2006ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಮೊದಲಿನಿಂದಲೂ ಇದ್ದ ಡಿಫೈನ್ಡ್ ಪಿಂಚಣಿ ಯೋಜನೆಯನ್ನು ಬದಲಾವಣೆ ಮಾಡಿ 2006ರ ಬಳಿಕ ನೇಮಕವಾದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನನ್ನು ವಿರೋಧಿಸಿ ಒಂದು ದಶಕಗಳಿಂದ ರಾಜ್ಯ ಸರ್ಕಾರಿ ನೌಕರರು ಹೋರಾಟ ನಡೆಸಿ ಮತ್ತೆ ಹಿಂದಿನ ಯೋಜನೆ ವ್ಯಾಪ್ತಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದರು. ಸದ್ಯ ಸರ್ಕಾರ ಒಂದು ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ.
ಈ ಬಗ್ಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ನೌಕರರು ಇಚ್ಛೆಪಟ್ಟಲ್ಲಿ ಮಾತ್ರ ಒಮ್ಮೆ ಬದಲಾವಣೆಗೆ ಅವಕಾಶ ನೀಡಿದೆ. ಈ ಕುರಿತು ಅರ್ಜಿ ನಮೂನೆಯನ್ನು ಜೂನ್ 30ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ” 2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ. ಎಲ್ಲ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ವಿರೋಧ ವ್ಯಕ್ತ
“ಪ್ರತಿಭಟನೆ ಮಾಡುತ್ತಿದ್ದವರು ಅಷ್ಟೂ ಎನ್ಪಿಎಸ್ ನೌಕರರು. ದಯಮಾಡಿ ಎಲ್ಲ ಎನ್ಪಿಎಸ್ ನೌಕರರನ್ನು ಒಪಿಎಸ್ಗೆ ಒಳಪಡಿಸಿ, ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಹಾಗೂ ಅವರ ಕುಟುಂಬದ ಬದುಕಿಗೆ ಭದ್ರತೆ ಒದಗಿಸಿ ನ್ಯಾಯ ನೀಡಬೇಕು” ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲೇ ಆಗ್ರಹಿಸಿದ್ದಾರೆ.
“ಇದು ನ್ಯಾಯಾಲಯದ ಆದೇಶ ಅದರ ಪ್ರಕಾರ ಹಳೆಯ ಪಿಂಚಣಿ ಯೋಜನೆ ಕೊಟ್ಟಿದ್ದೀರಿ. 2006ರ ನಂತರ ನೇಮಕವಾದ ಉಳಿದ ಎಲ್ಲ ನೌಕರರಿಗೂ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದೀರಿ. ಅದನ್ನು ಈಡೇರಿಸಿ” ಎಂದು ಕೋರಿದ್ದಾರೆ.