‘ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯತ್ ಸಾಮರ್ಥ್ಯ’ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಕರ್ನಾಟಕ ತನ್ನದಾಗಿಸಿಕೊಡಿದೆ.
ಗೋವಾದಲ್ಲಿ ನಡೆದ 2026ನೇ ಸಾಲಿನ ವಿಶ್ವ ಪವನ ದಿನಾಚರಣೆಯಲ್ಲಿ ಕರ್ನಾಟಕಕ್ಕೆ ಪ್ರತಿಷ್ಠಿತ “ಹೈಯೆಸ್ಟ್ ವಿಂಡ್ ಕ್ಯಾಪಾಸಿಟಿ ಪೈಪ್ಲೈನ್” ಪ್ರಶಸ್ತಿ ಸಂದಿದೆ.
ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಈ ಪ್ರಶಸ್ತಿ ಸ್ವೀಕರಿಸಿದರು. 9 ಗಿಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನ ಹಂತದಲ್ಲಿದೆ.
ನವ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಗೋವಾದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ರಾಮಕೃಷ್ಣ ಧವಳೀಕರ್ ಅವರ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಈ ಪ್ರಶಸ್ತಿಯೊಂದಿಗೆ ಪವನ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನವೀಕರಿಸಬಹುದಾದ ಇಂಧನ ಪರಿವರ್ತನೆಯನ್ನು ಬಲಪಡಿಸುವಲ್ಲಿ ರಾಜ್ಯದ ನಾಯಕತ್ವ ಹಾಗೂ ಬದ್ಧತೆಯನ್ನು ಸಾಬೀತುಪಡಿಸಿದಂತಾಗಿದೆ.
ಇಂಧನ ಸಚಿವ ಜಾರ್ಜ್ ಹರ್ಷ
ಪವನ ವಿದ್ಯುತ್ ವಲಯದಲ್ಲಿ ಕರ್ನಾಟಕದ ಸಾಧನೆಗೆ ಸಂದಿರುವ ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್,”ಕಳೆದ ಬಾರಿಯೂ ಕರ್ನಾಟಕ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಈ ಪ್ರಶಸ್ತಿಯು ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ನಮ್ಮ ಸರ್ಕಾರಕ್ಕೆ ಇರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನವೀಕರಿಸಬಹುದಾದ ಇಂಧನ ವಲಯದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿ ಹೂಡಿಕೆ ಆಕರ್ಷಿಸುವ ಜತೆಗೆ ದೇಶದ ಇಂಧನ ಪರಿವರ್ತನೆ ಮತ್ತು ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೈಜೋಡಿಸಲಿದ್ದೇವೆ,”ಎಂದಿದ್ದಾರೆ.
“ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ಕರ್ನಾಟಕಕ್ಕೆ ದೊರೆತಿರುವ ಈ ಪ್ರಶಸ್ತಿಯ ರಾಜ್ಯದ ಪ್ರಗತಿಪರ ನೀತಿ, ಹೂಡಿಕೆ-ಸ್ನೇಹಿ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಇರುವ ಸಾಂಸ್ಥಿಕ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದರೊಂದಿಗೆ ಈ ವಲಯದಲ್ಲಿನ ಹೂಡಿಕೆಗೆ ಆದ್ಯತೆ ನೀಡಲು ಇಂಧನ ಇಲಾಖೆಯು ಉದ್ಯಮದ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ”
– ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ“ರಾಜ್ಯಕ್ಕೆ ಈ ಪ್ರಶಸ್ತಿ ಸಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕ್ರೆಡಲ್ ಹಾಗೂ ಉದ್ಯಮದ ಪಾಲುದಾರರ ಉತ್ತಮ ಸಹಯೋಗದಿಂದ ಇದು ಸಾಧ್ಯವಾಗಿದೆ.ಈ ವಲಯದಲ್ಲಿ ಹೂಡಿಕೆ ಹಾಗೂ ಯೋಜನೆಯ ಅನುಷ್ಠಾನವನ್ನು ಸುಗಮಗೊಳಿಸಲು ಮತ್ತು ರಾಜ್ಯ ಮತ್ತು ರಾಷ್ಟ್ರಕ್ಕೆ ನವೀಕರಿಸಬಹುದಾದ ಇಂಧನದ ಮೂಲಕ ಸುರಕ್ಷಿತ ಇಂಧನ ಭವಿಷ್ಯ ರೂಪಿಸುವ ಪ್ರಯತ್ನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲು ಬದ್ಧರಾಗಿದ್ದೇವೆ”
– ಕೆ.ಪಿ. ರುದ್ರಪ್ಪಯ್ಯ, ವ್ಯವಸ್ಥಾಪಕ ನಿರ್ದೇಶಕ, ಕ್ರೆಡಲ್


