Homeಕರ್ನಾಟಕಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಎನ್‌ಐಎ ದಾಳಿ

ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಎನ್‌ಐಎ ದಾಳಿ

ಉದ್ಯಾನ ನಗರಿ ಬೆಂಗಳೂರಿನ ಹಲವೆಡೆ ದೊಡ್ಡ ಮಟ್ಟದಲ್ಲಿ ವಾಸಿಸುತ್ತಿರುವ ಬಾಂಗ್ಲಾ ವಲಸಿಗರ ಪೈಕಿ ಕೆಲವು ಜನ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಹಲವೆಡೆ ದಿಢೀರ್ ‌ದಾಳಿ ನಡೆಸಿ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ನಗರದ 15ಕ್ಕೂ ಹೆಚ್ಚು ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು‌ ನಿನ್ನೆ ರಾತ್ರಿ ದಾಳಿ ಮಾಡಿ ಎಂಟು ಮಂದಿ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದು  ವಿಚಾರಣೆ ನಡೆಸುತ್ತಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ಎನ್ ಐ ಎ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನಲ್ಲಿ ಅಕ್ರಮವಾಗಿ‌ ಬಾಂಗ್ಲಾ ವಲಸಿಗರು ನೆಲೆ ಕಂಡುಕೊಳ್ಳ ತೊಡಗಿದ್ದು ಅವರಿಗೆ  ಬೇಕಾದ ದಾಖಲೆಗಳನ್ನು ಒದಗಿಸಲು ಕೆಲವರು ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.

ಈ ಪ್ರಕರಣದ ಆಧಾರದ ಮೇಲೆ 15 ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಸೋಲದೇವನಹಳ್ಳಿ, ಕೆಆರ್ ಪುರಂ, ಬೆಳ್ಳಂದೂರು ಸೇರಿದಂತೆ 15ಕ್ಕೂ ಅಧಿಕ ಕಡೆ ಎಕಕಾಲದಲ್ಲಿ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಾಂಗ್ಲಾ ದೇಶದಿಂದ ನೂರಾರು ಮಂದಿಯನ್ನು ಭಾರತಕ್ಕೆ ಅಕ್ರಮವಾಗಿ ಕರೆ ತರುವುದು, ಇಲ್ಲಿ ಅವರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವುದು ಇವರ ಮೇಲಿನ ಪ್ರಧಾನ ಆರೋಪವಾಗಿದೆ. ಉದ್ಯೋಗದ ಆಮಿಷ ಒಡ್ಡಿ ಅವರನ್ನು ಇಲ್ಲಿಗೆ ಕರೆತಂದು ಬಳಿಕ ಅವರಿಗೆ ಉಗ್ರ ತರಬೇತಿ ನೀಡಿ ದುಷ್ಕೃತ್ಯಗಳಿಗೆ ಬಳಸುವ ವಿದ್ಯಮಾನಗಳು ನಡೆಯುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.

ನಾನಾ ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಕಾಲ ಕಾಲಕ್ಕೆ ವರದಿಗಳು ಬರುತ್ತಲೇ ಇವೆ. ಆದರೆ, ರಾಜಕಾರಣಿಗಳು ಕೂಡಾ ಇವರನ್ನು ಮತ ಬ್ಯಾಂಕ್‌ ಆಗಿ ಬಳಸುತ್ತಿರುವುದರಿಂದ ಅದರ ಬಗ್ಗೆ ಯಾರೂ ಹೆಚ್ಚಿನ ಗಮನ ನೀಡುತ್ತಿಲ್ಲ. ಅವರಲ್ಲಿ ಕೆಲವರು ಅಪಾಯಕಾರಿ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಮಾಹಿತಿ ಇದೆ.

ಕೆಲವರು ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾದರೆ ಇನ್ನು ಕೆಲವರು ಕೊಲೆ, ಉಗ್ರ ಕೃತ್ಯಗಳಲ್ಲೂ ಭಾಗಿಯಾಗುತ್ತಿದ್ದಾರೆ. ರಾಮನಗರ ಮತ್ತಿತರ ಪ್ರದೇಶಗಳಲ್ಲಿ ಅವರು ತಮ್ಮದೇ ಆದ ಕಾಲೊನಿಗಳನ್ನು ಸೃಷ್ಟಿಸಿಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು.

ಎಂಟು ರಾಜ್ಯಗಳಲ್ಲಿ ದಾಳಿ

ಮಾನವ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಕರ್ನಾಟಕ, ತಮಿಳುನಾಡು, ತ್ರಿಪುರಾ, ಪಶ್ಚಿಮ ಬಂಗಾಳ, ತೆಲಂಗಾಣ, ಅಸ್ಸಾಂ, ಹರಿಯಾಣ, ರಾಜಸ್ಥಾನ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರೋಹಿಂಗ್ಯಾ ಮುಸ್ಲಿಂ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಬಂಧಿತನನ್ನು ಜಾಫರ್ ಅಲಂ ಎಂದು ಗುರುತಿಸಲಾಗಿದ್ದು, ಜಮ್ಮುವಿನ ಬತಿಂಡಿ ಪ್ರದೇಶದ ತಾತ್ಕಾಲಿಕ ನಿವಾಸದಿಂದ 2 ಗಂಟೆ ಸುಮಾರಿಗೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments