ಎತ್ತಿನಹೊಳೆ ಎರಡನೆಯ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯಿಂದ ಹೇಳಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದ ಬಳಿಕ, ಹೆಬ್ಬಹಳ್ಳಿಯ 4 ನೇ ವಿತರಣಾ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
“ಇದು ಎರಡು ಹಂತದ ಯೋಜನೆ. ಮೊದಲ ಹಂತ ಉದ್ಘಾಟನೆಯಾಗಿದೆ. ಎರಡನೇ ಹಂತ 2027 ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ” ಎಂದರು.
“ಕೆಲವರು ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಕೆಲವರು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ” ಎಂದು ಹೇಳಿದರು.
“ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸಿಯೇ ತೀರುವುದೂ ಶತಸಿದ್ಧ” ಎಂದು ತಿಳಿಸಿದರು.
“ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಯೋಜನೆ ಇದಾಗಿದೆ” ಎಂದರು.
ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.