ಗದಗ: ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಕಾಂಗ್ರೆಸ್ ಮುಖಂಡ ಹಾಗೂ ವೈದ್ಯ ಶಶಿಧರ್ ಹಟ್ಟಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟ ಡೆತ್ ನೋಟ್‌ನಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಹೆಸರಿದೆ.
ತನ್ನ ಆತ್ಮಹತ್ಯೆಗೆ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಕಾರಣ ಎಂದು ಶಶಿಧರ ಹಟ್ಟಿ ಬರೆದಿಟ್ಟಿದ್ದಾರೆ.
ಶಶಿಧರ ಹಟ್ಟಿ, ಶರಣಗೌಡ ಪಾಟೀಲ್ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ಭಾಗಿದಾರರು. ಆದರೆ, ಶಶಿಧರ ಹಟ್ಟಿ ಅವರು ಎಲ್ಲಾ ಲೆಕ್ಕವನ್ನು ಸರಿಯಾಗಿ ಕೊಟ್ಟರೂ ಪದೇಪದೆ ಶರಣಗೌಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ತನ್ನ ಆತ್ಮಹತ್ಯೆಗೆ ಕಾರಣವಾಗಿರುವ ಶರಣ ಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್‌ರಿಗೆ ಈ ವಿಷಯ ತಿಳಿಸಿ ಎಂದು ಮನವಿ ಮಾಡಲಾಗಿದೆ. ನಿನ್ನೆ ರಾತ್ರಿ ಆತ್ಮಹತ್ಯೆ ಘಟನೆ ನಡೆದಿದೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.