ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕೆಲವು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದರು.
ಪಕ್ಷದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲರೂ ಬುಧವಾರ ಹಾಸನಕ್ಕೆ ತೆರಳಿ, ಹಾಸನಾಂಬೆಯ ದರ್ಶನ ಪಡೆದರು. ಆದರೆ, ಈ ಶಕ್ತಿ ಪ್ರದರ್ಶನದ ವಿದ್ಯಮಾನದಿಂದ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕುಂದಕೂರು ಮಾತ್ರ ದೂರ ಉಳಿದರು.
ಹಾಸನಾಂಬೆಯ ದರ್ಶನ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, “ಕಾಂಗ್ರೆಸ್‌ನ ಆಮಿಷಗಳಿಗೆ ಒಳಗಾಗಿ ಜೆಡಿಎಸ್ ಬಿಟ್ಟು ಹೋಗುವ ಶಾಸಕರು ಯಾರೂ ಇಲ್ಲ ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಪಡುವ ಪರಿಸ್ಥಿತಿಯಿಲ್ಲ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ರಾಜ್ಯಕ್ಕಾಗಿರುವ ಅನ್ಯಾಯ ಸರಿ ಪಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹಿತಕ್ಕಾಗಿ ಹೊಂದಾಣಿಕೆ ಹೊರತು ಬೇರೆನೂ ಇಲ್ಲ. ಈ ಹೊಂದಾಣಿಕೆ ಅಧಿಕಾರ, ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ” ಎಂದರು.
“ಪಕ್ಷದಲ್ಲಿ ಅಸಮಾಧಾನಗೊಂಡು ಬಿಟ್ಟು ಹೋಗುವವರು ಯಾರೂ ಇಲ್ಲ. ಆದರೂ ಕಾಂಗ್ರೆಸ್‍ನವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಪದೇ ಪದೇ ಕಾಂಗ್ರೆಸ್‍ನವರು ಇಂತಹ ಗೊಂದಲದ ಸುದ್ದಿಯನ್ನು ಹರಡುತ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದರು.
“ಮುಖ್ಯಮಂತ್ರಿ ನಿವಾಸದಲ್ಲಿ ಉಪಹಾರ ಸಭೆ ನಡೆಸಿ ಕೆಲವು ಮಂತ್ರಿಗಳಿಗೆ ಪಕ್ಷಕ್ಕೆ ಬರುವವರನ್ನು ಕರೆ ಕರಲು ಟಾಸ್ಕ್ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿಗಳು ಪದೇ ಪದೇ 45 ಮಂದಿ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ. ಇದನ್ನು ತಡೆಯಲು ಯಾರು ಕಸರತ್ತು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
“ಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸೀಟು ಗಳಿಸಲಿದೆ ಎಂಬುದು ಮುಖ್ಯವಲ್ಲ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೇ ನಮ್ಮ ಮೊದಲ ಗುರಿಯಾಗಿದೆ” ಎಂದು ಹೇಳಿದರು.