Homeಅಭಿಮನ್ಯುವಿಶ್ಲೇಷಣೆ | ಸೋಲಿನ ಭೀತಿ - ಮೋದಿಗೆ ನೆನಪಾಯ್ತು ಮೀಸಲಾತಿ

ವಿಶ್ಲೇಷಣೆ | ಸೋಲಿನ ಭೀತಿ – ಮೋದಿಗೆ ನೆನಪಾಯ್ತು ಮೀಸಲಾತಿ

ಮೋದಿಯವರು ಯಾರ ಪರ-ಯಾರ ವಿರುದ್ಧ, ಅವರ ಉದ್ದೇಶ ಜನರನ್ನು ಮತ್ತೊಮ್ಮೆ ಮೋಸ ಮಾಡುವುದಷ್ಟೇ ಎಂಬುದು ಅವರ ಈ ನಡವಳಿ ಮತ್ತು ಮಾತುಗಳಿಂದ ಸ್ಪಷ್ಟವಾಗುತ್ತದೆ. ಸುಳ್ಳುಗಳಿಗೆ ಬಹುವರ್ಷ ಆಯಸ್ಸು ಇರುವುದಿಲ್ಲ. ಅದು ಮೋದಿಗೂ ಗೊತ್ತಿದೆ; ಗೊತ್ತಾಗುತ್ತಿದೆ; ಗೊತ್ತಾಗಲಿದೆ. ವಿಶ್ವವೇ ಬೆರಗಾಗುವಂತೆ ದೇಶವನ್ನು ಮುನ್ನಡೆಸಿದ್ದೇನೆ ಎಂದು ಬೀಗುವ ಪ್ರಧಾನಿ ಮೋದಿ ವರ್ಚಸ್ಸು ಈಗ ಕುಸಿದಿದೆ. ಈ ಕುರಿತು 'ಅಭಿಮನ್ಯು' ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡ ವಿಶ್ಲೇಷಣೆ ಬರೆಹ ಇಲ್ಲಿದೆ.

ನಿಂತ ನೆಲ ಅದುರತೊಡಗಿದರೆ ಎಂತಹ ದೊಡ್ಡ ನಾಯಕನೂ ಸ್ವಘೋಷಿತ ವಿಶ್ವಗುರುವೂ ಹುಲ್ಲುಕಡ್ಡಿಯೋ ಅಥವಾ ಜಿರಲೆಯೋ ಯಾವುದಾದರೂ ಸೈ ಎಂಬ ಆಸರೆಯ ಮೊರೆ ಹೋಗುತ್ತಾನೆ. 10 ವರ್ಷಗಳ ಕಾಲ ದೇಶದ ಚುಕ್ಕಾಣಿ ಹಿಡಿದು, ವಿಶ್ವವೇ ಬೆರಗಾಗುವಂತೆ ದೇಶವನ್ನು ಮುನ್ನಡೆಸಿದ್ದೇನೆ ಎಂದು ಬೀಗುವ ಪ್ರಧಾನಿ ನರೇಂದ್ರ ಮೋದಿಯವರದ್ದು ಈಗ ಇದೇ ಸ್ಥಿತಿ.

ಚುನಾವಣೆ ಘೋಷಣೆಯಾಗುವ ಹೊತ್ತಿಗೆ 400 ಗೆದ್ದು ಮತ್ತೆ ಪ್ರಧಾನಿಯಾಗುತ್ತೇನೆ; ದೇಶಕ್ಕೆ ಮೋದಿಯೇ ಗ್ಯಾರಂಟಿ ಎಂದು ಕೊಚ್ಚಿಕೊಳ್ಳುತ್ತಿದ್ದವರು, ದೇಶದ ವಿಷಯ ಬಿಟ್ಟು ‘ದ್ವೇಷ’ದ ಅಲಗು ಹಿಡಿದು ಇರಿಯತೊಡಗಿದ್ದಾರೆ. 10 ವರ್ಷಗಳಲ್ಲಿ ನಿಜಕ್ಕೂ ಅಭಿವೃದ್ಧಿ ಮಾಡಿದ್ದರೆ, ಬೆಲೆ ಏರಿಕೆಯನ್ನು ತಡೆಹಿಡಿದಿದ್ದರೆ, ಜನ ಸಾಮಾನ್ಯರ ಬದುಕನ್ನು ನೆಮ್ಮದಿಯ ಗುಡಿಯೊಳಗೆ ಇರುವಂತೆ ಮಾಡಿದ್ದರೆ ಇಷ್ಟೆಲ್ಲ ಪರಿತಾಪ ಪಡುವ ಅಗತ್ಯವಿರಲಿಲ್ಲ. ಅದರಲ್ಲೂ ದೇಶದಲ್ಲಿ ಮೊದಲ ಹಂತದ ಚುನಾವಣೆಯಾಗುವವರೆಗೂ ಮೋದಿ-ಅಮಿತ್ ಶಾ ಅವರು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದೇ ಹೇಳಿಕೊಳ್ಳುತ್ತಿದ್ದರು. ಕರ್ನಾಟಕಕ್ಕೆ ಬಂದಾಗಲೂ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿ, ನೇರ ಫಲಾನುಭವಿಗಳನ್ನು ತಲುಪಿದ ‘ಪಂಚ ಗ್ಯಾರಂಟಿ’ಗಳನ್ನು ಹಂಗಿಸಿದ್ದ ಮೋದಿಯವರು, ದೇಶಕ್ಕೆ ಮೋದಿಯೇ ಗ್ಯಾರಂಟಿ ಎಂದು ಅಬ್ಬರಿಸಿದ್ದರು.

ಯಾವಾಗ ಮೊದಲ ಹಂತದ 103 ಕ್ಷೇತ್ರಗಳ ಮತದಾನ ನಡೆದು, ಮತಗಟ್ಟೆ ಮಟ್ಟದ ವಿವರಗಳನ್ನು ಕೇಂದ್ರ ಗುಪ್ತಚರ ವಿಭಾಗದ ಮೂಲಕ ಮೋದಿ, ಅಮಿತ್ ಶಾ ಅವರನ್ನು ತಲುಪಿತೋ ಆವಾಗ ಅವರಿಬ್ಬರ ವರಸೆ ಬದಲಾಯಿತು. ಅವರ ಜತೆಗೆ, ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಹಿಡಿ-ಪುಡಿ ರಾಜಕಾರಣಿಗಳೂ ಅದನ್ನೇ ಉಸುರತೊಡಗಿದರು. 103ರಲ್ಲಿ 50ರಿಂದ 60 ಸ್ಥಾನಗಳು ಇಂಡಿಯಾ ಮೈತ್ರಿಕೂಟದ ಪಾಲಾಗಲಿದೆ ಎಂಬುದು ಅರಿವಾಗುತ್ತಿದ್ದಂತೆ, ಮೋದಿ-ಶಾ ಜೋಡಿಯ ಲೆಕ್ಕಾಚಾರ ತಲೆಕೆಳಗಾಯಿತು. ಎರಡನೇ ಹಂತಕ್ಕೆ ಮುನ್ನ ಅವರ ನಾಲಿಗೆಗಳಲ್ಲಿ ಮಾತು ನಿಲ್ಲದಾಯಿತು. ಅಭಿವೃದ್ಧಿ, ದೇಶದ ಪ್ರಗತಿ, 2047ಕ್ಕೆ ವಿಕಸಿತ ಭಾರತ ಇವೆಲ್ಲವೂ ಬದಿಗೆ ಸರಿದವು.

ಈ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ 2019ರಲ್ಲಿ ಬಂದಷ್ಟು ಸಂಖ್ಯೆ ಗೆಲ್ಲಲಾರೆವು ಎಂದು ಗೊತ್ತಿದ್ದ ಮೋದಿ-ಶಾ ಜೋಡಿ, ದಕ್ಷಿಣದ ಮೇಲೆ ಹೆಚ್ಚು ಕಣ್ಣಿಟ್ಟಿತ್ತು. ಹಾಗಾಗಿಯೇ, ತಮಿಳುನಾಡು-ಕೇರಳದಲ್ಲಿ ಇವರಿಬ್ಬರೂ ಹೆಚ್ಚು ಓಡಾಡಿದ್ದರು. ಕರ್ನಾಟಕದ ಮೇಲೂ ಸಾಕಷ್ಟು ಭರವಸೆ ಇತ್ತು. ಆದರೆ, ಕರ್ನಾಟಕದಲ್ಲಿ ಮೊದಲ ಹಂತದ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ, ದೆಹಲಿಯ ಆಸ್ಥಾನ ತಲುಪಿದ್ದ ಮಾಹಿತಿಗಳು ಈ ಜೋಡಿಯನ್ನು ಬೆಚ್ಚಿ ಬೀಳಿಸಿತ್ತು. ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸುವುದು, ತಮ್ಮ ಗ್ಯಾರಂಟಿಯನ್ನು ಮುಂದಿಡುತ್ತಿದ್ದ ಪರಿಪಾಠವನ್ನು ಮೋದಿ ಬಿಟ್ಟರು. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಪ್ರಚಾರ ಕೈಗೊಂಡ ಮೋದಿ, ಕರ್ನಾಟಕವನ್ನು ಕೇಂದ್ರೀಕರಿಸಿ ಸುಳ್ಳನ್ನು ಪೋಣಿಸತೊಡಗಿದರು. ಉತ್ತರ ಭಾರತದಲ್ಲಿ ಬಿಜೆಪಿಯ ಕೋಟೆ ಭದ್ರವಾಗಿದ್ದರೆ, ಕರ್ನಾಟಕದ ರಾಜಕಾರಣವನ್ನು ಕೇಂದ್ರೀಕರಿಸಿ, ವಾಗ್ದಾಳಿ ನಡೆಸುವ ಅವಶ್ಯಕತೆಯ ಅವರಿಗೆ ಇರುತ್ತಿರಲಿಲ್ಲ. ಪದತಳ ಕುಸಿಯುತ್ತಿದ್ದಂತೆ, ಎಚ್ಚರಗೊಂಡ ಅವರು, ದ್ವೇಷ ಬಾಣವನ್ನು ಒಂದೊಂದಾಗಿ ಬಿಡತೊಡಗಿದರು.

ಯಾವುದೇ ರಾಜಕಾರಣಿ ಇರಬಹುದು; ಅದರಲ್ಲೂ ಪ್ರಧಾನಮಂತ್ರಿಯಂತಹ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದವರು ಕೀಳು ಮಟ್ಟದ ಮಾತುಗಳನ್ನು, ಈ ಪರಿಯ ದ್ವೇಷ ಭಾಷಣವನ್ನು ಎಂದೂ ಆಡಿದ್ದಿರಲಿಲ್ಲ. ರೈತರ ಹೋರಾಟ; 700ಕ್ಕೂ ಹೆಚ್ಚು ರೈತರ ದಾರುಣ ಮರಣ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಅತ್ಯಾಚಾರ ಇವೆಲ್ಲವೂ ನಡೆದು ಹೋದವು. ಕೋವಿಡ್ ಕಾಲದಲ್ಲಿ ಸಾವಿರಾರು ಜನ ಸಾವನ್ನಪ್ಪಿದರು. ಆಗೆಲ್ಲ, ಮೌನಕ್ಕೆ ಶರಣಾಗಿದ್ದ ಮೋದಿ, ಏಕಾಏಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವನ್ನು ಕಿತ್ತುಕೊಳ್ಳಲಿದೆ ಎಂದು ಹಲುಬತೊಡಗಿದರು. ರೈತರು ಸಾವೀಗೀಡಾದಾಗಲೂ, ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ವಾಹನ ಹತ್ತಿಸಿ ಬಿಜೆಪಿ ಸಂಸದನೊಬ್ಬ ಕೊಲೆ ಮಾಡಿದಾಗಲೂ ಮೌನಿ ಬಾಬಾ ಮಾತನಾಡರಲಿಲ್ಲ. ಆಗೆಲ್ಲ, ಹೆಣ್ಣುಮಕ್ಕಳ ಮಾಂಗಲ್ಯವನ್ನು ಕಿತ್ತುಕೊಂಡಿದ್ದು ಇದೇ ಬಿಜೆಪಿಯೇ ಆಗಿತ್ತು. ಚುನಾವಣೆ ಹೊತ್ತಿನಲ್ಲಿ ಮಾತ್ರ ಮೋದಿಗೆ ಮಾಂಗಲ್ಯ ನೆನಪಾಗಿದ್ದು, ಮತಕ್ಕಾಗಿಯೇ ವಿನಃ ಹೆಣ್ಣುಮಕ್ಕಳ ಕಾಳಜಿಯಿಂದಲ್ಲ.

ಸುದೀರ್ಘ ಅವಧಿ ಮುಖ್ಯಮಂತ್ರಿ, 10 ವರ್ಷ ನಿರಂಕುಶ ಪ್ರಧಾನಿಯಾಗಿದ್ದ ಮೋದಿ, ತನ್ನ ಆಡಳಿತಾವಧಿಯ ಸಾಧನೆಗಳನ್ನು ಮುಂದಿಟ್ಟು, ತಮ್ಮ ಪಕ್ಷದ ಪ್ರಣಾಳಿಕೆಯ ಸಂಗತಿಗಳನ್ನು ಜನರ ಎದುರಿಗಿಟ್ಟು ಮತ ಕೇಳಬೇಕಿತ್ತು. ರಾಮಮಂದಿರದ ಸಾಧನೆಯನ್ನಾದರೂ ಬಣ್ಣಿಸಿಕೊಳ್ಳಬೇಕಿತ್ತು. ತಮ್ಮ ಪಕ್ಷದ ಪ್ರಣಾಳಿಕೆಯ ಬಗ್ಗೆ ಒಂದೇ ಒಂದು ಮಾತನಾಡದ ಮೋದಿ, ದೇಶದಲ್ಲಿ ಎರಡನೇ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಅಂದರೆ ಅದರರ್ಥ ತಮ್ಮ ಪ್ರಣಾಳಿಕೆಯಲ್ಲಿ ಬಂಡವಾಳವೇ ಇಲ್ಲವೆಂಬ ಕಾರಣಕ್ಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಉತ್ತರ ಭಾರತದ ರಾಜ್ಯಗಳಲ್ಲಿ ಮತ ಕ್ರೋಡೀಕರಣಕ್ಕೆ ಮುಂದಾಗಿರುವ ಪ್ರಧಾನಿ ಮೋದಿ, ಅದಕ್ಕಾಗಿ ಮೀಸಲಾತಿಯ ಅಸ್ತ್ರವನ್ನು ಬಳಸಿದ್ದಾರೆ. ಇದು ಅವರಿಗೆ ಇರುವ ಕೊನೆಯ ಅಸ್ತ್ರ ಕೂಡ; ಅದು ಕೂಡ ಕೈಹಿಡಿಯುವ ಸಾಧ್ಯತೆ ಕ್ಷೀಣ.

ಹೀಗೆ ಪ್ರಸ್ತಾಪಿಸುವ ಮುನ್ನ ಅದಕ್ಕೊಂದು ಭೂಮಿಕೆಯನ್ನು ಮೋದಿ ಸಿದ್ಧಪಡಿಸಿಕೊಂಡರು. ಅದೆಂದರೆ, ರಾಷ್ಟ್ರೀಯ ಹಿಂದುಳಿದ ಆಯೋಗವು ಕರ್ನಾಟಕದಿಂದ ಪಡೆದಿದೆ ಎನ್ನಲಾದ ಮುಸ್ಲಿಂ ಮೀಸಲಾತಿ ಕುರಿತು ವಿವರವನ್ನು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿರೂಪದಲ್ಲಿ ಪ್ರಕಟಿಸುವಂತೆ ನೋಡಿಕೊಂಡರು. ಕರ್ನಾಟಕದಲ್ಲಿ ಲಾಗಾಯ್ತಿನಿಂದಲೂ ಅಂದರೆ, ಮೈಸೂರು ಅರಸರ ಕಾಲ(೧೮೭೪)ದಲ್ಲಿಯೇ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲಿರಲಿಲ್ಲ. ಈ ಸಮುದಾಯವನ್ನು ಹಿಂದುಳಿದವರ್ಗ ಅಂದರೆ ಪ್ರವರ್ಗ ಬಿ ಅಡಿ ಗುರುತಿಸಲಾಗಿತ್ತು. ಕರ್ನಾಟಕದಲ್ಲಿ ರಚನೆಯಾದ ಎಲ್ಲ ಹಿಂದುಳಿದ ವರ್ಗಗಳ ಆಯೋಗಗಳು ಮುಸ್ಲಿಮರನ್ನು ಹಿಂದುಳಿದವರೇ ಎಂದು ಗುರುತಿಸಿದ್ದವು. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿಯನ್ನು ನೀಡುವ ಕ್ರಮ ಜಾರಿಗೊಳಿಸಿದ್ದರು. ಸುಮಾರು ೩೦ ವರ್ಷದ ಹಿಂದಿನ ನಿರ್ಧಾರ ಇದಾಗಿತ್ತು.

ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಮುಸ್ಲಿಮರಿಗೆ ಇದ್ದ ಮೀಸಲಾತಿಯನ್ನು ಕಿತ್ತುಕೊಂಡು ಅದನ್ನು ಒಕ್ಕಲಿಗರಿಗೆ, ಲಿಂಗಾಯತರಿಗೆ ತಲಾ ಶೇ. 2ರಂತೆ ಹಂಚುವ ತೀರ್ಮಾನ ಮಾಡಿತ್ತು. ಆ ವಿಷಯವು ಸುಪ್ರೀಂಕೋರ್ಟ್‌ನಲ್ಲಿದೆ. ಈ ಬಗ್ಗೆ, ವಿಚಾರಣೆ ನಡೆದಾಗ ಕೇಂದ್ರ ಸರ್ಕಾರ, ಅಂದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಾವುದೇ ತಕರಾರನ್ನು ಅಥವಾ ಸಮರ್ಥನೆಯನ್ನೂ ಮಾಡಿರಲಿಲ್ಲ. ಕರ್ನಾಟಕದಲ್ಲಿ 30 ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದ ಮುಸ್ಲಿಂ ಮೀಸಲಾತಿಯನ್ನು ಮೋದಿಯವರು ಈಗ ಪ್ರಸ್ತಾಪಿಸದಿದ್ದಾರೆ. ಅಲ್ಲದೇ, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಹಂಚಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ; ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಇದನ್ನು ಜಾರಿಗೊಳಿಸಿದೆ ಎಂದು ಹಳಹಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇರುವ ಸಾಂವಿಧಾನಿಕ ಮೀಸಲಾತಿಯನ್ನು ಕಿತ್ತುಕೊಳ್ಳಲು ಅಥವಾ ಅದನ್ನು ಬೇರೆಯವರಿಗೆ ಹಂಚಲು ಯಾರಿಗೂ ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಬೇಕಾದರೆ, ಸಂಸತ್‌ನಲ್ಲಿ ಕಾಯ್ದೆಗೆ ಅನುಮೋದನೆ ಪಡೆದು, ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

ಇನ್ನು ಹಿಂದುಳಿದವರ ಮೀಸಲಾತಿಯನ್ನು ಸಂಪೂರ್ಣ ಬದಲಾವಣೆ ಮಾಡಬೇಕಾದರೆ ಕೇಂದ್ರವೇ ಒಪ್ಪಿಗೆ ಸೂಚಿಸಬೇಕು. ಇರುವ ಮೀಸಲಾತಿಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಬಹುದು. ಅಷ್ಟಕ್ಕೂ ಕೇಂದ್ರದಲ್ಲಿ ಮೋದಿ ಅಧಿಕಾರ ನಡೆಸಲು ಶುರುಮಾಡಿ ೧೦ ವರ್ಷವೇ ಕಳೆದುಹೋಯಿತು. ಈ ವೇಳೆ, ಹಿಂದುಳಿದವರ ಮೀಸಲಾತಿಯ ಬಗ್ಗೆ ಪ್ರಸ್ತಾಪವನ್ನೂ ಮಾಡಿಲ್ಲ; ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸುವ ಕೆಲಸವನ್ನೂ ಮಾಡಿಲ್ಲ. ಹಿಂದುಳಿದವರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳ ಹಳೆಯದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಒಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಿದ್ದರು. ಹಾಗೆಯೇ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬೇಕೆಂಬ ಬೇಡಿಕೆ ಈಡೇರಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ.

ಆಂಧ್ರಪ್ರದೇಶ(ಅವಿಭಜಿತ) ಸರ್ಕಾರ ಒಳಮೀಸಲಾತಿ ನೀಡಿದ್ದರೂ, ಅದಕ್ಕೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿಲ್ಲ. ಅದನ್ನು ತೆರವು ಮಾಡಿಸುವ ಗೋಜಿಗೆ 10 ವರ್ಷಗಳಲ್ಲಿ ಮೋದಿ ಮನಸ್ಸು ಮಾಡಿಯೇ ಇಲ್ಲ. ಆದರೆ, ಹಿಂದುಳಿದವರು, ಪರಿಶಿಷ್ಟ ಜಾತಿ-ಪಂಗಡದವರ ಮೀಸಲಾತಿಯ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಕೊಳ್ಳದ ಮೋದಿ ಸರ್ಕಾರ, ತನ್ನ ಜತೆಗೆ ನಿಂತವರಿಗೆ ಮೀಸಲಾತಿಯ ‘ಗ್ಯಾರಂಟಿ’ ಕೊಟ್ಟಿತು. 2019ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ಬ್ರಾಹ್ಮಣ, ಆರ್ಯವೈಶ್ಯ ಹೀಗೆ ಶೇ ೪ರಷ್ಟಿರುವ ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಿತು. ಇದಕ್ಕೆ, ಲೋಕಸಭೆಯಲ್ಲಿ ಕೂಡ ಒಪ್ಪಿಗೆ ಪಡೆಯಲಿಲ್ಲ. ಸುಗ್ರೀವಾಜ್ಞೆ ಮೂಲಕ ಮೀಸಲಾತಿಯನ್ನು ಜಾರಿಗೊಳಿಸಿತು. ಚುನಾವಣೆ ಬಳಿಕ, ಅದಕ್ಕೆ ಅನುಮೋದನೆಯನ್ನು ಪಡೆಯಿತು.

ಹೀಗೆ, ಬ್ರಾಹ್ಮಣ, ವೈಶ್ಯ ಸೇರಿದಂತೆ ಮೇಲ್ಜಾತಿಯವರಿಗೆ ಅವರ ಜಾತಿ ಸಂಖ್ಯೆಗೆ ಮೀರಿದ ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ನೀಡಲಾಯಿತು. ಸಂವಿಧಾನ ಹಾಗೂ ಕೋರ್ಟ್‌ನ ಆದೇಶದ ಅನುಸಾರ ಮೀಸಲಾತಿಯ ಒಟ್ಟು ಪ್ರಮಾಣ ಶೇ. 50ನ್ನೂ ಮೀರುವಂತಿಲ್ಲ. ದಲಿತರು, ಹಿಂದುಳಿದವರು ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಮುಂದಿಟ್ಟಾಗ, ಶೇ.50 ಅನ್ನು ಮೀರುವಂತಿಲ್ಲ ಎಂಬ ಕೋರ್ಟ್‌ನ ಆದೇಶವನ್ನು ಮುಂದಿಡುವ ಕೇಂದ್ರ ಸರ್ಕಾರ, ಬ್ರಾಹ್ಮಣರ ಓಲೈಕೆಯಲ್ಲಿ ಇದನ್ನು ಮುರಿದೇ ಬಿಟ್ಟಿತು.

ಇಷ್ಟೆಲ್ಲ ಇದ್ದರೂ, ಈಗ ಹಿಂದುಳಿದವರ ಮತ್ತು ಪರಿಶಿಷ್ಟ ಜಾತಿ, ಪಂಗಡದವರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡಲಾಗುತ್ತದೆ ಎಂದ ಮೋದಿಯವರ ಹಳಹಳಿಕೆಯ ಹಿಂದಿನ ಹತಾಶೆ ಮತ್ತು ಹಪಹಪಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿ ಕೂಟದ ಪಕ್ಷಕ್ಕೆ ಮತ ಬೀಳದಿರಲಿ, ಮತ ಒಡೆಯಲಿ ಎಂಬುದಷ್ಟೇ ವಿನಃ ನೈಜ ಕಾಳಜಿಯಿಲ್ಲ. ಸೋಲಿನ ಭಯ ಹೆಚ್ಚಾಗುತ್ತಿದ್ದಂತೆ, ಮೀಸಲಾತಿ ಪ್ರಶ್ನೆಯನ್ನು ಮುನ್ನೆಲೆಗೆ ತಂದು, ಮುಸ್ಲಿಮರನ್ನು ಶತ್ರುಗಳೆಂಬಂತೆ, ಕಾಂಗ್ರೆಸ್ ಅವರ ರಕ್ಷಕರೆಂಬಂತೆ ಬಿಂಬಿಸಲು ಯತ್ನಿಸಲಾಗುತ್ತಿದೆ.

ಮೀಸಲಾತಿ ವಿರೋಧಿ ಬಿಜೆಪಿ

ಮೀಸಲಾತಿ ವಿಷಯದಲ್ಲಿ ಬಿಜೆಪಿಯದ್ದು ಯಾವತ್ತೂ ಶತವಿರೋಧಿ ನಿಲುವು. ಬಿಜೆಪಿ ಕೇಂದ್ರ-ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಮುನ್ನ ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟೇ ಹೋರಾಟ ನಡೆಸಿಕೊಂಡು ಬಂದಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಮಂಡಲ್ ವರದಿಯನ್ನು ಜಾರಿಗೊಳಿಸಲು ಮುಂದಾಯಿತು. ಆಗ, ಮಂಡಲ್ ವಿರುದ್ಧ ‘ಕಮಂಡಲ’ ವಾದವನ್ನು ಮುಂದಿಟ್ಟ ಬಿಜೆಪಿ, ಆರೆಸ್ಸೆಸ್ ಅದರ ವಿರುದ್ಧ ದೇಶಾದ್ಯಂತ ಉಗ್ರ ಹೋರಾಟವನ್ನೇ ನಡೆಸಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಅವರ ಮೇಲೆಯೇ ಸೀಮೆ ಎಣ್ಣೆ ಅಥವಾ ಡೀಸೆಲ್ ಸುರಿದು ಬೆಂಕಿ ಹಚ್ಚಿ, ಆತ್ಮಹತ್ಯೆಯೆಂದು ಬಿಂಬಿಸಿ ದೇಶದ ತುಂಬ ಹಿಂಸಾತ್ಮಕ ವಾತಾವರಣ ಸೃಷ್ಟಿಸಿತು. ಕೊನೆಗೆ ಅದಕ್ಕೆ ಹಿನ್ನಡೆ ಮಾಡಿದ್ದು ಬಿಜೆಪಿಯೇ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿಯನ್ನು ನೀಡುವ ಕ್ರಮಕ್ಕೆ ಕರ್ನಾಟಕವೇ ನಾಂದಿ ಹಾಡಿತು. ಈ ಮೀಸಲಾತಿಯು ತಳ ಸಮುದಾಯದವರು ಚುನಾಯಿತ ಸಂಸ್ಥೆಗಳಲ್ಲಿ ಅಧಿಕಾರ ಹಿಡಿದು, ಕ್ರಮೇಣವಾಗಿ ಶಾಸಕ-ಸಂಸದರಾಗುವ ಮಟ್ಟಕ್ಕೆ ಬೆಳೆಯಲು ಅನುಕೂಲವಾಗಿತ್ತು. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಬಿಜೆಪಿಯೇ. ಬಿಜೆಪಿಯಿಂದ ರಾಜ್ಯಸಭೆ ಸದಸ್ಯರು, ರಾಜ್ಯಪಾಲರೂ ಆಗಿದ್ದ ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ ಅವರು ಇದರ ವಿರುದ್ಧ ಕೋರ್ಟ್‌ಗೆ ಹೋಗಿದ್ದರು. ಆದರೆ, ಅದರಲ್ಲಿ ಸಫಲರಾಗಲಿಲ್ಲ. ಹಾಗೂ ಹೀಗೂ ಕರ್ನಾಟಕದಲ್ಲಿ ಮೀಸಲಾತಿ ಲಭಿಸಿತು. ಇದನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವೂ ಜಾರಿಗೊಳಿಸಿತು.

ಇಷ್ಟು ವರ್ಷಗಳವರೆಗೆ ಇದು ಅಬಾಧಿತವಾಗಿ ನಡೆದಿತ್ತು. ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆ ವೇಳೆ, ಹಿಂದುಳಿದವರಿಗೆ ಇದ್ದ ಮೀಸಲಾತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಕೋರ್ಟ್ ಇದಕ್ಕೆ ತಡೆಯೊಡ್ಡಿತು; ಜತೆಗೆ, ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಖಾತ್ರಿ ಪಡಿಸಿಕೊಂಡ ಬಳಿಕವಷ್ಟೇ, ಮೀಸಲಾತಿ ನೀಡಬಹುದು ಎಂದು ಹೇಳಿತು. ೧೯೩೨ರ ಬಳಿಕ ಜಾತಿ ಗಣತಿ ದೇಶದಲ್ಲಿ ನಡೆಯದ ಕಾರಣ, ಇದಕ್ಕೆ ನಿಖರ ಅಂಶಗಳು ಇರಲಿಲ್ಲ. ಹೀಗಾಗಿ, ಈ ಚುನಾವಣೆಯೂ ನನೆಗುದಿಗೆ ಬಿದ್ದಿದೆ. ಇದರಲ್ಲಿ ಮಧ್ಯಪ್ರವೇಶಿಸಿ, ಹಿಂದುಳಿದವರಿಗೆ ನ್ಯಾಯ ಕೊಡಬೇಕಾದ ಕೇಂದ್ರ ಸರ್ಕಾರ ಈ ಬಗ್ಗೆಯೂ ಮೌನವಹಿಸಿದೆ.

ಹಿಂದುಳಿದ ಸಮುದಾಯಗಳ ಪಟ್ಟಿಯಲ್ಲಿರುವ ಎಲ್ಲರಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ನ್ಯಾಯ ಕೊಡಿಸುವ ಸಲುವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಜಾತಿ ಗಣತಿಯನ್ನು ನಡೆಸಿದೆ. ಅದನ್ನು ಸರ್ಕಾರ ಕೂಡ ಸ್ವೀಕರಿಸಿದೆ. ಈ ವರದಿಗೆ ಮೊದಲಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವುದು ಬಿಜೆಪಿಯೇ. ಈ ಸಮುದಾಯಗಳಿಗೆ ಮೀಸಲಾತಿ ಕೊಡಿಸಬೇಕೆಂಬ ಕಾಳಜಿ ಮೋದಿಯವರಿಗಿದ್ದರೆ ವರದಿಗೆ ಬೆಂಬಲ ನೀಡಬೇಕಿತ್ತು. ಆದರೆ, ಅದನ್ನು ಮಾಡಲಿಲ್ಲ. ಇಡೀ ದೇಶದಲ್ಲಿ ಜಾತಿಗಣತಿ ನಡೆಸಿ, ನ್ಯಾಯ ಕೊಡಿಸುವುದಾಗಿ ಕಾಂಗ್ರೆಸ್ ಹೇಳಿದಾಗ, ಜಾತಿಯ ವಿಷಬೀಜ ಬಿತ್ತುವ ಕೆಲಸ ಇದು ಎಂದು ಮೋದಿಯವರು ಟೀಕಿಸಿದರು.

ನಿಜವಾಗಿ ತಳ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂದಿದ್ದರೆ, ಜಾತಿಗಣತಿಯನ್ನು ಮಾಡಿಸಿ ಜನಸಂಖ್ಯಾವಾರು ಹಾಗೂ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯನ್ನು ಮರು ವರ್ಗೀಕರಣ ಮಾಡಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರ, ಮೀಸಲಾತಿಯ ನೈಜ ಉದ್ದೇಶ ಈಡೇರುತ್ತದೆ. ಮೀಸಲಾತಿಯಿಂದ ಹೊರಗುಳಿದಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯವೂ ಲಭಿಸುತ್ತದೆ. ಅದನ್ನು ಮಾಡುವ ಮೂಲಕ ಹಿಂದುಳಿದವರು, ಪರಿಶಿಷ್ಟರ ನೆರವಿಗೆ ನಿಲ್ಲಬೇಕಾದ ಮೋದಿಯವರು, ಬ್ರಾಹ್ಮಣರಿಗೆ ಶೇ. 10ರಷ್ಟು ಮೀಸಲಾತಿ ನೀಡುವಾಗಷ್ಟೇ ಮುತುವರ್ಜಿ ತೋರಿಸುತ್ತಾರೆ. ಮತ್ತೊಂದೆಡೆ, ಜಾತಿಗಣತಿ ಮೂಲಕ ಹಿಂದುಳಿದವರಿಗೆ ನ್ಯಾಯ ಕೊಡಿಸುವುದಾಗಿ ಹೇಳುವ ಕಾಂಗ್ರೆಸ್ ಟೀಕಿಸುತ್ತಾರೆ. ಜತೆಗೆ, ಹಿಂದುಳಿದವರು, ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂದು ಸುಳ್ಳು ಸುಳ್ಳೇ ಹೇಳುತ್ತಾರೆ.

ಮೋದಿಯವರು ಯಾರ ಪರ-ಯಾರ ವಿರುದ್ಧ, ಅವರ ಉದ್ದೇಶ ಜನರನ್ನು ಮತ್ತೊಮ್ಮೆ ಮೋಸ ಮಾಡುವುದಷ್ಟೇ ಎಂಬುದು ಅವರ ಈ ನಡವಳಿ ಮತ್ತು ಮಾತುಗಳಿಂದ ಸ್ಪಷ್ಟವಾಗುತ್ತದೆ. ಎಲ್ಲರನ್ನು ಕೆಲವು ಕಾಲ ಬಲೂನು, ಹಕ್ಕಿ, ರಾಕೆಟ್, ರಾಮನ ತೋರಿಸಿ ಮೋಸ ಮಾಡಬಹುದು; ಆದರೆ, ಎಲ್ಲರನ್ನೂ ಎಲ್ಲ ಕಾಲದಲ್ಲೂ ಎಲ್ಲ ರೀತಿಯಲ್ಲೂ ಮೋಸ ಮಾಡಲು, ಸುಳ್ಳುಗಳಿಗೆ ಬಹುವರ್ಷ ಆಯಸ್ಸು ಇರುವುದಿಲ್ಲ. ಅದು ಮೋದಿಗೂ ಗೊತ್ತಿದೆ; ಗೊತ್ತಾಗುತ್ತಿದೆ; ಗೊತ್ತಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments