ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆಬ್ರುವರಿ 2ರಂದು ಸಹಾಯ ಕೇಳಲು ಹೋಗಿದ್ದ ವೇಳೆ ಯಡಿಯೂರಪ್ಪ ಅವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಪೋಕ್ಸೋ ಪ್ರಕರಣದಲ್ಲಿ ದಾಖಲಾದರೆ, ಆರೋಪಿ ಎಷ್ಟೇ ಪ್ರಭಾವಿ ಆಗಿದ್ದರೂ ಕೂಡಲೇ ಬಂಧಿಸಬೇಕು. ನಂತರ ತನಿಖೆ ನಡೆಸಬೇಕೆಂದು ಕಾನೂನಿನಲ್ಲಿ ಹೇಳಿರುವುದಾಗಿ ತಜ್ಞರು ಹೇಳುತ್ತಾರೆ.
ಸಹಾಯ ಮಾಡಿದ್ದೇ ತಪ್ಪಾಯಿತು: ಬಿಎಸ್‌ವೈ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿ ಎಸ್ ಯಡಿಯೂರಪ್ಪ, “ತಾಯಿ ಮಗಳು ತೊಂದರೆಯಲ್ಲಿದ್ದೇವೆ ಎಂದು ಹೇಳುತ್ತಾ ಕಣ್ಣೀರು ಹಾಕಿಕೊಂಡು ಬಂದಿದ್ದರು. ಅವರಿಗೆ ಸಹಾಯ ಮಾಡಿದೀನಿ. ಆದರೆ, ಈಗ ಈ ರೀತಿ ದೂರು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನನ್ನ ಮೇಲೆ ಯಾರೋ ಒಬ್ಬ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಯಾರೋ ತಾಯಿ ಮಗಳು ಒಂದು ತಿಂಗಳ ಹಿಂದೆ ನನ್ನ ಹತ್ತಿರ ಬಂದಿದ್ದರು. ಅವರು ಅವತ್ತು ನನಗೆ ಅನ್ಯಾಯ ಆಗಿದೆ ಅಂತ ಹೇಳಿದ್ದರು. ಹಲವೊಮ್ಮೆ ಬಂದು ಮನೆ ಬಳಿ ಕಾಯುತ್ತಿದ್ದರು. ಒಮ್ಮೆ ಕಣ್ಣೀರು ಹಾಕುತ್ತಿದ್ದುದನ್ನು ನೋಡಿ, ಮನೆಯೊಳಗೆ ಕರೆದೊಯ್ದೆ. ಏನು ಸಮಸ್ಯೆ ಎಂದು ಆಲಿಸಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಫೋನ್ ಮಾಡಿ ಇವರ ಸಮಸ್ಯೆ ಬಗೆಹರಿಸಲು ಹೇಳಿದ್ದೆ. ಅಲ್ಲೇ, ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದ್ದರು” ಎಂದು ಹೇಳಿದರು.