ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಎಚ್ ಡಿ ಕುಮಾರಸ್ವಾಮಿ ಮತ್ತು ನನಗೆ (ದೇವೇಗೌಡ) ಹಾಗೂ ನಿಖಿಲ್ ಕುಮಾರಸ್ವಾಮಿಗೆ ಒತ್ತಾಯವಿದೆ. ಆದರೆ, ನಾನು ಸ್ಪರ್ಧಿಸಲ್ಲ ಎಂದು ತಿಳಿಸಿದ್ದೇನೆ. ಹಾಗೇ ಈಗಾಗಲೇ ನಿಖಿಲ್ ಸಹ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎಂಬುದನ್ನು ಪರೋಕ್ಷವಾಗಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತ ಎಂಬರ್ಥದಲ್ಲಿ ಮಾತನಾಡಿದರು.
“ತಮ್ಮ ಅಭ್ಯರ್ಥಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಅಲ್ಲದೇ ಯಾರು ಅಭ್ಯರ್ಥಿಯಾದರೆ ಹೇಗೆ ಎನ್ನುವ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರು ಇವತ್ತು ಸಭೆಯಲ್ಲಿ ಇರಲಿಲ್ಲ. ಅಂತಿಮವಾಗಿ ಲೋಕಸಭೆ ಬಗ್ಗೆ ನಾವು ಒಂದು ಅಭಿಪ್ರಾಯ ತಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
“ನಾವು ಮೂವರಲ್ಲಿ (ದೇವೇಗೌಡ, ನಿಖಿಲ್, ಕುಮಾರಸ್ವಾಮಿ) ಒಬ್ಬರು ಮಂಡ್ಯದಿಂದ ಸ್ಪರ್ಧಿಸಿ ಎಂದು ಹೇಳುತ್ತಿದ್ದಾರೆ. ಅಭ್ಯರ್ಥಿ ಕುರಿತು ಅಭಿಪ್ರಾಯ ಸಂಗ್ರಹಿಸಿ, ನಮ್ಮ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಅಂತಿಮವಾಗಿ ನರೇಂದ್ರ ಮೋದಿ, ಜೆಪಿ ನಡ್ಡಾ, ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ” ಎಂದರು.
“ಮಂಡ್ಯ ಕ್ಷೇತ್ರದ ಎಂಟು ಕ್ಷೇತ್ರದಲ್ಲೂಓಡಾಟ ನಡೆಸುತ್ತೇವೆ. ಇಲ್ಲಿ ಜೆಡಿಎಸ್- ಬಿಜೆಪಿ ಪ್ರಶ್ನೆ ಅಲ್ಲ. ಎನ್ಡಿಎದಲ್ಲಿ ನಾವು ಇದ್ದೇವೆ. ಅಂತಿಮವಾಗಿ ಮೋದಿ,ನಡ್ಡಾ ಕುಮಾರಸ್ವಾಮಿ,ಯಡಿಯೂರಪ್ಪ ಎಲ್ಲರೂ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು.
“ರೇವಣ್ಣ ಲೋಕಸಭೆಗೆ ಹೋಗುತ್ತೇನೆ ಎಂದು ಹೇಳಿಲ್ಲ. ಇದು ಮಾಧ್ಯಮದವರ ಸೃಷ್ಟಿ. ನಾವು ಮೂರು ಜನ ಒಗ್ಗಟ್ಟಾಗಿ ಹೋಗುತ್ತೇವೆ. ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ನಂತರ ನಾವು ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ” ಎಂದರು.