ಕಳೆದ ಕೆಲವು ದಿನಗಳಿಂದ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಹಿಂದಿರುಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದು, ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದಿಢೀರ್ ಆಗಿ ಶೆಟ್ಟರ್ ಅವರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಜೊತೆಯಲ್ಲಿ ಶೆಟ್ಟರ್ ಅವರು ದೆಹಲಿಗೆ ಭೇಟಿ ನೀಡಿರುವುದು ಈ ಅಚ್ಚರಿಗೆ ಕಾರಣವಾಗಿದೆ.
ಈ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ದೆಹಲಿಯಲ್ಲಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅವರು ಗುರುವಾರ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರವಷ್ಟೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಯಾವ ಮಾಹಿತಿಯನ್ನು ನೀಡದೆ ರಹಸ್ಯವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಜಗದೀಶ್ ಶೆಟ್ಟರ್ ಅವರು ಕೂಡ ಬುಧವಾರ ದೆಹಲಿಗೆ ತೆರಳಿದ್ದರು.
ರಾಜ್ಯ ರಾಜಕಾರಣದಲ್ಲಿ ಜಗದೀಶ್ ಶೆಟ್ಟರ್ ಅವರ ನಡೆ ಮತ್ತೆ ಸಂಚಲನ ಸೃಷ್ಟಿಸುತ್ತಾ? ಅಮಿತ್ ಶಾ ಅವರ ಮನವೊಲಿಕೆ ಯಶಸ್ಸು ಆಗುತ್ತಾ? ಬಿಜೆಪಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾರಾ? ಶೆಟ್ಟರ್ ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ಯಾವುದು? ಅಥವಾ ರಾಜ್ಯಪಾಲರಾಗಿ ನೇಮಕ ಮಾಡ್ತಾರಾ? ಎಂಬ ಪ್ರಶ್ನೆಗಳಿಗೆ ಸಂಜೆ ತೆರೆಬೀಳುವ ಸಾಧ್ಯತೆ ಇದೆ. ಆದರೆ ಈವರೆಗೂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರುಳುವ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಹತಾಶಗೊಂಡಿರುವ ಬಿಜೆಪಿಯ ಕೆಲವು ನಾಯಕರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದಾರೆ” ಎಂದಿದ್ದಾರೆ.