್ಯರನ್ನಾಗಿ ನೇಮಕ ಮಾಡಿ ಪ್ರತಿಪಕ್ಷದ ನಾಯಕರನ್ನಾಗಿ ಮಾಡಿತು. ಅವರ ಕಾರ್ಯ ದಕ್ಷತೆ ಗಮನಿಸಿದ ಹೈಕಮಾಂಡ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಿತು. ಈಗಲೂ ಅವರು ಕಲಬುರ್ಗಿ ಬಗ್ಗೆ, ಹೈದ್ರಾಬಾದ್ ಕರ್ನಾಟಕದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಖರ್ಗೆಯವರು ಸ್ಪರ್ಧೆ ಮಾಡಿಲ್ಲ. ಆದರೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿಯವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ ಎಲ್ಲರೊಂದಿಗೆ ಅವರು ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಬಡವರ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ರಾಧಾಕೃಷ್ಣ ದೊಡ್ಡಮನಿಯವರು ಸಾಮಾಜಿಕ ನ್ಯಾಯದಲ್ಲಿ ಅಚಲ ನಂಬಿಕೆ ಇಟ್ಟುಕೊಂಡವರು.

ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವ ಅವರು ಈ ಚುನಾವಣೆಯಲ್ಲಿ ಗೆದ್ದರೆ ಸಮರ್ಥ ಸಂಸದರಾಗಿ ಹೊರಹೊಮ್ಮವುದರಲ್ಲಿ ಸಂಶಯ ಇಲ್ಲ. ಅವರು ಇಲ್ಲಿಯವರೆಗೆ ನೇಪತ್ಯದಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅಸಂಖ್ಯಾತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಾಳ್ಮೆ, ಪ್ರಬುದ್ಧತೆ, ಎಲ್ಲರನ್ನೂ ಸಮಾನವಾಗಿ ನೋಡುವ ಗುಣ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಿರುವ ರಾಧಾಕೃಷ್ಣ ದೊಡ್ಡಮನಿಯವರು ಈ ಚುನಾವಣೆಯಲ್ಲಿ ಗೆಲ್ಲುವುದು ಗ್ಯಾರಂಟಿ. ಅವರನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಪ್ರೀತಿಸುವ ಬಹುದೊಡ್ಡ ವರ್ಗವೇ ಕಲ್ಬುರ್ಗಿಯಲ್ಲಿದೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನ ಅಲಂಕರಿಸಿರುವ ಮಲ್ಲಿಕಾರ್ಜುನ ಖರ್ಗೆಯವರ ಘನತೆ ಗೌರವಕ್ಕೆ ಕುಂದು ಬರದಂತೆ ಕಾಳಜಿ ವಹಿಸುವುದು ಕಲಬುರ್ಗಿ ಜನರ ಆದ್ಯ ಕರ್ತವ್ಯ ಆಗಿದೆ.

ರಾಧಾಕೃಷ್ಣ ದೊಡ್ಡಮನಿಯವರಿಗೆ ಜನರ ನಾಡಿಮಿಡಿತ ಅರ್ಥವಾಗುತ್ತದೆ. ಅವರ ಬಳಿ ಕೆಲಸಕ್ಕಾಗಿ ಹೋದವರು ಬರಿಗೈಲಿ ಬಂದ ನಿದರ್ಶನ ಇಲ್ಲ. ಎಲ್ಲರೊಂದಿಗೆ ಅಹಂಮಿಕೆ ಇಲ್ಲದೆ ಆತ್ಮೀಯವಾಗಿ ಬೆರೆಯುವ, ಮಿತಭಾಷಿಯಾಗಿರುವ ಆದರೆ ಜನಪರ ಕಾಳಜಿಯ ಅವರು ಈ ಬಾರಿ ಗೆಲ್ಲಲೇಬೇಕು ಗೆಲ್ಲುತ್ತಾರೆ. ಐವತ್ತು ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿರುವ, ಸ್ವ ಸಾಮರ್ಥ್ಯದಿಂದ ಈ ಮಟ್ಟಕ್ಕೆ ಬೆಳೆದ ಮಲ್ಲಿಕಾರ್ಜುನ ಖರ್ಗೆಯವರು ಹೈದ್ರಾಬಾದ್ ಕರ್ನಾಟಕದ ಹೆಮ್ಮೆಯ ನಾಯಕರಾಗಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗೌರವ ಪದವಿ ಸಿಗಬೇಕೆಂದರೆ ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಕಾಲದ ಅಗತ್ಯವಾಗಿದೆ. ಸರಳ ಸಜ್ಜನಿಕೆಯ ರಾಧಾಕೃಷ್ಣ ದೊಡ್ಡಮನಿಯವರು ಶಾಸಕ, ಸಂಸದ ಪದವಿಗಳನ್ನು ಮೀರಿ ವ್ಯಕ್ತಿತ್ವ ರೂಪಿಸಿಕೊಂಡವರು. ಬಡವರ ಬಗೆಗಿನ ಕಾಳಜಿ, ಅಭಿವೃದ್ಧಿ ಬಗೆಗಿನ ತಿಳವಳಿಕೆ ಕಾರಣಕ್ಕೆ ರಾಧಾಕೃಷ್ಣ ದೊಡ್ಡಮನಿಯವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಎಲ್ಲಾ ಅರ್ಹತೆ ಪಡೆದುಕೊಂಡಿದ್ದಾರೆ.

ಈ ಬಾರಿ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರು ರಾಧಾಕೃಷ್ಣ ದೊಡ್ಡಮನಿಯವರನ್ನು ಗೆಲ್ಲಿಸುವ ಸಂಕಲ್ಪ ಮಾಡಿದಂತಿದೆ. ಸೂಕ್ತ ಅಭ್ಯರ್ಥಿ ಮತ್ತು ಖರ್ಗೆಯವರ ಕೊಡುಗೆ ಮತದಾರರಿಗೆ ಮನವರಿಕೆಯಾಗಿದೆ. ಮೋದಿ ಮೋಡಿಯಾಗಲಿ, ಬಿಜೆಪಿಯವರ ಸುಳ್ಳಿನ ಪ್ರಚಾರವನ್ನಾಗಲಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಮತದಾರರು ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಅಭಿವೃದ್ಧಿ ಕಾರ್ಯಗಳು, ರಾಧಾಕೃಷ್ಣ ದೊಡ್ಡಮನಿಯವರ ತೂಕದ ವ್ಯಕ್ತಿತ್ವ, ಒಗ್ಗಟ್ಟಿನ ಹೋರಾಟ ಚುನಾವಣಾ ಗೆಲುವಿಗೆ ಪೂರಕವಾಗಿ ನಿಂತಿವೆ. ಹಾಗೆ ನೋಡಿದರೆ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಅಲೆ ಇದೆ ಹೊರತು ಮೋದಿಯವರ ಸುಳ್ಳುಗಳಿಂದ ಜನ ಬೇಸತ್ತಿದ್ದಾರೆ.

ಕಲಬುರ್ಗಿಗೆ, ಹೈದ್ರಾಬಾದ್ ಕರ್ನಾಟಕಕ್ಕೆ ಮಾತ್ರವಲ್ಲ ಸಮಸ್ತ ಕನ್ನಡಿಗರ ಏಳ್ಗೆಗೆ ನಿರಂತರ ಶ್ರಮಿಸಿದ ಮಲ್ಲಿಕಾರ್ಜುನ ಖರ್ಗೆಯವರು ಸಾವು, ಮಣ್ಣು ಇತ್ಯಾದಿ ಮಾತಾಡುವುದು ಆಳದ ಕಹಿ ಭಾವಗಳನ್ನು ಹೊರ ಹಾಕಿದಂತೆ. ಬದ್ಧತೆಯಿಂದ ಕೆಲಸ ಮಾಡಿದ ಯಾರಿಗಾದರೂ ಈ ಭಾವನೆ ಒಂದು ಕ್ಷಣ ಬಂದು ಹೋಗುವುದು ಸಹಜ. ಆದರೆ ಖರ್ಗೆಯವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವಷ್ಟು, ಕೃತಜ್ಞತೆ ವ್ಯಕ್ತಪಡಿಸುವಷ್ಟು ಕಲಬುರ್ಗಿ ಜನ ಒಳ್ಳೆಯವರಾಗಿದ್ದಾರೆ.

ಯಾರೋ ಕೆಲ ಕುತ್ಸಿತ ಬುದ್ದಿಯವರಿಂದ ಖರ್ಗೆಯವರು ಕಳೆದ ಬಾರಿ ಸೋತಿರಬಹುದು. ಆದರೆ, ಈ ಬಾರಿ ಕಲಬುರ್ಗಿ ಮತದಾರ ಖರ್ಗೆಯವರ ಸಾಧನೆ ಸಿದ್ದಿಗಳನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ ಮತ್ತು ರಾಧಾಕೃಷ್ಣ ದೊಡ್ಡಮನಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬುದು ನಿಶ್ಚಿತ.

ಮಲ್ಲಿಕಾರ್ಜುನ ಖರ್ಗೆಯವರ ಮತ್ತು ಕಲಬುರ್ಗಿ ಜನರ ನಡುವಿನ ಕರಳುಬಳ್ಳಿಯ ಸಂಬಂಧವನ್ನು ಒಬ್ಬ ಮೋದಿ ಒಂದು ಬಿಜೆಪಿ ಕಡಿದು ಹಾಕಲಾರದು. ಅದು ಕಾಲಾತೀತ ಸಂಬಂಧ. ಖರ್ಗೆಯವರು ಈ ನಾಡಿಗಾಗಿ ಮಾಡಿದ ಅಭಿವೃದ್ಧಿ ಕೆಲಸಗಳು, ಕಲಬುರ್ಗಿ ಜನತೆಗಾಗಿ ಶ್ರಮಿಸಿದ ಪರಿ ಸುವರ್ಣ ಅಕ್ಷರದಲ್ಲಿ ಬರೆದು ಇಡುವಂತದ್ದು. ಖರ್ಗೆಯವರು ಕಲ್ಬುರ್ಗಿಯ ಹೆಮ್ಮೆ ಎನ್ನುವುದು ಸಮಸ್ತ ಜನತೆಯ ಮನೆ ಮನಗಳಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ.

ಖರ್ಗೆಯವರನ್ನು ಕಲಬುರ್ಗಿ ಜನತೆ ಸದಾ ಎತ್ತರದ ಸ್ಥಾನದಲ್ಲೇ ನೋಡುತ್ತಾ ಬಂದಿದ್ದಾರೆ. ಅವರು ಜಾತಿ, ಧರ್ಮ, ಮತ, ಪಂಥಗಳಾಚೆ ಗೌರವಿಸಲ್ಪಡುವ ಮಹಾನ್ ನಾಯಕ. ಯುವ ಪೀಳಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹತ್ತಿರದಿಂದ ನೋಡಿಲ್ಲ. ಅವರ ಬರವಣಿಗೆಯಿಂದ ಪ್ರಭಾವಿತರಾಗಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಈ ತಲೆಮಾರಿನ ಯುವಕರಿಗೆ ದೊರೆತಿದೆ. ಅವರು ಮಲ್ಲಿಕಾರ್ಜುನ ಖರ್ಗೆಯವರಲ್ಲಿಯೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಣುತ್ತಿದ್ದಾರೆ.. ಖರ್ಗೆಯವರ ಅಭಿವೃದ್ಧಿ ಕಾರ್ಯಗಳನ್ನು ಕನ್ನಡದ ಜನತೆ ಎಂದಿಗೂ ಮರೆಯುವುದಿಲ್ಲ.

ಬರೆಹ: ಡಾ. ರಾಜಶೇಖರ ಹತಗುಂದಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments