Homeಕರ್ನಾಟಕವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ

ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ

  • ವಿದ್ಯುತ್ ಪರಿವೀಕ್ಷಣಾಲಯ ಆಯೋಜಿಸಿರುವ ಜಾಗೃತಿ ಸಪ್ತಾಹಕ್ಕೆ ಎಸ್ಕಾಂಗಳಿಂದ ಪ್ರತಿ ವಿಭಾಗಕ್ಕೆ 1 ಲಕ್ಷ ರೂ. ಪಾವತಿ

ವಿದ್ಯುತ್ ಬಳಕೆ ಹೆಚ್ಚಿದಂತೆ ಸುರಕ್ಷತೆ ಕುರಿತು ಜಾಗೃತಿಯೂ ಹೆಚ್ಚಾಗಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಪರಿವೀಕ್ಷಣಾಲಯದಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿಭಾಗಾವಾರು 1 ಲಕ್ಷ ರೂ. ನೀಡುವುದಾಗಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.

ಇಂಧನ ಇಲಾಖೆಯ ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹವನ್ನು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

“ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನ ವಿದ್ಯುತ್. ವಿದ್ಯುತ್ ಬಳಕೆ ಅತ್ಯಂತ ವೇಗವಾಗಿ ವಿಸ್ತರಣೆಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಜಾಗೃತಿಯೂ ಹೆಚ್ಚಬೇಕು. ಅದಕ್ಕಾಗಿ ಸಾಮೂಹಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸಬೇಕು,” ಎಂದರು.

“ವಿದ್ಯುತ್ ಪರಿವೀಕ್ಷಣಾಲಯದಿಂದ ಆಯೋಜಿಸಿರುವ ಈ ಸುರಕ್ಷತಾ ಸಪ್ತಾಹವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ರಾಜ್ಯದ ಎಲ್ಲಾ ಎಸ್ಕಾಂಗಳಿಂದ ಪ್ರತಿ ವಿಭಾಗಾವಾರು 1 ಲಕ್ಷ ರೂ. ಒದಗಿಸಲಾಗುವುದು,” ಎಂದು ಸಲಹೆ ಮಾಡಿದರು.

“ವಿದ್ಯುತ್ ಅವಘಡಗಳನ್ನು ತಪ್ಪಿಸಲು ಜಾಗೃತಿ ಜತೆಗೆ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕಾಗುತ್ತದೆ. ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಅದಕ್ಕಾಗಿ ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು,” ಎಂದು ತಿಳಿಸಿದರು.

“ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವ ಮೂಲಕ ಹೊಸ ನೇಮಕಾತಿಗೆ ಈಗಿನ ಸರ್ಕಾರ ಒತ್ತು ನೀಡಿದೆ. ಸರ್ಕಾರಿ ಇಲಾಖೆಗಳು ಮಾತ್ರವಲ್ಲಗದೆ, ನಿಗಮ- ಮಂಡಳಿಗಳಲ್ಲಿ ಖಾಲಿ ಇರುವ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ,” ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಶಂಕರ ಎನ್. ಮಾತನಾಡಿ, “ವಿದ್ಯುತ್ ಸುರಕ್ಷತೆ ಕುರಿತಂತೆ ಸಾರ್ವಜನಿಕರು, ಇಂಧನ ಇಲಾಖೆ ಸಿಬ್ಬಂದಿ ಮತ್ತು ಗುತ್ತಿಗೆದಾರರಲ್ಲಿ ಮೊದಲು ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಪರಿವೀಕ್ಷಣಾವಯದ ಅಧಿಕಾರಿಗಳು ಜಿಲ್ಲಾಡಳಿತದ ಜತೆಗೆ ನಿಕಟ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು,” ಎಂದು ಸಲಹೆ ಮಾಡಿದರು.

ಇದೇ ವೇಳೆ ವಿದ್ಯುತ್ ಸುರಕ್ಷತೆ ಕುರಿತಂತೆ ಪ್ರಮಾಣ ಬೋಧಿಸಲಾಯಿತು. ಜತೆಗೆ ವಿದ್ಯುತ್ ಸುರಕ್ಷತಾ ಸಪ್ತಾಹದ ವೇಳೆ ಸಾರ್ವಜನಿಕರಿಗೆ ಜಾಗೃತಿ ಸಂದೇಶ ಸಾರಲಿರುವ ಎಲ್ಇಡಿ ಪರದೆ ಇರುವ ವಾಹನಗಳಿಗೆ ಚಾಲನೆ ನೀಡಲಾಯಿತು.

ವಿದ್ಯುತ್ ಪರಿವೀಕ್ಷಣಾಲಯದ ಮುಖ್ಯ ವಿದ್ಯುತ್ ಪರಿವೀಕ್ಷಣಾಧಿಕಾರಿ ಡಾ. ತೀತಿರ ಎನ್. ಅಪ್ಪಚ್ಚು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಕೆಪಿಟಿಸಿಎಲ್ ನಿರ್ದೇಶಕ (ಕಾರ್ಯಾಚರಣೆ) ವಿಶ್ವನಾಥ್ ನಾಯಕ್, ರಾಜ್ಯ ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್, ವಿದ್ಯುತ್ ಪರಿವೀಕ್ಷಣಾಲಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments