ಸೈಕ್ಲಿಂಗ್ ಕ್ರೀಡಾಪಟುಗಳಿಗೆ ದೈನಂದಿನ ತರಬೇತಿ ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಸೈಕಲ್‌ಗಳನ್ನು ವಿತರಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಇಂದು ಬೆಂಗಳೂರಿನ ನೃಪತುಂಗ ರಸ್ತೆಯ ಯುವನಿಕಾ ಸಭಾಂಗಣದ ಮುಂಭಾಗದಲ್ಲಿ ಸುಮಾರು 35 ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಸ್ಪರ್ಧಿಸಲು ಅವಶ್ಯಕವಾಗಿರುವ ಹೈ ಎಂಡ್ ಸೈಕಲ್‌ಗಳನ್ನು ವಿತರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸೈಕಲ್‌ಗಳನ್ನು ₹2.52 ಕೋಟಿ ಮೊತ್ತದಲ್ಲಿ ಖರೀದಿಸಲಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನ ಎಸ್‌ಸಿಎಸ್‌ಪಿ ಯೋಜನೆಯಡಿ ವಿಜಯಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ 35 ಪರಿಶಿಷ್ಟ ಜಾತಿಗೆ ಸೇರಿದ ಕ್ರೀಡಾಪಟುಗಳಿಗೆ ವಿತರಿಸಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾಗುವ ನಿಟ್ಟಿನಲ್ಲಿ ಉತ್ತೇಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಈ ಹಿಂದೆ ಬರಪರಿಸ್ಥಿತಿ ಎದುರಿಸಲು ಎನ್‌ಡಿಆರ್‌ಎಫ್‌ನಿಂದ ಮುಂಚಿತವಾಗಿ ಹಣ ನೀಡಿದೆ. ನಮಗೆ ಬರಬೇಕಾದಂತ ಹಣದಲ್ಲಿ ಮುಂಗಡವಾಗಿ ನೀಡುವಂತೆ ಕೇಂದ್ರಕ್ಕೆ ಅನೇಕ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದಿಂದ ಬೇಡಿಕೆ ಇಟ್ಟಿದ್ದೇವೆ. ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಅದಕ್ಕೂ ಮೊದಲು ನಮಗೆ ಎನ್‌ಡಿಆರ್‌ಎಫ್ ನಿಂದ ಹಣ ಕೇಳಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ. ತದನಂತರ ರಾಜ್ಯದಲ್ಲಿನ ಬರ ಪರಿಸ್ಥಿತಿಯ ವರದಿ ಸಲ್ಲಿಸುತ್ತೇವೆ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿಯ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಪರಿಸ್ಥಿತಿ, ಬರದ ಪರಿಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹ, ಎಷ್ಟು ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ ಎಂಬ ಕುರಿತು ವರದಿ ಸಲ್ಲಿಸಲು ತಿಳಿಸಲಾಗಿದೆ. ವರದಿ ಬಂದ ತಕ್ಷಣ ಕೇಂದ್ರದ ಮಾನದಂಡಗಳನ್ನು ಆಧರಿಸಿ ಘೋಷಣೆ ಮಾಡಲು ಮುಂದುವರಿಯುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾನದಂಡಗಳನ್ನು ರೂಪಿಸಿದೆ. ಅದರ ಆಧಾರದ ಮೇಲೆ ಜಿಲ್ಲೆ ಅಥವಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.


