ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಮಗಳೂರು ಮೂಲದ ಎಂಟು ಭಕ್ತರು ಮೃತಪಟ್ಟಿದ್ದಾರೆ. ರಾಯರ ದರ್ಶನಕ್ಕೆ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಮೂಲದ ಭಕ್ತರು ಬೊಲೆರೋ ವಾಹನದ ಮೂಲಕ ರಾಯರ ದರ್ಶನಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬೊಲೆರೋ ವಾಹನಕ್ಕೆ ಸಿಮೆಂಟ್ ಮತ್ತು ಜಲ್ಲಿಕಲ್ಲು ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಬೊಲೆರೋ ವಾಹನದಲ್ಲಿ ಒಟ್ಟು 21 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರನ್ನು ಚಿಕ್ಕಮಗಳೂರು ಭಾಗದ ಕಣನಾಯಕನಹಳ್ಳಿಯ ಕುಮಾರ (50), ದೀಪಿಕಾ (40), ಬೆಳ್ಳಿ (5), ಬೇಲೂರು ತಾಲ್ಲೂಕಿನ ಚಟ್ಟನಹಳ್ಳಿ ಗ್ರಾಮದ ಸುನೀಲ್ (40), ಯಶೋದಾ (60), ಲೋಲಾಕ್ಷಿ, ಉದ್ದೇವ ಗ್ರಾಮದ ಪುಟ್ಟಮ್ಮ (55) ಹಾಗೂ ಮೀನಾಕ್ಷಿ ಎಂದು ಗುರುತಿಸಲಾಗಿದೆ.
21 ಜನರ ಪೈಕಿ ಆರು ಭಕ್ತರು ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಇಬ್ಬರು ಎಮಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕಾರಿಯಾಗದೇ ಉಸಿರು ಚೆಲ್ಲಿದ್ದಾರೆ. ಇನ್ನುಳಿದ 13 ಜನರಿಗೆ ಎಮಿಗನೂರು ಹಾಗೂ ಕರ್ನೂಲ್ ಸರ್ಕಾರಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


