ಮನುವಾದವು ಸಹಸ್ರಾರು ವರ್ಷಗಳಿಂದ ಮಾನವರನ್ನು ಒಡೆದು ಆಳುತ್ತಲೇ ಇದೆ. ಅದಕ್ಕಾಗಿ ಮನು ತನ್ನದೇ ವೇದಧರ್ಮವನ್ನು ಪ್ರತಿಪಾದಿಸುತ್ತ ನಾಲ್ಕು ವರ್ಣ, ಜಾತಿ, ಉಪಜಾತಿಗಳಲ್ಲಿ ಸಮಾಜವನ್ನು ಛಿದ್ರಗೊಳಿಸುತ್ತ, ಶ್ರೇಣೀಕೃತ ಸಮಾಜದ ರೂಪುರೇಷೆಗಳನ್ನು ಭದ್ರಗೊಳಿಸುತ್ತ, ಬ್ರಾಹ್ಮಣನನ್ನು ಅತ್ಯುನ್ನತ ಮಟ್ಟದಲ್ಲಿ ಇಟ್ಟಿದ್ದಾನೆ.
ಬ್ರಾಹ್ಮಣ ವರ್ಣದ ನಂತರ ಕ್ಷೇತ್ರಪಾಲಕನಾದ ಕ್ಷತ್ರಿಯ ಬರುತ್ತಾನೆ. ತದನಂತರ ವ್ಯವಹಾರ ಮಾಡುವ ವೈಶ್ಯ ಬರುತ್ತಾನೆ. ಈ ಮೂವರೂ ಸವರ್ಣೀಯರಾದರೂ ಇವರಲ್ಲಿ ಬ್ರಾಹ್ಮಣನೇ ಶ್ರೇಷ್ಠ!
ಇನ್ನು ವಸ್ತುಗಳ ಉತ್ಪಾದಕರಾದ ರೈತರು, ಕಮ್ಮಾರರು, ಕುಂಬಾರರು, ಸಮಗಾರರು, ಮಾದರು, ಮೇದಾರರು, ಬಡಿಗರು, ನೇಕಾರರು ಮುಂತಾದವರು ಹಾಗೂ ಸೇವೆಗಳ ಉತ್ಪಾದಕರಾದ ಮಡಿವಾಳರು, ಹಡಪದರು, ಅಂಬಿಗರು, ಸಂಬೋಳಿಯವರು ಮುಂತಾದವರು ಎಲ್ಲಿ ಹೋಗಬೇಕು?
ಇವರೆಲ್ಲ ಶೂದ್ರ ಮತ್ತು ಅತಿಶೂದ್ರ ವರ್ಣಗಳಲ್ಲಿ ಬರುವರು. ವೈದಿಕ ವ್ಯವಸ್ಥೆಯಲ್ಲಿ ಇವರು ದಿಕ್ಕಿಲ್ಲದವರು. ಇವರನ್ನು ಕೂಡ ಅಸಂಖ್ಯ ಜಾತಿ ಉಪಜಾತಿಗಳಲ್ಲಿ ವಿಂಗಡಿಸಲಾಗಿದೆ. ಈ ವಿಂಗಡಣೆ ಇಷ್ಟಕ್ಕೇ ನಿಲ್ಲದೆ ಆಹಾರದಲ್ಲಿ ಕೂಡ ಮನು ತನ್ನ ಕೈಚಳಕ ತೋರಿಸಿದ್ದಾನೆ.
ಫೇಸ್ಬುಕ್ಕಲ್ಲಿ ನಮ್ಮ ಅನೇಕ ಯುವಕ ಯುವತಿಯರು ಮೀನುಪಳದಿ, ಮೀನು ಫ್ರೈ, ಕಬಾಬ್, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಮುಂತಾದವುಗಳ ಪಟಗಳನ್ನು ಪ್ರಕಟಿಸುವ ಮತ್ತು ಮತ್ತು ಆ ಆಹಾರ ಪದಾರ್ಥಗಳನ್ನು ವರ್ಣಿಸುವ ಉದ್ದೇಶವಾದರೂ ಏನು ಎಂಬುದನ್ನು ಅರ್ಥೈಸಿಕೊಳ್ಳುವುದು ಬಹಳ ಅವಶ್ಯವಿದೆ. ಅದರ ಹಿಂದೆ ಪ್ರತಿಭಟನೆಯ ಮನಸ್ಸುಗಳು “ಮಾಂಸಾಹಾರ ಕನಿಷ್ಠವಲ್ಲ” ಎಂಬುದನ್ನು ಪ್ರತಿಪಾದಿಸುತ್ತಿರುತ್ತವೆ.
ಈ ಸೂಚ್ಯವಾದ ಪ್ರತಿಭಟನೆ ಬಹುಜನರ ಆಹಾರಪದ್ಧತಿಯನ್ನು ಎತ್ತಿ ಹಿಡಿಯುವುದರ ಮೂಲಕ ಅವರ ಅಸ್ಮಿತೆಯನ್ನು ಗೌರವಿಸುವ ಸಾಮಾಜಿಕ ಸೃಜನಶೀಲತೆಯಾಗಿದೆ.
ಮಾಂಸಾಹಾರಿಗಳು ಅಂಜದೆ ಅಳುಕದೆ, ತಮ್ಮ ಮಾಂಸಾಹಾರದ ವೈಭವ ಮೆರೆಯಬೇಕು ಎಂಬ ಸ್ವಾಭಿಮಾನದ ಕರೆ ಇದರಲ್ಲಿ ಅಡಕವಾಗಿದೆ. ಆ ಮೂಲಕ ಆಹಾರ ರಾಜಕೀಯಕ್ಕೆ ಸವಾಲೊಡ್ಡಲಾಗಿದೆ.
ಆಹಾರ ಸಂಸ್ಕೃತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಿದ್ದರಾಮಯ್ಯನವರೇ ನೀವೇಕೆ ಮಾಂಸಾಹಾರಿ? ಸುಧಾ ಮೂರ್ತಿಯವರೇ ನೀವೇಕೆ ಶಾಕಾಹಾರಿ? ಎಂದು ಕೇಳುವಂತಿಲ್ಲ. ಅದು ಅವರ ಹಕ್ಕು.
ಯಾವುದೇ ಆಹಾರ ಸಂಸ್ಕೃತಿಯ ಶ್ರೇಷ್ಠತೆಯ ಕುರಿತು ಮಾತನಾಡುವ ಮೂಲಕ ಇನ್ನೊಬ್ಬರ ಆಹಾರ ಸಂಸ್ಕೃತಿಯನ್ನು ಹೀಯಾಳಿಸುವುದು ಫ್ಯಾಸಿಸ್ಟ್ ಮನಸ್ಸಿನ ಒಂದು ಪ್ರಕಾರವಾಗಿದೆ.
ಮೊನ್ನೆ ಸುಧಾ ಮೂರ್ತಿಯವರು ತಮ್ಮ ಶಾಕಾಹಾರದ ಬಗ್ಗೆ ಸಹಜವಾಗೇ ಮಾತನಾಡಿದರು. ಚಮಚಾಗಳಲ್ಲೂ ಶಾಕಾಹಾರಿ ಮತ್ತು ಮಾಂಸಾಹಾರಿ ಚಮಚಾಗಳನ್ನು ಗುರುತಿಸಿದರು. ಅಂದರೆ ಮಾಂಸಾಹಾರಿಗಳು ಬಳಸುವ ಚಮಚಾ ತಾವು ಬಳಸುವುದಿಲ್ಲ. ಹೋಟೆಲುಗಳಲ್ಲಿ ಅಥವಾ ಬೇರೆ ಮನೆಗಳಲ್ಲಿ ಮಾಂಸಾಹಾರಿಗಳು ಕೂಡ ಬಳಕೆ ಮಾಡಿರಬಹುದಾದ ಚಮಚಾಗಳನ್ನು ಕೂಡ ತಾವು ಬಳಸುವುದಿಲ್ಲ ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.
ಈ ಮಾತನ್ನು ಹೇಳುವಾಗ ಅವರಿಗೆ ಮಾಂಸಾಹಾರಿಗಳ ಬಗ್ಗೆ ಯಾವುದೇ ದ್ವೇಷವಿರಲಿಲ್ಲ. ಆದರೆ ಅವರು ತಮಗರಿಯದಂತೆಯೆ ಶಾಕಾಹಾರದ ಪಾರಮ್ಯ ಮೆರೆದಿದ್ದರು. “ತಮ್ಮ ಆಹಾರದ ಬಗೆಗಿನ ತಿರಸ್ಕಾರ ಇವರ ಹೇಳಿಕೆಯಲ್ಲಿ ಗುಪ್ತವಾಗಿದೆ” ಎಂಬ ಭಾವ ಮಾಂಸಾಹಾರಿಗಳು ತಾಳಿದರು.
ಸುಧಾ ಮೂರ್ತಿ ಅವರ ಹೇಳಿಕೆ ನಿಮಿತ್ತ ಮಾತ್ರ. ಆದರೆ ಅದರ ದುಷ್ಪರಿಣಾಮ ಅಪರಿಮಿತ.
ಫುಡ್ ಫ್ಯಾಸಿಸ಼ಂ ರಹಸ್ಯ ಭೇದಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಬ್ರಾಹ್ಮಣಃ ಸಂಭವೇನೈವ ದೇವಾನಾಮಪಿ ದೈವತಮ್|
ಪ್ರಮಾಣಂ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕಾರಣಂ||
(ಬ್ರಾಹ್ಮಣನು ಜನ್ಮದಿಂದಲೇ ದೇವತೆಗಳಿಗೂ ದೇವತೆಯಾಗಿರುತ್ತಾನೆ. ಈ ಲೋಕದ ಧರ್ಮ ಸಾಧನೆಗೆ ಪ್ರತ್ಯಕ್ಷ ಪ್ರಮಾಣವೆಂದರೆ ಬ್ರಾಹ್ಮಣನೆ. ಇದಕ್ಕೆ ವೇದವೇ ಸಾಕ್ಷಿಯು.)
-ಮನುಸ್ಮೃತಿ 11 – 84
ಬ್ರಾಹ್ಮಣರು ದೇವರಿಗೂ ದೇವರಾಗಿರುವಂಥವರು ಎಂದು ದುರಹಂಕಾರಿ ಮನು ಹೇಳುವಾಗ ದೇಶದ ನಿರಕ್ಷರಿ ಶೂದ್ರರ ಮತ್ತು ದಲಿತರ ಪಾಡೇನಾಗಿರಬಹುದು? ವೈದಿಕರ ಈ ಸುಳ್ಳನ್ನು ರಾಜರೂ ಒಪ್ಪಿದರಲ್ಲಾ!
“ಧರ್ಮಸ್ಯ ಬ್ರಾಹ್ಮಣೋ ಮೂಲಮ್ |(ಬ್ರಾಹ್ಮಣನೇ ಧರ್ಮದ ಮೂಲ) ಎಂದು ಮನು ತನ್ನ ಮನುಸ್ಮೃತಿಯ 11ನೇ ಅಧ್ಯಾಯದ 83ನೇ ಶ್ಲೋಕದಲ್ಲಿ ಹೇಳಿದ್ದಾನೆ. ಆದ್ದರಿಂದ ಇಲ್ಲಿ ಧರ್ಮ ಸಾಧನೆಗೆ ಬ್ರಾಹ್ಮಣನೇ ಪ್ರತ್ಯಕ್ಷ ಪ್ರಮಾಣವೆಂದು ಒತ್ತಿಹೇಳುತ್ತಾನೆ. ಅದಕ್ಕೆ ವೇದವೇ ಸಾಕ್ಷಿ ಎಂದು ಪ್ರತಿಪಾದಿಸುತ್ತಾನೆ.
ಇನ್ನು ಮುಂದೆ ಮನು ಮಾಂಸಾಹಾರದ ಕುರಿತು ಏನು ಹೇಳಿದ್ದಾನೆ ಎಂಬುದನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ.
ಪ್ರಾಣಸ್ಯಾನ್ನಮಿದಂ ಸರ್ವಂ ಪ್ರಜಾಪ್ರತಿರಕಲ್ಪಯತ್|
ಸ್ಥಾವರಂ ಜಂಗಮಂ ಚೈವ ಸರ್ವಂ ಪ್ರಾಣಸ್ಯ ಭೋಜನಂ||
(ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ-ಜಂತುಗಳನ್ನು, ಚರಾಚರವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮನು ಸೃಷ್ಟಿಸಿದ್ದಾನೆ.)
-ಮನುಸ್ಮೃತಿ 5 – 28
ಮನು ಈ ಶ್ಲೋಕದಲ್ಲಿ ಆಹಾರ ಸರಪಳಿಯ ಕುರಿತು ಸರಿಯಾಗಿಯೆ ತಿಳಿಸಿದ್ದಾನೆ. ಹುಲ್ಲನ್ನು ಹುಲ್ಲೆ ತಿನ್ನುತ್ತದೆ. ಹುಲ್ಲೆಯನ್ನು ಹುಲಿ ತಿನ್ನುತ್ತದೆ. ಹುಲಿ ಸತ್ತ ಮೇಲೆ ಹುಳುಗಳು ಆ ದೇಹವನ್ನು ತಿಂದು ಮುಗಿಸುತ್ತವೆ.
ಒಂದು ಇನ್ನೊಂದಕ್ಕೆ ಆಹಾರವಾಗುವ ಈ ಕ್ರಮವನ್ನು ಅಲ್ಲಮಪ್ರಭುಗಳೂ ಗುರುತಿಸಿದ್ದಾರೆ. ಬಸವಣ್ಣನವರೂ ಗುರುತಿಸಿದ್ದಾರೆ.
ಜೀವಕ್ಕೆ ಜೀವವೇ ಆಧಾರ. ಜೀವ ತಪ್ಪಿಸಿ ಜೀವಿಸಬಾರದು. “ಪೃಥ್ವೀಬೀಜಂ ತಥಾ ಮಾಂಸಂ ಅಪ್ ದ್ರವ್ಯಂ ಸುರಾಮಯಂ. ಆತ್ಮಾ ಜೀವ ಸಮಾಯುಕ್ತಂ
ಜೀವೋ ಜೀವೇನ ಭಕ್ಷಯೇತ್” ಎಂದುದಾಗಿ ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನ್ನು ಕಾಣೆ. ಲಿಂಗಾರ್ಪಿತವಾದುದೆಲ್ಲ ಶುದ್ಧ, ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.
-ಅಲ್ಲಮಪ್ರಭುಗಳು
ಜೀವವು ಜೀವವನ್ನು ತಿಂದು ಬದುಕುತ್ತದೆ. ಜೀವ ತಪ್ಪಿಸಿ ಬದುಕಲಿಕ್ಕಾಗುವುದಿಲ್ಲ ಎಂಬ ಸತ್ಯವನ್ನು ಅಲ್ಲಮಪ್ರಭುಗಳು ಪ್ರತಿಪಾದಿಸಿದ್ದಾರೆ.
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿಧಿಯಯ್ಯಾ? ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ. ಅದುಕಾರಣ, ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.
-ಬಸವಣ್ಣ
–
ಚರಾಚರವೆಲ್ಲ ಜೀವಜಾಲವೆಂಬ ಆಹಾರ ಸರಪಳಿಯಲ್ಲಿದೆ ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.
ಮನು, ತನ್ನ ಮನುಸ್ಮೃತಿಯಲ್ಲಿ ಆಹಾರದ ಕುರಿತು ವೈಜ್ಞಾನಿಕವಾಗಿ ಮಾತನಾಡಿ ಆಕರ್ಷಿಸುತ್ತಾನೆ. ನಂತರ ಮೋಸದಾಟ ಆರಂಭಿಸುತ್ತಾನೆ.
ಯಜ್ಞಾಯ ಜಗ್ಧಿರ್ಮಾಂಸಸ್ಯೇತ್ಯೇಷ ದೈವೋ ವಿಧಿಃ ಸ್ಮೃತಃ|
ಅತೋsನ್ಯಥಾ ಪ್ರವೃತ್ತಿಸ್ತು ರಾಕ್ಷಸೋ ವಿಧಿರುಚ್ಯತೇ||
(ಯಜ್ಞಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸಭಕ್ಷಣವು “ದೈವಿಕರೀತಿ” ಎಂದು ಹೇಳಲ್ಪಟ್ಟಿದೆ. ಇದಕ್ಕೆ ವಿರುದ್ಧವಾಗಿ ಅನ್ಯಸಂದರ್ಭಗಳಲ್ಲಿ ಮಾಡುವ ಅಕಾರಣ ಪಶುವಧೆ ಮತ್ತು ಮಾಂಸಭಕ್ಷಣವು “ರಾಕ್ಷಸ ರೀತಿ” ಎಂದು ಹೇಳಲ್ಪಟ್ಟಿದೆ.)
-ಮನುಸ್ಮೃತಿ 5 – 31
ಯಜ್ಞಕ್ಕಾಗಿ ಮಾಡುವ ಪ್ರಾಣಿವಧೆಯ ಮಾಂಸ ಸೇವನೆ ದೈವಿಕ ರೀತಿಯದು. ಯಜ್ಞವಲ್ಲದೆ ಮಾಡುವ ಪ್ರಾಣಿವಧೆಯ ಮಾಂಸ ಸೇವನೆ ರಾಕ್ಷಸ ರೀತಿಯದು ಎಂದು ಘೋಷಿಸುತ್ತಾನೆ.
ಯಜ್ಞ ಮಾಡುವ ಹಕ್ಕು ಬ್ರಾಹ್ಮಣನಿಗೆ ಮಾತ್ರ ಇದೆ. ಉಳಿದ ಸವರ್ಣೀಯರು ಯಜ್ಞ ಮಾಡಿಸುವ ಕರ್ತವ್ಯ ಹೊಂದಿರುತ್ತಾರೆ. ಇವರೆಲ್ಲ ಯಜ್ಞದ ಬಲಿಪಶುವಿನ ದೈವಿಕ ಮಾಂಸವನ್ನು ತಿನ್ನುವವರು. ಈ ದೈವಿಕ ಮಾಂಸವನ್ನು ತಿನ್ನುವ ಹಕ್ಕು ಶೂದ್ರರಿಗೆ ಇಲ್ಲ. ಅವರು ಯಜ್ಞದಲ್ಲಿ ಭಾಗವಹಿಸುವ ಹಾಗೆಯೂ ಇಲ್ಲ!
ಇನ್ನು ಯಜ್ಞದ ಹಕ್ಕೂ ಇಲ್ಲದ, ಕರ್ತವ್ಯವೂ ಇಲ್ಲದ ಶೂದ್ರರು ಮತ್ತು ಅಸ್ಪೃಶ್ಯರು ಏನು ಮಾಡಬೇಕು?
ಶೂದ್ರರು ಯಜ್ಞವಿಲ್ಲದೆ ವಧೆ ಮಾಡಲಾದ ಪಶುವಿನ ‘ರಾಕ್ಷಸೀ’ ಮಾಂಸ ತಿನ್ನುವುದು ಸಹಜವಾಗಿತ್ತು. ಎಲ್ಲ ರೀತಿಯಿಂದಲೂ ತುಳಿತಕ್ಕೊಳಗಾದ ಅಸ್ಪೃಶ್ಯರು ಸತ್ತದನದ ಮಾಂಸ ತಿನ್ನುವುದು ಅನಿವಾರ್ಯವಾಯಿತು.
ವೇದಪ್ರಣೀತ ಮಂತ್ರಗಳ ಮೂಲಕ ಮನು ಮಾಂಸವನ್ನು ದೈವೀ ಮತ್ತು ರಾಕ್ಷಸೀ ಮಾಂಸವಾಗಿ ವಿಂಗಡಿಸುವ ಮೂಲಕ ಶೂದ್ರರ ಮಾಂಸಾಹಾರದಲ್ಲಿ ಕೀಳರಿಮೆಯ ವಿಷ ಬೆರೆಸಿದ!
ಈ ವಿಷ ಇಂದಿಗೂ ಜೀವಂತವಾಗಿದೆ. ಶೂದ್ರರು ತಾವು ಮಾಂಸಾಹಾರಿಗಳು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಕೆಲವರು ಧೈರ್ಯ ಮಾಡಿದರೂ ಶನಿವಾರ ತಿನ್ನುವುದಿಲ್ಲ, ಮಂಗಳವಾರ ತಿನ್ನುವುದಿಲ್ಲ ಎಂದು ಹೇಳುತ್ತ, ಆ ದಿನ ತಾವು ಶುದ್ಧ ಶಾಖಾಹಾರಿ ಎಂದು ತೃಪ್ತಿಪಡುತ್ತಾರೆ. ಇವರ ಯಾವುದೇ ಧಾರ್ಮಿಕ ಭಾವನೆಗಳಿರಬಹುದು, ಶೂದ್ರರ ಮಾಂಸಾಹಾರದಲ್ಲಿ ಮನು ಹಾಕಿದ ಕೀಳರಿಮೆಯ ವಿಷ ಇನ್ನೂ ಕ್ರಿಯಾಶೀಲವಾಗಿದೆ.
ಈ ಕೀಳರಿಮೆಯನ್ನು ಅಳಿಸಲು ಯುವ ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಂಸಾಹಾರದ ಪಟಗಳನ್ನು ಪ್ರದರ್ಶಿಸುವುದು ಶ್ಲ್ಯಾಘನೀಯವಾದುದು. ಈ ಪ್ರಯತ್ನಕ್ಕೆ ನಾನು “ಸಾಮಾಜಿಕ ಸೃಜನಶೀಲತೆ” ಎಂದು ಕರೆಯುತ್ತೇನೆ. (ಕುವೆಂಪು ಅವರ ಪಾಲಕರ ಮನೆಯಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ಪಾತ್ರೆಗಳಿದ್ದವು. ಮಾಂಸಾಹಾರ ತಯಾರಿಸುವ ಪಾತ್ರೆಗಳಲ್ಲಿ ಶಾಕಾಹಾರ ತಯಾರಿಸುತ್ತಿರಲಿಲ್ಲ.)
ಬಸವಣ್ಣನವರು ವೈದಿಕರ ಈ ಷಡ್ಯಂತ್ರವನ್ನು 12ನೇ ಶತಮಾನದಲ್ಲೇ ಬಯಲಿಗೆಳೆದಿದ್ದಾರೆ. “ಸತ್ತುದನೆಳೆವನೆತ್ತಳ ಹೊಲೆಯ? ಹೊತ್ತುತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ” ಎಂದು ಮನುಧರ್ಮಶಾಸ್ತ್ರವನ್ನು ಅಲ್ಲಗಳೆದಿದ್ದಾರೆ.
ಯಜ್ಞಾರ್ಥಂ ಪಶವಃ ಸೃಷ್ಟಾಃ ಸ್ವಯಮೇವ ಸ್ವಯಂಭುವಾ|
ಯಜ್ಞಸ್ಯ ಭೂತ್ಯೈ ಸರ್ವಸ್ಯ ತಸ್ಮಾಧ್ಯಜ್ಞೇ ವಧೋsವಧಃ||
(ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶುವಧೆಯು ಪಾಪಕರವಲ್ಲ.)
-ಮನುಸ್ಮೃತಿ 5 – 39
ಮನು ಅಷ್ಟಕ್ಕೇ ನಿಲ್ಲುವುದಿಲ್ಲ. ಯಜ್ಞದಲ್ಲಿ ಮಾಡುವ ಪಶುಬಲಿ ಪಾಪ ಅಲ್ಲ ಎಂದು ಪ್ರತಿಪಾದಿಸುತ್ತಾನೆ. ಇದರರ್ಥ ಯಜ್ಞ ವಿರಹಿತ ಪಶುವಧೆ ಪಾಪಕರವಾದುದು. ಹೀಗೆ ಶೂದ್ರರ ಮಾಂಸಾಹಾರದಲ್ಲಿ ಪಾಪಪ್ರಜ್ಞೆಯನ್ನು ತುಂಬುತ್ತಾನೆ.
ಶೂದ್ರರಿಗೆ ಯಜ್ಞದ ಮಾಂಸವನ್ನೂ ಕೊಡುವುದಿಲ್ಲ, ಮಾಂಸವನ್ನು ಎಂಜಾಯ್ ಮಾಡಲೂ ಬಿಡುವುದಿಲ್ಲ! ಶೂದ್ರರು ಪಾಪಪ್ರಜ್ಞೆಯಿಂದಲೇ ಮಾಂಸ ತಿನ್ನುವ ಹಾಗೆ ಮಾಡಿದ್ದಾನೆ.
ಯಾ ವೇದವಿಹಿತಾ ಹಿಂಸಾ ನಿಯತಾಸ್ಮಿಂಶ್ಚರಾಚರೇ|
ಅಹಿಂಸಾಮೇವ ತಾಂ ವಿದ್ಯಾದ್ವೇದಾದ್ಧರ್ಮೋ ಹಿ ನಿರ್ಬಭೌ||
(ವೇದವಿಹಿತವಾದ ಹಿಂಸೆಯು ಶಾಸ್ತ್ರ ನಿಯಮ ರೀತ್ಯಾ ನಡೆಯುವುದರಿಂದ ಅದನ್ನು ಅಹಿಂಸೆ ಎಂದೇ ಪರಿಗಣಿಸಬೇಕು. ಏಕೆಂದರೆ ವೇದಗಳಿಂದಲೇ ಧರ್ಮವು ಹುಟ್ಟಿದೆ.)
-ಮನುಸ್ಮೃತಿ 5 -44
ಈಗ ಮನು, ಯಜ್ಞ ಪಶುಬಲಿಯ ಮಾಂಸವನ್ನು ಅಹಿಂಸೆ ಎಂದು ಸಾರುತ್ತಾನೆ. ಏಕೆಂದರೆ ವೇದ ಶಾಸ್ತ್ರಗಳ ಆಧಾರದ ಹಿಂಸೆಯು ಅಹಿಂಸೆಯಾಗಿ ಪರಿವರ್ತನೆ ಆಗುವ ಮಿಥ್ ಸೃಷ್ಟಿಸುತ್ತಾನೆ. ಆ ಮೂಲಕ ಶೂದ್ರರು ಮಾಂಸವನ್ನು ಹಿಂಸಾ ಪ್ರಜ್ಞೆಯಿಂದ ‘ಅತೃಪ್ತರಾಗಿ’ ತಿನ್ನುವಂತೆ ಮಾಡುತ್ತಾನೆ. ಅದೇ ಯಜ್ಞ ಪ್ರಣೀತ ಮಾಂಸವನ್ನು ವೈದಿಕರು ಅಹಿಂಸಾ ಪ್ರಜ್ಞೆಯಿಂದ ತೃಪ್ತರಾಗಿ ತಿನ್ನುವಂತೆ ಸೂಚಿಸುತ್ತಾನೆ.
ನಾಕೃತ್ವಾ ಪ್ರಾಣಿನಾಂ ಹಿಂಸಾಂ ಮಾಂಸಮುತ್ಪದ್ಯತೇ ಕ್ವಚಿತ್|
ನ ಚ ಪ್ರಾಣಿವಧಃ ಸ್ವರ್ಗ್ಯಸ್ತಸ್ಮಾನ್ಮಾಂಸಂ ವಿವರ್ಜಯೇತ್||
(ಪ್ರಾಣಿಗಳ ಹಿಂಸೆ ಮಾಡಲಾರದೇ ಮಾಂಸವು ಸಿಗುವುದಿಲ್ಲ. ಆದರೆ ಮಾಂಸದ ಆಶೆಗಾಗಿ ಮಾಡುವ ಪ್ರಾಣಿವಧೆಯಿಂದ ಸ್ವರ್ಗವು ಸಿಗುವುದಿಲ್ಲ. ಆದ್ದರಿಂದ ಮಾಂಸ ತಿನ್ನುವುದನ್ನೇ ತ್ಯಜಿಸಬೇಕು.)
-ಮನುಸ್ಮೃತಿ 5 -48
ಶೂದ್ರರಿಗೆ ಯಜ್ಞದ ಮಾಂಸ ಸಿಗಲಾರದು. ಅವರು ಯಜ್ಞವಿರಹಿತ ಮಾಂಸವನ್ನೇ ತಿನ್ನಬೇಕು. ಆಗ ಅದು ಯಜ್ಞ ಪ್ರಣೀತ ಅಹಿಂಸಾ ಮಾಂಸವಾಗದೆ, ಯಜ್ಞ ವಿರಹಿತ ಹಿಂಸಾ ಮಾಂಸವಾಗುತ್ತದೆ. ಅಂಥ ಮಾಂಸ ತಿನ್ನುವ ಶೂದ್ರರಿಗೆ ಸ್ವರ್ಗ ಸಿಗುವುದಿಲ್ಲ. ಸ್ವರ್ಗ ಸಿಗಬೇಕೆಂದರೆ ಮಾಂಸಾಹಾರ ಬಿಡಬೇಕು ಎಂದು ಸೂಚಿಸುತ್ತಾನೆ. ಹೀಗೆ ಮನುಸ್ಮೃತಿ ತುಳಿತಕ್ಕೊಳಗಾದವರಿಗೆ ಸದಾ ಮೋಸ ಮಾಡುವ ಧರ್ಮಗ್ರಂಥವಾಗಿದೆ.
ಮಾಂಸ ಭಕ್ಷಯಿತಾಮುತ್ರ ಯಸ್ಯ ಮಾಂಸಮಿಹಾದ್ಮ್ಯಹಂ|
ಏತನ್ಮಾಂಸನ್ಯ ಮಾಂಸತ್ವಂ ಪ್ರವದಂತಿ ಮನೀಷಿಣಃ||
(ಈ ಲೋಕದಲ್ಲಿ ನಾನು ಯಾವ ಪ್ರಾಣಿಯನ್ನು ಕೊಂದು, ನಾನದರ ಮಾಂಸವನ್ನು ತಿನ್ನುವೆನೋ, ಆ ಪ್ರಾಣಿಯು ಪರಲೋಕದಲ್ಲಿ ನನ್ನನ್ನು ಹಿಂಸಿಸಿ ತಿನ್ನುವುದು ಎಂದು ಮಾಂಸ ತಿನ್ನುವವರ ಬಗ್ಗೆ ಪ್ರಾಜ್ಞರು ವಿವರಣೆ ನೀಡುತ್ತಾರೆ.)
-ಮನುಸ್ಮೃತಿ 5 – 55
ಯಜ್ಞದ ಬಲಿಯ ಮಾಂಸಾಹಾರಿಗಳಾದ ಸವರ್ಣೀಯರಿಗೆ ಯಾವುದೇ ರೀತಿಯ ಪಾಪ ಬಾಧಿಸದೆ, ಅವರು ನಿಧನರಾದ ಕೂಡಲೆ ಸ್ವರ್ಗ ಪ್ರಾಪ್ತಿ ಯಾಗುವುದು. ಆದರೆ ಶೂದ್ರರು ಯಜ್ಞ ವಿರಹಿತ ಪ್ರಾಣಿಯ ಮಾಂಸ ತಿಂದರೆ, ಸತ್ತು ಪರಲೋಕ ಸೇರಿದ ಮೇಲೆ ಆ ಪ್ರಾಣಿ ಬಂದು ಚಿತ್ರಹಿಂಸೆ ನೀಡುತ್ತ ಅವನನ್ನು ತಿನ್ನುವುದು ಎಂದೂ ಮನು ಭಯ ಹುಟ್ಟಿಸುತ್ತಾನೆ.
ಹೀಗೆ ಶೂದ್ರರು ಮತ್ತು ಅಸ್ಪೃಶ್ಯರು ಸಹಸ್ರಾರು ವರ್ಷಗಳ ವರೆಗೆ ಭಯ ಮತ್ತು ಪಾಪಪ್ರಜ್ಞೆಯೊಂದಿಗೆ ಮಾಂಸಾಹಾರಿಗಳಾಗಿರಬೇಕು, ಇಲ್ಲವೆ ಶಾಕಾಹಾರಿಗಳಾಗಿರಬೇಕು ಎಂಬ ಷಡ್ಯಂತ್ರ ಹೂಡುತ್ತಾನೆ.
ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ|
ಪ್ರವೃತ್ತಿ ರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ||
(ಮಾಂಸಭಕ್ಷಣದಲ್ಲಿ ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸ್ವಾಭಾವಿಕವಾದುದು ಹಾಗೂ ಸಹಜ ಪ್ರವೃತ್ತಿಯು. ಆದರೆ ಇವುಗಳಲ್ಲಿ ಪ್ರವೃತ್ತಿಗಿಂತ, ಇವುಗಳ ನಿವೃತ್ತಿಯೇ ಮಹಾಫಲದಾಯಕವಾದದ್ದು.)
-ಮನುಸ್ಮೃತಿ 5 – 56
ಕೊನೆಗೆ ಮನು ಹೀಗೆ ಉಲ್ಟಾ ಹೊಡೆಯುತ್ತಾನೆ. ಈ ಪ್ರಕಾರ ಭರತಖಂಡದ ಶೇಕಡಾ 90 ಜೀವಗಳ ಜೊತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮೋಸ ಮಾಡಿದ್ದಾನೆ.
ಸರ್ವಂ ಸ್ವಂ ಬ್ರಾಹ್ಮಣಸ್ಸೇದಂ ಯತ್ಕಿಂಚಿಜ್ಜಗತೀಗತಂ|
ಶ್ರೇಷ್ಠ್ಯೇ ನಾಭಿಜನೇನೇದಂ ಸರ್ವಂ ವೈ ಬ್ರಾಹ್ಮಣೋsರ್ಹತಿ||
(ಈ ಭೂಮಿಯಲ್ಲಿರುವುದೆಲ್ಲವೂ ಬ್ರಾಹ್ಮಣನದಾಗಿದೆ. ಶ್ರೇಷ್ಠವಾದ ಜನ್ಮವನ್ನು ಪಡೆದದ್ದರಿಂದ ಇದೆಲ್ಲವನ್ನೂ ಹೊಂದಲು ಅವನು ಅರ್ಹನಾಗುತ್ತಾನೆ.)
-ಮನುಸ್ಮೃತಿ 1 – 100
ಇದೆಲ್ಲ ಬುದ್ಧ ಬರುವವರೆಗೆ ನೂರಕ್ಕೆ ನೂರರಷ್ಟು ಜೋರಾಗಿ ನಡೆಯಿತು. ಆದರೆ ಬುದ್ಧನ ಮುಂದೆ ಇವರ ಆಟ ಮಂದವಾಯಿತು.
ಭೂಮಿಯಲ್ಲಿರುವುದೆಲ್ಲ ಬ್ರಾಹ್ಮಣನದೇ ಆದ ಹಾಗೆ ಇತ್ತು. ಅವರು ಯಜ್ಞಕ್ಕಾಗಿ ಪಶು ಸಾಕಣೆ ಮಾಡುತ್ತಿದ್ದಿಲ್ಲ. ಶೂದ್ರರ ಹಟ್ಟಿಗಳಿಂದ ಅವರ ಮುಂದೆಯೆ ಪಶು ಸಾಗಣೆ ಮಾಡುತ್ತಿದ್ದರು. ರಾಜನು ವರ್ಷ ಕಾಲ ಯಜ್ಞ ಮಾಡುತ್ತಿದ್ದ. ಆಗ ಭಟರು ಶೂದ್ರರ ಹಟ್ಟಿಗಳಿಂದ ಪ್ರತಿ ದಿನ ಪಶುಗಳನ್ನು ಹೇಳದೆ ಕೇಳದೆ ಹಿಡಿದುಕೊಂಡು ಹೋಗುತ್ತಿದ್ದರು. ಯಜ್ಞದ ವಿಚಾರದಲ್ಲಿ ಯಾರೂ ಏನೂ ಹೇಳುವ ಹಾಗಿರಲಿಲ್ಲ.
ಪಾಳೆಯಗಾರರು ಯಜ್ಞದ ಡಂಗುರ ಸಾರಿದಾಗೆಲ್ಲ ತಮ್ಮ ದನಗಳಿಗೆ ಕುತ್ತು ಬಂತೆಂದು ರೈತಾಪಿ ಜನರು ಒಬ್ಬರಿಗೊಬ್ಬರು ತಬ್ಬಿಕೊಂಡು ಅಳುತ್ತಿದ್ದರು.
ಈ ಯಜ್ಞ ಹಿಂಸೆಯ ವಿರುದ್ಧ ಮೊದಲಿಗೆ ಧ್ವನಿ ಎತ್ತಿದವನೇ ಬುದ್ಧ. ಬಹುಜನರಾದ ಶೂದ್ರರು ಅಸ್ಪೃಶ್ಯರಿಗೆ ಬುದ್ಧನ ಧ್ವನಿಯಲ್ಲಿ ವಿಮೋಚನೆಯ ಬೆಳಕು ಕಂಡಿತು.
ಬುದ್ಧನ ಧ್ವನಿಗೆ ಇಡೀ ಭರತಖಂಡ ಸ್ಪಂದಿಸಿತು. ಬೌದ್ಧಧರ್ಮ ಬೆಳೆಯತೊಡಗಿತು. ವೈದಿಕರು ಮೊದಲಬಾರಿಗೆ ಭಯಪಟ್ಟರು. ಯಜ್ಞ ಹಿಂಸೆಯ ವಿರುದ್ಧ ಜನ ಜಾಗೃತರಾದರು. ವೈದಿಕರು ತಮಗೆ ಪ್ರಿಯವಾದ ಯಜ್ಞ ಬಲಿಯ ಮಾಂಸವನ್ನು ತಿನ್ನಲಾರದಂಥ ವಾತಾವರಣ ಸೃಷ್ಟಿಯಾಯಿತು. ಅವರು ಕ್ರಮೇಣ ತಮ್ಮ ಆಹಾರ ಪದ್ಧತಿ ಯನ್ನು ಬದಲಿಸಿಕೊಂಡರು. (12ನೇ ಶತಮಾನದಲ್ಲೂ ಯಜ್ಞಹಿಂಸೆ ಮುಂದುವರಿದ ಬಗ್ಗೆ ಬಸವಣ್ಣನವರ ವಚನಗಳ ಆಧಾರವಿದೆ.) ಶಾಕಾಹಾರಿಗಳಾದರು. ನಂತರ ಮಾಂಸಾಹಾರಿಗಳಾದ ಶೂದ್ರರನ್ನು ಮತ್ತು ಅಸ್ಪೃಶ್ಯರನ್ನು ಮೌನವಾಗಿಯೆ ಕೀಳಾಗಿ ಕಾಣತೊಡಗಿದರು.
ಬಡವರ ಆರ್ಥಿಕ ಶಕ್ತಿಯನ್ನು ಹಾಳುಮಾಡುತ್ತಿದ್ದ ಯಜ್ಞ ಹಿಂಸೆಯನ್ನು ಬುದ್ಧ ವಿರೋಧಿಸಿದ ಹೊರತಾಗಿ ಮಾಂಸಾಹಾರ ವಿರೋಧಿಸಲಿಲ್ಲ. ಏಕೆಂದರೆ ಅವನ ಉಪಾಸಕರೆಲ್ಲ ಮಾಂಸಾಹಾರಿಗಳೇ ಆಗಿದ್ದರು. ಶಾಕಾಹಾರವು ಬೌದ್ಧಧರ್ಮದ ನಿರ್ದೇಶಿತ ತತ್ತ್ವಗಳಲ್ಲಿ ಇದೆಯೆ ಹೊರತಾಗಿ ದೈನಂದಿನ ಬದುಕಿನಲ್ಲಿಲ್ಲ.
ಬೌದ್ಧ ಭಿಕುಗಳು ಆಹಾರದ ವಿಚಾರದಲ್ಲಿ ಉಪಾಸಕರಿಗೆ ತೊಂದರೆ ಕೊಡುವ ಹಾಗಿಲ್ಲ. ಅವರು ತಾವು ಉಣ್ಣುವ ಆಹಾರವನ್ನು ಭಿಕ್ಷಾಪಾತ್ರೆಯಲ್ಲಿ ಹಾಕಿದಾಗ ಅದನ್ನು ಸ್ವೀಕರಿಸಬೇಕು. ಭಿಕುಗಳಿಗೆ ಅದು ಮಾಂಸಾಹಾರವೂ ಅಲ್ಲ, ಶಾಕಾಹಾರವೂ ಅಲ್ಲ. ಅದು ಕೇವಲ ಆಹಾರ ಮಾತ್ರ. ಹೀಗೆ ಆಹಾರವನ್ನು ಡಿಫೈನ್ ಮಾಡಿದ ಬುದ್ಧ, ಜಗತ್ತಿನ ಮೊದಲ ತರ್ಕಜ್ಞಾನಿಯೂ ದಾರ್ಶನಿಕನೂ ಆಗಿದ್ದಾನೆ.
80 ವರ್ಷ ದಾಟಿದ ಬುದ್ಧ ವಜ್ಜಿಗಳ ನಾಡಿಂದ ಕುಶನಾರಾಗೆ ಹೋಗುವ ವೇಳೆಯಲ್ಲಿ ಕಮ್ಮಾರ ಚುಂದನ “ಸೂಕರಮದ್ದ” ಎಂಬ ಮಾಂಸಾಹಾರ ಭಿಕ್ಷೆಯೆ ಬುದ್ಧನ ಕೊನೆಯ ಆಹಾರವಾಯಿತು.
ಕುಶನಾರಾಗೆ ಹೋಗುವುದರೊಳಗಾಗಿ ಬುದ್ಧ ಬೇನೆಬಿದ್ದ. ಮಹಾಪರಿನಿರ್ವಾಣದ ಕೊನೆಯ ಕ್ಷಣದವರೆಗೂ ಬುದ್ಧನಿಗೆ ಕಮ್ಮಾರ ಚುಂದನದೇ ಚಿಂತೆಯಾಗಿತ್ತು. ಎಲ್ಲಿ ಭಿಕುಗಳು, ಉಪಾಸಕರು ಕಮ್ಮಾರ ಚುಂದನಿಗೆ ಅಪಮಾನ ಮಾಡುವರೋ ಎಂಬ ಚಿಂತೆ.
ಜ್ಞಾನೋದಯದ ಸಂದರ್ಭದಲ್ಲಿ ಸುಜಾತಾ ಕೊಟ್ಟ ಖೀರಿಗೂ ಮಹಾಪರಿನಿರ್ವಾಣಕ್ಕೆ ಮೊದಲು ಕಮ್ಮಾರ ಚುಂದ ಕೊಟ್ಟ “ಸೂಕರಮದ್ದ”ಕ್ಕೂ ಒಂದೇ ತೆರನಾದ ಮಹತ್ವವಿದೆ ಎಂಬುದನ್ನು ಭಿಕುಗಳಿಗೆ ಮನವರಿಕೆ ಮಾಡಿದ. ಇದು ಬುದ್ಧನ “ಧಮ್ಮಚಿಂತೆ”!
ಮಹಾಪರಿನಿರ್ವಾಣದ ಕೊನೆಯ ಕ್ಷಣದಲ್ಲಿ ದುಃಖತಪ್ತ ಆನಂದ ಕೇಳಿದ “ಸಂಘಕ್ಕೆ ಯಾರನ್ನು ಮುಖ್ಯಸ್ಥರನ್ನಾಗಿ ಮಾಡಬೇಕು” ಎಂದು. ಆಗ ಬುದ್ಧ ಹೇಳದ, “ಅದನ್ನು ಸಂಘ ನಿರ್ಧರಿಸುತ್ತದೆ” ಎಂದು.
ಹೀಗೆ ಭಾರತದಲ್ಲಿ ಪ್ರಜಾಪ್ರಭುತ್ವದ ಜನನವಾಯಿತು.
ಇದು ಬೌದ್ಧ ಧಮ್ಮ!!
ಫುಡ್ ಫ್ಯಾಸಿಸ಼ಂ ಹೊಡೆದು ಹಾಕಿದ ಬುದ್ಧನ ರೀತಿ ಅನನ್ಯವಾಗಿದೆ. ಆತ ಹೇಳಿದ್ದೆಲ್ಲವೂ ವೈದಿಕ ವಿರೋಧಿಯಾಗಿತ್ತು. ಅಂತೆಯೆ ಕಾಲಾನುಕ್ರಮದಲ್ಲಿ ವೈದಿಕರು ಬೌದ್ಧರ ಕೊಲೆ ಮಾಡಿ ಬೌದ್ಧ ಸಾಹಿತ್ಯ ಸುಟ್ಟರು!
-ರಂಜಾನ್ ದರ್ಗಾ